Kannadaprabha The New Indian Express
ಹಣವೊಂದು ನಾಮ ಹಲವು! ಹಣದ ಮೇಲೇಕೆ ಇಷ್ಟು ಒಲವು? 
By Rangaswamy Mookanahalli 
09 Aug 2018 12:00:00 AM IST

ಹಣವೆನ್ನುವುದು ಗಾಳಿಯಷ್ಟೇ ಬದುಕಿಗೆ ಮುಖ್ಯವಾಗಿ ಹೋಗಿದೆ. ಹಣವಿಲ್ಲದೇ ಬದುಕುವುದು ಹೇಗೆ? ನಮ್ಮ ಇಂದಿನ ಬದುಕಿನ ಒಂದು ದಿನವೂ ಹಣವಿಲ್ಲದೇ ಕಳೆಯಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ದಶಕಗಳ ಹಿಂದೆ ಯಾವುದನ್ನ ಐಷಾರಾಮ ಎಂದು ಪರಿಗಣಿಸಲಾಗಿತ್ತೋ ಇಂದು ಅದು ಅವಶ್ಯಕತೆಯಾಗಿ ಮಾರ್ಪಾಟಾಗಿದೆ. 

ಸಮಾಜ ಬದಲಾವಣೆ ಹೊಂದುತ್ತಾ ಬಂದಂತೆಲ್ಲ ಹಣದ ಮೇಲಿನ ಸಮಾಜದ ಅವಲಂಬನೆ ಬಹಳವೇ ಹೆಚ್ಚಾಗಿದೆ. ಹಿಂದೆಲ್ಲ ಬದುಕಲು ಎಷ್ಟು ಬೇಕೋ ಅಷ್ಟು ಸಂಪನ್ಮೂಲಗಳ ಬಳಕೆಯಾಗುತ್ತಿತ್ತು. ಇಂದು ಬದಲಾದ ಕಾಲಘಟ್ಟದಲ್ಲಿ ಬಳಕೆಗಿಂತ ಹೆಚ್ಚಿನ ವಸ್ತುಗಳನ್ನು ಪೋಲುಮಾಡುತ್ತಿದ್ದೇವೆ. ನಮ್ಮ ಬಳಿ ಹಣವಿದೆ, ನಾನು ದುಡಿದ ಅಥವಾ ಸಂಪಾದಿಸಿದ ಹಣ ಅದರಿಂದ ಏನು ಬೇಕೋ ಕೊಳ್ಳುತ್ತೇನೆ ಎನ್ನುವ ಅಹಂಭಾವ ಜನರಲ್ಲಿ ಹೆಚ್ಚಾಗಿದೆ. ಗಮನಿಸಿ ನೋಡಿ ಹಣವೆನ್ನುವುದು ವಸ್ತುವಿನ ಮೌಲ್ಯ ಅಳೆಯಲು ನಾವು ಮಾಡಿಕೊಂಡ ಒಂದು ಸಾಧನ ಅಷ್ಟೇ! ಹಣಕ್ಕೆ ಮೌಲ್ಯವಿಲ್ಲ, ಮೌಲ್ಯವಿರುವುದು ವಸ್ತುಗಳಿಗೆ, ಸಂಪನ್ಮೂಲಗಳಿಗೆ.

ಉದಾಹರಣೆ ನೋಡಿ ನಾವು ನೆಲವನ್ನ ಅಳೆಯಲು ಅಳತೆ ಟೇಪು ಉಪಯೋಗಿಸುತ್ತೇವೆ ಆದರೆ ನೆಲವನ್ನ ಅಳೆದ ಮೇಲೆ ನೆಲಕ್ಕೆ ಬೆಲೆಯೆಷ್ಟು ಎನ್ನುವುದನ್ನ ನಿರ್ಧರಿಸುತ್ತೇವೆ ಟೇಪಿಗಲ್ಲ. ಹಾಗೆಯೇ ಹಣವೆನ್ನುವುದು ಒಂದು ವಸ್ತುವನ್ನು ಕೊಳ್ಳಲು ಅಥವಾ ಮಾರಲು ಇರುವ ಒಂದು ವಿನಿಮಯ ಮಾಧ್ಯಮವಷ್ಟೇ. ಹೀಗಾಗಿ ಮನುಷ್ಯನ ಬಳಿ ಎಷ್ಟೇ ಹಣವಿರಲಿ ಸಂಪನ್ಮೂಲದ ಕೊರತೆ ಉಂಟಾದರೆ ಹಣ ತನ್ನ ಮೌಲ್ಯವನ್ನ ತಾನಾಗೇ ಕಳೆದುಕೊಳ್ಳುತ್ತದೆ. ಇನ್ನೊಂದು ಉದಾಹರಣೆ ನೋಡಿ, ಜಗತ್ತಿನಲ್ಲಿ ಹತ್ತು ಕಾಫಿ ಮಾಡುವಷ್ಟು ಸಂಪನ್ಮೂಲವಿದೆ ಎಂದುಕೊಳ್ಳಿ. ಹಣ ನಾವು ಸೃಷ್ಟಿಸಿದ್ದು ಐವತ್ತು ಅಥವಾ ನೂರು ಕಾಫಿಗೆ ಬೆಲೆ ಕಟ್ಟಿ ಅದನ್ನ ಕೊಳ್ಳುವಷ್ಟು ಹಣವೇನೂ ಸೃಷ್ಟಿಸಬಹದು ಆದರೆ ನೈಸರ್ಗಿಕವಾಗಿ ಅಲ್ಲಿರುವುದು ಕೇವಲ ಹತ್ತು ಕಾಫಿ ಮಾಡಬಹುದಾದ ಸಂಪನ್ಮೂಲವಷ್ಟೇ!. ಈಗ ಹೇಳಿ ಬೆಲೆಯಿರುವುದು ಹಣಕ್ಕೂ? ಸಂಪನ್ಮೂಲಕ್ಕೋ? ಹೀಗಿದ್ದೂ ನಾವು ಸಂಪನ್ಮೂಲಕ್ಕೆ ಬೆಲೆ ಕೊಡದೆ ಹಣಕ್ಕೆ ಬೆಲೆ ಕೊಡುತ್ತಿದ್ದೇವೆ. ನಮ್ಮ ಗಮನವನ್ನ ನಾವು ಬದಲಿಸದಿದ್ದರೆ ಅದಕ್ಕೆ ತಕ್ಕ ಬೆಲೆಯನ್ನ ಕಟ್ಟಬೇಕಾಗುತ್ತದೆ. 

ಮನುಷ್ಯ ತನ್ನ ಜೀವನವನ್ನ ಸುಗಮವಾಗಿಸಲು, ವ್ಯಾಪಾರ ವಹಿವಾಟು ಸರಾಗವಾಗಿ ನೆಡೆಸಲು ಹಣವನ್ನ ಸೃಷ್ಟಿಸಿದ ಆದರೆ ಅದು ಇಂದು ಇರುವಷ್ಟು ಸುಧಾರಿತ ಹಂತಕ್ಕೆ  ನೆಡೆದು ಬಂದ ಹಾದಿ ರೋಚಕವಾಗಿದೆ. 

ಹಣದ ಬಗ್ಗೆ ಸಾಮಾನ್ಯವಾಗಿ ಗೊತ್ತಿರದ ಒಂದಷ್ಟು ರೋಚಕ ಅಂಶಗಳನ್ನ ಇಂದು ತಿಳಿದುಕೊಳ್ಳೋಣ. 
 1. ಬ್ರಿಟಿಷರು ಮುಷ್ಠಿ ಮಡಿಸಿದರೆ ಹೆಬ್ಬೆರಳು ಹೊರಗೆ ಎನ್ನುವಂತೆ ಯೂರೋಪಿನಲ್ಲಿದ್ದೂ ಯೂರೋಪಿನಲ್ಲಿ ಇರಲಿಲ್ಲ. ಇದ್ದಷ್ಟೂ ದಿನ ಯುರೋ ಕರೆನ್ಸಿ ತನ್ನದಾಗಿಸಿಕೊಳ್ಳಲಿಲ್ಲ. ಅದಕ್ಕೆ ಕಾರಣ 18 ನೇ ಶತಮಾನದಲ್ಲಿ ಜಾರಿಗೆ ಬಂದ ಇದರ ಹಣ ಪೌಂಡ್ ಸ್ಟರ್ಲಿಂಗ್. ಅದನ್ನ ಬಿಡಲು ಅಲ್ಲಿನ ಸರಕಾರ ಮತ್ತು ಜನತೆ ಒಪ್ಪಲಿಲ್ಲ. ಹೀಗಾಗಿ ಇಂದಿಗೂ ಇದು ಜಗತ್ತಿನ ಹಳೆಯ ಹಣ ಎನ್ನುವ ಕೀರ್ತಿಗೆ ಭಾಜನವಾಗಿದೆ. 
 2. ಅಮೇರಿಕಾ ಮೊದಲ ಕಾಯಿನ್ ಹೊರ ತಂದ ಉದ್ದೇಶ ಒಂದು ಸಂದೇಶ ಸಾರುವುದಕ್ಕೆ 'ಮೈಂಡ್ ಯುವರ್ ಬಿಸಿನೆಸ್' ಎನ್ನುವುದು ಆ ಸಂದೇಶ. ಈಗ ನಾವು ನೋಡುತ್ತಿರುವ 'ಇನ್ ಗಾಡ್ ವೀ ಟ್ರಸ್ಟ್' ಎನ್ನುವ ಸಂದೇಶ ಶುರುವಾಗಿದ್ದು 1864 ರಲ್ಲಿ. ಮೊದಲ ನಾಣ್ಯದ ವಿನ್ಯಾಸ ಮಾಡಿದವನು ಬೆಂಜಮಿನ್ ಫ್ರಾಂಕ್ಲಿನ್. 
 3. ಜಗತ್ತಿನ ಒಟ್ಟು ಮೊತ್ತದ ಕೇವಲ 8 ಪ್ರತಿಶತ ಮಾತ್ರ ಹಣದ (ನೋಟ್ ಮತ್ತು ಕಾಯಿನ್) ರೂಪದಲ್ಲಿದೆ. ಉಳಿದದ್ದೆಲ್ಲ ಡಿಜಿಟಲ್ ರೂಪದಲ್ಲಿದೆ. 
 4. ಡಿಜಿಟಲ್ ಮನಿ ನಾವು ಕಣ್ಣಲ್ಲಿ ನೋಡುವುದಿಲ್ಲ, ಮುಟ್ಟುವುದಿಲ್ಲ ಅದೊಂದು ರೀತಿ ದೇವರಿದ್ದ ಹಾಗೆ... ಇದೆ ಎನ್ನುವ ನಂಬಿಕೆ, ಆದರೆ ನೋಡಿದವರಿಲ್ಲ. ಜಗತ್ತಿನ ಅತ್ಯಂತ ಕ್ಲಿಷ್ಟವಾದ ಸೃಷ್ಟಿಯಲ್ಲಿ ಇದು ಕೂಡ ಒಂದು. ಇದರಿಂದ ಏನಾಯಿತು? ಇಲ್ಲದ ಹಣವನ್ನ ಸೃಷ್ಟಿಸಲು ಸಾಧ್ಯವಾಯಿತು. ಮುಂದೆ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ನೀವು ಗಳಿಸಬಹುದಾದ ಸಂಭಾವ್ಯ ಹಣವನ್ನ ಇಂದೇ ನಿಮ್ಮ ಖಾತೆಗೆ ವರ್ಗಾವಣೆ ಮಾಡಿ ನಿಮಗೆ ಮನೆ, ಕಾರು ಕೊಳ್ಳುವ ಅವಕಾಶ ಒದಗಿಸಲಾಯಿತು!. ಇದರಿಂದ ಏನಾಗಿದೆ? ಜಗತ್ತಿನ ಒಟ್ಟು ಸಾಲದ ಮೊತ್ತ ಜಗತ್ತಿನ ಒಟ್ಟು ಆಸ್ತಿಯ ಮೊತ್ತಕ್ಕಿಂತ 2.5 ಪಟ್ಟು ಹೆಚ್ಚಾಗಿದೆ. ಅಂದರೆ ಜಗತ್ತಿನ ಒಟ್ಟು ಆಸ್ತಿಯ ಮೊತ್ತ 80 ರುಪಾಯಿ ಎಂದುಕೊಂಡರೆ ಜಗತ್ತಿನ ಒಟ್ಟು ಸಾಲದ ಮೊತ್ತ 2೦೦ ರುಪಾಯಿ! 
 5. ಒಂದು ಲೆಕ್ಕಾಚಾರದ ಪ್ರಕಾರ 1.48 ಟ್ರಿಲಿಯನ್ ಮೌಲ್ಯದ ಅಮೆರಿಕನ್ ಡಾಲರ್ ಚಲಾವಣೆಯಲ್ಲಿದೆ. ಅದರಲ್ಲಿ 4೦ ಪ್ರತಿಶತ ಮಾತ್ರ ಅಮೇರಿಕಾ ದೇಶದಲ್ಲಿ ಚಲಾವಣೆಯಲ್ಲಿದೆ. ಉಳಿದ 6೦ ಪ್ರತಿಶತ ಡಾಲರ್ ಬೇರೆ ದೇಶಗಳು ವಿದೇಶಿ ವಿನಿಮಯದ ಹೆಸರಿನಲ್ಲಿ ಹೊಂದಿವೆ. 
 6. ಉಜ್ಬೇಕಿಸ್ಥಾನ್ ನ ಪೈಸೆಯ ಹೆಸರು ಟೀಯಿಂ. ಇದು ಜಗತ್ತಿನ ಅತ್ಯಂತ ಕಡಿಮೆ ಮೌಲ್ಯ ಹೊಂದಿದ ಹಣ ಎಂದು ಕರೆಸಿಕೊಳ್ಳುತ್ತದೆ. ಇದರ ಮೌಲ್ಯ ಎಷ್ಟು ಗೊತ್ತೇ? ಒಂದು ಅಮೆರಿಕನ್ ಸೆಂಟ್ ಗಿಂತ 24೦೦ ಪ್ರತಿಶತ ಕಡಿಮೆ! ಒಂದು ಬ್ರಿಟಿಷ್ ಪೆನ್ನಿ ಗಿಂತ 3೦೦೦ ಪ್ರತಿಶತ ಕಡಿಮೆ ಮೌಲ್ಯ. ಒಂದರ್ಥದಲ್ಲಿ ಮೌಲ್ಯವೇ ಇಲ್ಲದ ಹಣ. 
 7. ಇಂದು ನಾವು ನೋಡುತ್ತಿರುವ ಪೇಪರ್ ನೋಟುಗಳನ್ನು ಸೃಷ್ಟಿಸಿದ್ದು ಚೀನಿಯರು. ಅಂದಿನ ದಿನದಲ್ಲಿ ಇದನ್ನ ಹಾರುವ ಹಣ ಎಂದು ಕರೆಯಲಾಗುತ್ತಿತ್ತು. 
 8. ಗಾತ್ರದಲ್ಲಿ ಅತಿ ಸಣ್ಣ ನೋಟು ರೊಮೇನಿಯಾ ದೇಶದ್ದು, ದೊಡ್ಡದ್ದು ಫಿಲಿಫೈನ್ಸ್ ದೇಶಕ್ಕೆ ಸೇರಿದೆ. 
 9. 1946 ರ ಸಮಯದಲ್ಲಿ ಹಂಗರಿ ದೇಶದಲ್ಲಿ ಹಣದುಬ್ಬರ ಅತ್ಯಂತ ಹೆಚ್ಚಾಗಿ ದೇಶ ದಿವಾಳಿ ಅಂಚಿಗೆ ಹೋಗಿತ್ತು. ಅಂದಿನ ದಿನದಲ್ಲಿ 1೦೦ ಮಿಲಿಯನ್ ಮೌಲ್ಯದ ಒಂದು ನೋಟನ್ನ ಮುದ್ರಿಸಲಾಗಿತ್ತು. ಇಷ್ಟೊಂದು ಹೆಚ್ಚಿನ ಮೌಲ್ಯದ (ಸಂಖ್ಯೆಯ ದೃಷ್ಟಿಯಿಂದ  ಮಾತ್ರ) ಹಣ ಚರಿತ್ರೆಯಲ್ಲಿ ಎಂದೂ ಮುದ್ರಿತವಾಗಿರಲಿಲ್ಲ. ಇದೀಗ ವೆನಿಜುಲಾ ದೇಶ ಆರ್ಥಿಕವಾಗಿ ಜರ್ಜರಿತವಾಗಿದೆ. ಅಲ್ಲಿಯೂ ಹಣದುಬ್ಬರ ಬಹಳ ಹೆಚ್ಚಾಗಿದೆ. ಜನ ಹಣವನ್ನ ಬೆಂಕಿಗೆ ಹಾಕಿ ಬಿಸಿ ಕಾಯಿಸಿಕೊಳ್ಳುವ ಮಟ್ಟಿಗೆ ಬಂದಿದ್ದಾರೆ. ನಂಬಿಕೆ ಕಳೆದುಕೊಂಡ ಮರುಕ್ಷಣ ಹಣ ಕೇವಲ ಪೇಪರ್ ತುಂಡು. 
 10. 26 ವರ್ಷಗಳ ಕಾಲ ಬರ್ಮಾ ದೇಶವನ್ನ ಆಳಿದ ನೀವಿನ್ ಗೆ ಸಂಖ್ಯೆ 9 ರ ಮೇಲೆ ಬಹಳ ಪ್ರೀತಿ. ಅದು ಆತನ ಲಕ್ಕಿ ನಂಬರ್ ಎನ್ನವುದು ಆತನ ನಂಬಿಕೆಯಾಗಿತ್ತು. ಜ್ಯೋತಿಷಿಗಳು ಹೇಳಿದರು ಒಳ್ಳೆಯದಾಗುತ್ತದೆ ಎಂದು 1987 ರಲ್ಲಿ 9 ರಿಂದ ಗುಣಿಸಬಹದುದಾದ ನೋಟನ್ನ ಮುದ್ರಿಸಲು ಹೇಳುತ್ತಾನೆ. 50 ಮತ್ತು 1೦೦ ನೋಟಿಗೆ ಬದಲು 45 ಮತ್ತು 90 ರ ನೋಟನ್ನ ಮುದ್ರಿಸುತ್ತಾರೆ. ಈತನ ಹುಚ್ಚಾಟದಿಂದ ಬರ್ಮಾ ಆರ್ಥಿಕತೆ ಇನ್ನಷ್ಟು ಹಳ್ಳ ಹಿಡಿಯುತ್ತದೆ. 
 11. ಮೈಕ್ರೋನೇಶಿಯಾ ಎನ್ನುವ ದ್ವೀಪ ಸಮೂಹದಲ್ಲಿ 'ರಾಯ್ ಸ್ಟೋನ್ಸ್' ಎನ್ನುವ ಭಾರವಾದ ಕಲ್ಲನ್ನ ವಿನಿಮಯವನ್ನಾಗಿ ಬಳಸುತ್ತಾರೆ. ಕಲ್ಲು ಎತ್ತಲು ಸಾಧ್ಯವಾಗದ ಕಾರಣ ಅದನ್ನ ಅಲುಗಿಸದೆ ಬಾಯಿ ಮಾತಿನಲ್ಲಿ ವರ್ಗಾವಣೆ ಆಗುತ್ತದೆ. ಇದನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಬದಲಿಸಲು ಪ್ರಯತ್ನ ಪಟ್ಟು ಅದರಲ್ಲಿ ಎಷ್ಟು ಜನ ಪ್ರಾಣ ತ್ಯಾಗ ಮಾಡುತ್ತಾರೆ ಅಷ್ಟು ಅದರ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ. ಇದೇನು 18 ನೇ ಶತಮಾನದ ಕತೆಯಲ್ಲ. ಇಂದಿಗೂ ಮೈಕ್ರೋನೇಶಿಯಾ ದಲ್ಲಿ ನಡೆಯುತ್ತಿದೆ. 
 12. ಇಂದಿಗೂ  ಕರೆನ್ಸಿ ನೋಟಲ್ಲದೆ, ಟೀ ಇಟ್ಟಿಗೆಗಳನ್ನ ಸೈಬೀರಿಯಾ ದೇಶದಲ್ಲಿ ವಿನಿಮಯವಾಗಿ ಬಳಸುತ್ತಾರೆ. 
 13. ಇರಾನಿ ದೇಶದ ರಾಜನ ಕಿರೀಟದ ಹರಳುಗಳು ಅತ್ಯಂತ ಬೆಲೆ ಬಾಳುತ್ತದೆ ಎನ್ನವುದು ನಂಬಿಕೆ. ಇರಾನಿ ಸರಕಾರ ಅದನ್ನ ತನ್ನ ಕರೆನ್ಸಿ ಮುದ್ರಿಸಲು ಆಧಾರವಾಗಿ ಇಟ್ಟುಕೊಂಡಿದೆ. 
 14. 1932ರಲ್ಲಿ ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿದ್ದ ನಿರುದ್ಯೋಗ ತಡೆಯಲು ಅಲ್ಲಿನ ಪುಟ್ಟ ಹಳ್ಳಿ ಒಂದು ಉಪಾಯ ಮಾಡುತ್ತದೆ. ಜನರ ಬಳಿ ಖರ್ಚಾಗದೆ ಉಳಿದ ಹಣದ ಮೌಲ್ಯವನ್ನ 1 ಪ್ರತಿಶತ ಪ್ರತಿ ತಿಂಗಳಿಗೆ ಕಡಿತ ಮಾಡುವುದು ಅದಾಗಿತ್ತು. ಅಂದರೆ ಉದಾಹರಣೆ ನೋಡಿ ನಿಮ್ಮ ಬಳಿ ನೂರು ರೂಪಾಯಿ ಇದ್ದರೆ ಅದನ್ನ ನೀವು ಖರ್ಚು ಮಾಡದೆ ಹೋದರೆ ತಿಂಗಳ ನಂತರ ಅದರ ಮೌಲ್ಯ 99 ರೂಪಾಯಿ ಮುಂದಿನ ತಿಂಗಳು ಇನ್ನೂ ಕಡಿಮೆ. ಹೀಗೆ ಖರ್ಚು ಮಾಡದೆ ಕೂಡಿಟ್ಟರೆ ಮುಂದೊಂದು ದಿನ ಆ ಹಣ ತನ್ನ ಪೂರ್ಣ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಹೀಗಾಗಿ ಜನ ಎಲ್ಲೋ ಸಂಗ್ರಹಿಸಿಡುವುದರ ಬದಲು ಖರ್ಚು ಮಾಡುತ್ತಾರೆ. ನಿರುದ್ಯೋಗ ಕಡಿಮೆಯಾಗುತ್ತದೆ. ಇಂತಹ ಪ್ರಯೋಗ ಒಂದು ವರ್ಷ ನೆಡೆಯುತ್ತದೆ. 1933 ರಲ್ಲಿ ಅಂದಿನ ಪ್ರೆಸಿಡೆಂಟ್ ರೂಸ್ವೆಲ್ಟ್ ಇದನ್ನ ಕಾನೂನು ಬಾಹಿರ ಎಂದು ಘೋಷಿಸುತ್ತಾನೆ. 
 15. 18 ನೇ ಶತಮಾನದಲ್ಲಿ ಪ್ರಾಣಿಯ ಚರ್ಮವನ್ನ ವಿನಿಮಯವನ್ನಾಗಿ ಬಳಸುತ್ತಿದ್ದರು. ಜಿಂಕೆ ಒಳಗೊಂಡು ಅನೇಕ ಪ್ರಾಣಿಗಳ ಚರ್ಮವನ್ನ ಬಕ್ ಸ್ಕಿನ್ ಎನ್ನುತ್ತಿದ್ದರು. ಹೀಗಾಗಿ ಅಮೇರಿಕಾದಲ್ಲಿ ಡಾಲರ್ ಗೆ ಪರ್ಯಾಯವಾಗಿ ಬಕ್ಸ್, ಬಕ್ ಎನ್ನುವ ಪರಿಪಾಠವಿದೆ. ಇಲ್ಲಿಯೂ ಇವತ್ತಿನ ಮಾಡ್ರನ್ ಡೇ ಹುಡುಗರು ಎನ್ನಿಸಿಕೊಂಡವರು ರುಪಾಯಿಗೆ ಬದಲಾಗಿ ಬಕ್ಸ್ ಎನ್ನುವುದನ್ನ ಕೇಳಬಹದು. 
1971 ರಲ್ಲಿ ಹಣ ಮುದ್ರಿಸಲು ಚಿನ್ನದ ಅವಶ್ಯಕತೆ ಇಲ್ಲ ಎಂದು ಅಂದಿನ ಅಮೇರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್ ಗೋಲ್ಡ್ ಬ್ಯಾಕ್ ಅಪ್ ಅನ್ನು ತೆಗೆದು ಹಾಕುತ್ತಾರೆ. ಹೀಗಾಗಿ ಇಂದಿನ ಹಣ ಕೇವಲ ನಂಬಿಕೆ ಆಧಾರದಲ್ಲಿ ನೆಡೆಯುತ್ತಿರುವ ವಿನಿಮಯ ಮಾಧ್ಯಮವಾಗಿದೆ. ಮನುಷ್ಯ ತನ್ನ ಒಳಿತಿಗೆ ಮತ್ತು ಅಭಿವೃದ್ಧಿಗೆ ಸದಾ ತನಗೆ ಬೇಕಾದ ಬದಲಾವಣೆ ಮಾಡಿಕೊಂಡು ಬರುತ್ತಲೇ ಇದ್ದಾನೆ. ಇದೀಗ ಬಿಟ್ ಕಾಯಿನ್ ನಂತಹ ಕ್ರಿಪ್ಟೋ ಕರೆನ್ಸಿ ಆತನ ಹೊಸ ಆಟಿಕೆಯಾಗಿದೆ. ಶತಮಾನಗಳ ಮನುಷ್ಯನ ಚರಿತ್ರೆ ತೆಗೆದು ನೋಡುತ್ತಾ ಬಂದರೆ ಪ್ರತಿ ಹಂತದಲ್ಲೂ ಒಂದಲ್ಲ ಒಂದು ಹೊಸ ವಿನಿಮಯ ಮಾಧ್ಯಮ ಹುಡುಕುತ್ತಾ ಬಂದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಂದು ಕಾಲದಲ್ಲಿ ತುಲಿಪ್ ಗಿಡಗಳ ಮೇಲಿನ ಪಾರುಪತ್ಯಕ್ಕೆ ಜಗತ್ತಿನಲ್ಲಿ ಹೊಡೆದಾಟ ನೆಡೆದಿದೆ. ಯಾರು ಹೆಚ್ಚು ತುಲಿಪ್ ಹೂವುಗಳನ್ನ ಹೊಂದಿರುತ್ತಾರೆ ಅವರು ಹೆಚ್ಚು ಶ್ರೀಮಂತರು! ಜಾಯಿಕಾಯಿ (ಆಡು ಭಾಷೆಯಲ್ಲಿ ಜಾಕಾಯಿ) ಮರಗಳ ಮೇಲಿನ ಹಿಡಿತಕ್ಕೆ ರಕ್ತಪಾತವೇ ನೆಡೆದು ಹೋಗಿದೆ. 

ಸದ್ಯದ ಮನುಷ್ಯನ ಗಮನವೆಲ್ಲಾ ಡಿಜಿಟಲ್ ಮನಿ, ಕ್ರಿಪ್ಟೋ ಕರೆನ್ಸಿಯಲ್ಲಿದೆ. ಇದಿನ್ನೂ ಶೈಶವಾಸ್ಥೆಯಲ್ಲಿದೆ. ಈಗಿನ ಹಣದಿಂದ ಅಲ್ಲಿಗೆ ಬದಲಾವಣೆಯ ಹಾದಿಯಲ್ಲಿ ಇನ್ನೆಷ್ಟು ಮಾರಣಹೋಮ ನಡೆಯಬೇಕೋ? ನಡೆಯುತ್ತದೆಯೋ? ಜಗತ್ತು ಹೇಗೆ ಬದಲಾಗುತ್ತದೆಯೋ? ಎನ್ನುವ ಕುತೂಹಲಕ್ಕೆ ಸಮಯ ಮಾತ್ರವೇ ಉತ್ತರ ಹೇಳಬಲ್ಲದು.  

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Copyright � 2012 Kannadaprabha.com