Kannadaprabha The New Indian Express
ಎಮರ್ಜಿಂಗ್ ಮಾರುಕಟ್ಟೆ ಕುಸಿತ, ಯಾರಿಗಿಲ್ಲ ಹಿತ! 
By Rangaswamy Mookanahalli 
23 Aug 2018 12:00:00 AM IST

ಜಗತ್ತು ಅತ್ಯಂತ ವೇಗದಿಂದ ಬದಲಾವಣೆ ಕಾಣುತ್ತಿದೆ. ಬದಲಾವಣೆ ಆಗುತ್ತಿರುವುದು ಒಳಿತಿಗೋ ಅಥವಾ ಕೆಡುಕಿಗೂ ಎನ್ನುವುದನ್ನ ತಿಳಿಯಲು ಕೂಡ ಪುರುಸೊತ್ತಿಲ್ಲದಷ್ಟು ವೇಗ!. ಇಂದಿಗೆ ಜಗತ್ತಿನ ಬಹುತೇಕ ದೇಶಗಳ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲ. ಇಲ್ಲದ ಹಣದ ಸೃಷ್ಟಿ, ಮುಂದಿನ ಇಪ್ಪತ್ತು ಅಥವಾ ಮೂವತ್ತು ವರ್ಷಗಳಲ್ಲಿ ಗಳಿಸಬಹುದಾದ ಸಂಪತ್ತಿನ ಅಂದಾಜಿನ ಮೇಲೆ ಇಂದು ಅದನ್ನ ಪಡೆದು ಅನುಭವಿಸುವ ಅಭ್ಯಾಸ ಇಂದಿನ ಪರಿಸ್ಥಿತಿಗೆ ಕಾರಣ.

ಹಿಂದೆಲ್ಲ ಮುಂದುವರಿದ ದೇಶಗಳು ಮತ್ತು ಕಡಿಮೆ ಮುಂದುವರಿದ ದೇಶಗಳು ಎಂದು ಜಗತ್ತನ್ನ ವಿಭಾಗಿಸಲಾಗಿತ್ತು. ನಂತರದ ದಿನಗಳಲ್ಲಿ ಕಡಿಮೆ ಮುಂದುವರಿದ ದೇಶ ಎನ್ನುವುದು ಸಮಂಜಸವಲ್ಲ ಎಂದು ಮುಂದುವರಿಯುತ್ತಿರುವ ದೇಶಗಳು ಎಂದು ಕರೆದರು. ಈಗ ಆ ದೇಶಗಳನ್ನ ಉದಯೋನ್ಮುಖ ಅಥವಾ ಎಮರ್ಜಿಂಗ್ ಮಾರ್ಕೆಟ್ ಅಥವಾ ಎಮರ್ಜಿಂಗ್ ಕಂಟ್ರೀಸ್ ಎನ್ನುತ್ತಿದ್ದಾರೆ. ಈ ಪದವೂ ಸವಕಲಾಗಿ ಇನ್ನೊಂದು ಹೊಸ ಪದದ ಅನ್ವೇಷಣೆ  ಜಾರಿಯಲ್ಲಿದೆ. ಮುಂದುವರೆದ ದೇಶಗಳ ಆರ್ಥಿಕ ಸ್ಥಿತಿ ಇವತ್ತು ಹೊಸದಾಗಿ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಆದರೂ ಅತ್ಯಂತ ಪ್ರಮುಖ ದೇಶಗಳ ಆರ್ಥಿಕತೆಯ ಬಗ್ಗೆ  ಮತ್ತು ಎಮರ್ಜಿಂಗ್ ದೇಶಗಳ ಆರ್ಥಿಕತೆ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. 

ಅಮೇರಿಕಾ ದೇಶದಲ್ಲಿ ಫೆಡರಲ್ ಬಡ್ಡಿ ದರವನ್ನ ಏರಿಸುತ್ತಲೇ ಬರುತ್ತಿದ್ದಾರೆ. ಇದು ಆ ದೇಶದ ಮಟ್ಟಿಗೆ ಒಂದು ಹಂತದವರೆಗೆ ಲಾಭದಾಯಕವಾಗಿತ್ತು. ಇದೀಗ ಪ್ರೆಸಿಡೆಂಟ್ ಟ್ರಂಪ್, ಫೆಡರಲ್ ಬಡ್ಡಿ ದರವನ್ನ ಹೆಚ್ಚಿಸಿದ್ದರ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ವಿತ್ತ ನೀತಿಯನ್ನ ಜಾರಿಗೊಳಿಸುವಾಗ ಟ್ರಂಪ್ ಗೆ ಇದರ ಮಾಹಿತಿ ಇರಲಿಲ್ಲ ಎಂದಾಯಿತಲ್ಲವೇ? ಅಂದರೆ ಅಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಕಹಿಸತ್ಯ. ಬ್ಯಾಂಕಿಂಗ್ ವ್ಯವಸ್ಥೆ ಕುಸಿತ ಮತ್ತು ರಿಯಾಲಿಟಿ ಕ್ಷೇತ್ರ ಕುಸಿತದ ದಶಕದ ನಂತರವೂ ತನ್ನ ಹಳೆಯ ಉತ್ತುಂಗವನ್ನ ಅಮೇರಿಕಾ ಇನ್ನೂ ಏರಲಾಗಿಲ್ಲ. 

ಜರ್ಮನಿಯಲ್ಲಿ ಮೆಲ್ಲಗೆ ಭುಗಿಲ್ಲೆದ್ದಿರುವ ಸಿರಿಯಾ ವಲಸಿಗರ ಹೊಸ ಸಮಸ್ಯೆ ಅಲ್ಲಿನ ಸಮಾಜದಲ್ಲಿ ಕಂಡೂ ಕಾಣದ ಬಿರುಕು ಮೂಡಿಸಲು ಶುರುಮಾಡಿದೆ. ಇತರ ಯುರೋ ದೇಶಗಳ ಸಮಸ್ಯೆಗಳ ಭಾರವನ್ನೂ ಸ್ವಲ್ಪ ಮಟ್ಟಿಗೆ ಹೊರಬೇಕಾಗಿರುವುದು ಇನ್ನೊಂದು ತಲೆ ನೋವು. ಫ್ರಾನ್ಸ್, ಸ್ಪೇನ್, ಇಟಲಿ ಇತರ ಯುರೋ ದೇಶಗಳ ಪರಿಸ್ಥಿತಿ ಹೆಚ್ಚು ಕಡಿಮೆ ಯುರೋ ವಲಯದ ಇತರ ದೇಶಗಳಂತೆಯೇ ಇದೆ. ಇನ್ನು ಗ್ರೀಸ್ ದೇಶ ಕಳೆದ ಸೋಮವಾರ ತನ್ನ ಕೊನೆಯ ಕಂತಿನ ಉಳಿವಿಗಾಗಿ ಯುರೋ ಜೋನ್ ನೀಡಿದ  ಹಣ (ಬೈಲ್ ಔಟ್ ಅಥವಾ ರೆಸ್ಕ್ಯೂಫಂಡ್) ಪಡೆದಿದೆ, ಅಂದರೆ ಇನ್ನು ಮುಂದೆ ಏನೇ ಕಷ್ಟ ಬಂದರೂ ಇನ್ನು ಹೆಚ್ಚಿನ ಸಹಾಯ ನಾವು ಮಾಡಲು ಸಾಧ್ಯವಿಲ್ಲ ಎಂದು ಯುರೋ ವಲಯ ಘೋಷಿಸಿದೆ. ಹೀಗೆ ಕೋಟ್ಯಂತರ ಯುರೋ ಸಹಾಯಧನ ಪಡೆದೂ ಗ್ರೀಸ್ ನಲ್ಲಿ ನಿರದ್ಯೋಗ 20 ಪ್ರತಿಶತವಿದೆ. ಅಲ್ಲಿನ ಮಾರುಕಟ್ಟೆ 25 ಪ್ರತಿಶತ ಕುಸಿದಿದೆ. ಈ ಲೆಕ್ಕಾಚಾರದಲ್ಲಿ ಇನ್ನು ಒಂದು ದಶಕವಾದರೂ ಗ್ರೀಸ್ ಪೂರ್ಣ ಚೇತರಿಕೆ ಕಾಣುವುದು ಅನುಮಾನ. 

ಇನ್ನು ಯುನೈಟೆಡ್ ಕಿಂಗ್ಡಮ್ ಕಥೆ (ವ್ಯಥೆ ಎನ್ನುವುದು ಬಹಳ ಸೂಕ್ತ) ಬೇರೆಯ ತರಹದ್ದು. ಬ್ರೆಕ್ಸಿಟ್ ಗೆ ಜನ ಬೆಂಬಲ ಸಿಕ್ಕ ನಂತರ 20 ಪ್ರತಿಶತ ಕುಸಿತ ಕಂಡ ಪೌಂಡ್ ಇನ್ನೊಂದು ಮಹಾಕುಸಿತ ಕಾಣಲು ಸಜ್ಜಾಗಿದೆ. ಇನ್ನು ಹದಿನೈದು ಪ್ರತಿಶತ ಕುಸಿದರೆ ಇಂಗ್ಲೆಂಡ್ ಆರ್ಥಿಕತೆ ಅಲ್ಲೋಲಕಲ್ಲೋಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್  ಜಗತ್ತಿಗೆ ಜಗತ್ತೇ ಆರ್ಥಿಕ ತಲ್ಲಣದ ನಡುವೆ ಸಿಲುಕಿ ನಲುಗಿದಾಗಲೂ ಅತ್ಯಂತ ಸ್ಥಿರವಾಗಿದ್ದ ದೇಶಗಳು. ಭಾರತದ ಲ್ಯಾಂಡ್ ಮಾಫಿಯಾ ಆಸ್ಟ್ರೇಲಿಯಾ ದೇಶದಲ್ಲೂ ಜಾಗ ಪಡೆದು ಮನೆಗಳ ಕಟ್ಟಿ ಅಲ್ಲಿರುವ ಭಾರತೀಯರಿಗೆ ಜೊತೆಗೆ ಭಾರತದ ಹೈ ನೆಟ್ ವರ್ತ್ ನಾಗರಿಕರಿಗೆ ಅಲ್ಲಿಯ ಮನೆಗಳನ್ನ ಮಾರುವ ಕೆಲಸವನ್ನ ಮಾಡುತಿತ್ತು. ಇದರಿಂದ ಬಳಷ್ಟು ಜನ ಮೊದಲಿಗೆ ಶುರು ಮಾಡಿದವರು ಹಣವನ್ನ ಗಳಿಸುವಲ್ಲಿ ಸಫಲರಾದರು. ಇದೀಗ ಆಸ್ಟ್ರೇಲಿಯಾ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಕುಸಿಯುತ್ತರಿಯುವ ಬೇಡಿಕೆ ಮಾರಾಟವಾಗದೆ ಉಳಿದ ಮನೆಗಳ, ಹೆಚ್ಚಾಗುವ ಮರು ಪಾವತಿಸಲಾಗದ ಸಾಲದ ಮೊತ್ತ ಇವೆಲ್ಲವೂ ಆಸ್ಟ್ರೇಲಿಯಾ ದೇಶವನ್ನ ರಿಸೆಶನ್ ನ ಅಂಚಿಗೆ ದೂಡಲು ಸಜ್ಜಾಗಿದೆ. 

ಇನ್ನು ನ್ಯೂಜಿಲ್ಯಾಂಡ್ ದೇಶದ್ದು ಬೇರೆಯ ಕಥೆ. ಲಕ್ಷ ರೂಪಾಯಿ ಬೆಲೆಬಾಳುವ ಮನೆಯನ್ನ  ಹತ್ತು ಲಕ್ಷದ ಮನೆಯನ್ನಾಗಿಸಿದ ಶ್ರೇಯ ಚೀನಾ ದೇಶಕ್ಕೆ ಸೇರಬೇಕು. ಚೀನಿಯರು ಕೇಳಿದ ಬೆಲೆ ಕೊಟ್ಟು ನ್ಯೂಜಿಲ್ಯಾಂಡ್ ದೇಶದ ಜಾಗ ಮತ್ತು ಮನೆಯನ್ನ ಕೊಳ್ಳಲು ಶುರು ಮಾಡಿದರು. ಎಷ್ಟರ ಮಟ್ಟಿಗೆ ಎಂದರೆ ಆಕ್ಲ್ಯಾಂಡ್ ನಗರದಲ್ಲಿ ನೂರು ಮನೆ ವಿದೇಶಿಯರಿಗೆ ಮಾರಿದರೆ ಅದರಲ್ಲಿ ಅರವತ್ತು ಮನೆ ಖರೀದಿ ಮಾಡಿದವರು ಚೀನಿಯರು.! ಹೀಗೆ ಹೆಚ್ಚಿದ ಬೆಲೆ ಕೊಟ್ಟು ಸ್ಥಳೀಯರು ಖರೀದಿಸಲಾಗದೆ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಆತಂಕ ಶುರುವಾಯಿತು. ಇದೀಗ ಅಲ್ಲಿನ ಸರಕಾರ ನ್ಯೂಜಿಲ್ಯಾಂಡ್ ನಲ್ಲಿ ನೆಲಸಿಲ್ಲದವರು ಅಂದರೆ ರೆಸಿಡೆನ್ಸಿ ಪರ್ಮಿಟ್ ಇಲ್ಲದ ವಿದೇಶಿಯರು ಮನೆ ಮತ್ತು ನೆಲವನ್ನ ಕೊಳ್ಳುವ ಹಾಗಿಲ್ಲ ಎನ್ನುವ ಒಂದು ಕಾಯ್ದೆಯನ್ನ ಜಾರಿಗೆ ತರಲು ಮಸೂದೆ ಮಂಡಿಸಿದೆ. 

ಹೀಗೆ ಮುಂದುವರಿದ ದೇಶದ ಹಣೆಪಟ್ಟಿ ಹೊಂದಿರುವ ಬಹುಪಾಲು ದೇಶಗಳು ಇಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ಸಮಯದಲ್ಲಿವೆ. ಇಲ್ಲಿನ ದೇಶಗಳಲ್ಲಿ (ಎಲ್ಲವು ಅಲ್ಲದಿದ್ದರೂ ಇಂಗ್ಲೆಂಡ್ ಮತ್ತು ಗ್ರೀಸ್ ಎಂದು ಓದಿಕೊಳ್ಳಲು ಅಡ್ಡಿ ಇಲ್ಲ)  ಯಾವಾಗ ಬೇಕಾದರೂ ಸಾಮಾಜಿಕ ಅಶಾಂತಿ ಅಥವಾ ಆಂತರಿಕ ಕಲಹ ಶುರುವಾಗಬಹದು.

ಸರಿ ಎಮರ್ಜಿಂಗ್ ದೇಶಗಳ ಕಥೆಯೇನು ? 
ಎಮರ್ಜಿಂಗ್ ದೇಶವೆಂದರೆ ಮುಂದುವರಿದ ದೇಶಗಳ ಹಾದಿಯಲ್ಲಿ ಸಾಗಿ ಅವುಗಳ ಮಟ್ಟಕ್ಕೆ ನಿಲ್ಲುವ ಶಕ್ತಿಯಿರುವ ದೇಶಗಳು ಆದರೆ ಸದ್ಯಕ್ಕೆ ಅವಿನ್ನೂ ಮುಂದುವರಿದ ದೇಶ ಮುಟ್ಟಿದ ಸ್ಥಾನವನ್ನ ಮುಟ್ಟದೆ ಇರುವ ದೇಶಗಳು ಎಂದರ್ಥ. ಇವುಗಳಲ್ಲಿ ಅತ್ಯಂತ ಪ್ರಮುಖ ದೇಶಗಳೆಂದರೆ ಬ್ರೆಜಿಲ್, ರಷ್ಯಾ, ಚೀನಾ ಮತ್ತು ಭಾರತ. ಇವುಗಳನ್ನ ಒಗ್ಗೊಡಿಸಿ ಬ್ರಿಕ್ ದೇಶಗಳು ಎನ್ನುತ್ತಾರೆ. ಇದಕ್ಕೆ ಸೌತ್ ಆಫ್ರಿಕಾ ಕೂಡ ಸೇರ್ಪಡೆಯಾಗಿ ಬ್ರಿಕ್ಸ್ ದೇಶಗಳು ಎನ್ನುವ ಖ್ಯಾತಿ ಕೂಡ ಪಡೆದಿವೆ. ಗಮನಿಸಿ ಎಲ್ಲಾ ಎಮರ್ಜಿಂಗ್ ದೇಶಗಳ ಕರೆನ್ಸಿ ಅಮೇರಿಕಾ ಡಾಲರ್ ಎದುರು ಗಣನೀಯವಾಗಿ ಕುಸಿದಿದೆ. ಭಾರತದ ರೂಪಾಯಿ 70 ರ ಗಡಿಗೆ ಬಂದು ನಿಂತಿದೆ. ರಷ್ಯಾದ ರೊಬೆಲ್, ಚೀನಾದ ಯಾನ್ ಎಲ್ಲವೂ ಕುಸಿತ ಕಂಡಿವೆ. ಎಮರ್ಜಿಂಗ್ ದೇಶಗಳಲ್ಲಿ ಬ್ರಿಕ್ಸ್ ದೇಶಗಳೇ ಪರವಾಗಿಲ್ಲ ಎನ್ನುವ ಹಂತದಲ್ಲಿದೆ. ಉಳಿದಂತೆ ಟರ್ಕಿ ದೇಶದ ಕರೆನ್ಸಿ ಲಿರಾ ಅಮೇರಿಕಾ ದೇಶದ ಡಾಲರ್ ಎದುರು ದಯನೀಯವಾಗಿ ಕುಸಿತ ಕಂಡಿದೆ. ಲಿರಾ ಡಾಲರ್ ಎದುರು 40 ಪ್ರತಿಶತ ಕುಸಿದಿದೆ. ಇದರ ಪರಿಣಾಮ ಸರಳವಾಗಿ ಹೇಳಬೇಕೆಂದರೆ ಎಲ್ಲಾ ವಸ್ತುಗಳ ಬೆಲೆ 40-50 ಪ್ರತಿಶತ ಹೆಚ್ಚಾದಂತೆ. ಉದಾಹರಣೆ ನೋಡಿ ಒಂದು ಕಿಲೋ ಈರುಳ್ಳಿ ಬೆಲೆ 1 ಲಿರಾ ಇದ್ದರೆ ಅದಕ್ಕೆ ಇಂದು ಅಲ್ಲಿ 1.50 ಲಿರಾ ತೆರಬೇಕು. ಅಂದರೆ ವಸ್ತುವಿನ ಬೆಲೆ ಇದಕ್ಕಿದ್ದಂತೆ ಹೆಚ್ಚಾಗುತ್ತದೆ. ಇದಾದದ್ದು ಬಾಹ್ಯ ಕಾರಣದಿಂದ, ಮಾರುಕಟ್ಟೆಯಲ್ಲಿ ಈರುಳ್ಳಿ ಅಷ್ಟೇ ಪ್ರಮಾಣದಲ್ಲಿ ಲಭ್ಯವಿದೆ ಅಂದರೆ ವಸ್ತುವಿನ ಕೊರತೆಯಿಂದ ಬೆಲೆ ಹೆಚ್ಚಾಗಿಲ್ಲ. ವಿನಿಮಯ ದರದ ಏರುಪೇರಿನಿಂದ ಇದಾಗಿದೆ. ಸ್ಥಳೀಯ ಜನರ ಆದಾಯ ನಲವತ್ತರಿಂದ ಐವತ್ತು ಪ್ರತಿಶತ ಏರಿಕೆ ಕಾಣಲಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ವಸ್ತುವಿನ ಲಭ್ಯತೆಯಿದ್ದೂ ಜನರಿಗೆ ಅದನ್ನ ಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಸದ್ಯಕ್ಕೆ ಟರ್ಕಿ ದೇಶವನ್ನ ಜೀವಂತ ದಹಿಸುವ ಸಾಧ್ಯತೆಯಿದೆ. ಅರ್ಜೆಂಟಿನಾ ಪೆಸೊ ಕೂಡ ದಯನೀಯವಾಗಿ ಕುಸಿದು ಅಪಾಯದ ಅಂಚಿಗೆ ತಲುಪಿತ್ತು ಆಗ ಐ ಎಂ ಎಫ್  (ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ) ಮಧ್ಯ ಪ್ರವೇಶಿಸಿ ಪೇಸೋವನ್ನ ರಕ್ಷಿಸಿದೆ. 

ಇವತ್ತು ಜಗತ್ತಿನ ಎಲ್ಲಾ ದೇಶಗಳು ಆರ್ಥಿಕವಾಗಿ ಒಂದರ ಮೇಲೆ ಇನ್ನೊಂದು ಅವಲಂಬಿತವಾಗಿವೆ. ಅರ್ಜೆಂಟಿನಾ, ವೆನಿಜುಯೆಲಾದಲ್ಲಿ ಅಥವಾ ಟರ್ಕಿಯಲ್ಲಿ ಏನಾದರೆ ನಮಗೇನು ಎನ್ನುವಂತಿಲ್ಲ. ಟರ್ಕಿ ಕುಸಿದರೆ ಯೂರೋಪು ಮತ್ತು ಏಷ್ಯಾ ಎರಡಕ್ಕೂ ಹೊಡೆತ ಬೀಳಲಿದೆ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೀಘ್ರವಾಗಿ ಆಗಬೇಕಿರುವುದು ಒಂದು ವೆನಿಜುಯೆಲಾ ದೇಶವನ್ನ ನಿಕೋಲಸ್ ಮದುರೋ ಕಪ್ ಮುಷ್ಟಿಯಿಂದ ಬಿಡಿಸಿ ಜನ ಮನದಲ್ಲಿ ಅಲ್ಲಿನ ಕರೆನ್ಸಿ ಬೊಲಿವರ್ ನಲ್ಲಿ ಮರು ನಂಬಿಕೆಯನ್ನ ನೀಡುವುದು. ಎರಡು ಟರ್ಕಿ ದೇಶವನ್ನ ಆಂತರಿಕ ಕಲಹಕ್ಕೆ ದೂಡುವುದನ್ನ ತಡೆಯುವುದು. ಇದರ ಜೊತೆಗೆ ಮೂರನೆಯದಾಗಿ ಬ್ರೆಕ್ಸಿಟ್ ತಡೆಯುವುದು ಮತ್ತು ಪೌಂಡ್ ಗೆ ಮರು ಮೌಲ್ಯ ಮಾಪನ ಮಾಡುವುದು. ಆದರೆ ಜಗತ್ತನ್ನ ಗೆದ್ದೆವೆಂದು ಬೀಗುತ್ತಿದ್ದ ಬ್ರಿಟಿಷರನ್ನ ಅವರು ಮಾಡಿಕೊಂಡ ಹೊಲಸನ್ನ ಅವರೇ ಬಾಚಿಕೊಳ್ಳಲು ಬಿಟ್ಟರೂ  ಬಿಡಬಹದು ಆದರೆ ವೆನಿಜುಯೆಲಾ ಮತ್ತು ಟರ್ಕಿಗೆ ಇಂದು ಅಂತಾರಾಷ್ಟ್ರೀಯ ಸಮುದಾಯದ ಸಹಾಯ ಹಸ್ತ ಬೇಕಿದೆ. 

ಈ ರೀತಿ ಆ ದೇಶದ ತಪ್ಪಿಲ್ಲದೆ ಆ ದೇಶದ ವಿನಿಮಯ ದರ ಏಕೆ ಏರುಪೇರಾಗುತ್ತದೆ ? 

ಗಮನಿಸಿ ಮೇಲಿನ ಸಾಲಿನಲ್ಲಿ ಅಮೆರಿಕಾದ ಫೆಡರಲ್ ಬಡ್ಡಿ ದರ ಹೆಚ್ಚಾಗಿರುವುದರ ಉಲ್ಲೇಖವಿದೆ. ಅಂತರರಾಷ್ಟ್ರೀಯ ಹೂಡಿಕೆದಾರರು ಅಮೇರಿಕಾದಲ್ಲಿ ತಮ್ಮ ಹೂಡಿಕೆಗೆ ಹೆಚ್ಚಿನ ಲಾಭ ಸಿಗದೇ ಇದ್ದಾಗ ಎಮರ್ಜಿಂಗ್ ದೇಶಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದೀಗ ಅಮೇರಿಕಾದಲ್ಲಿ ಬಡ್ಡಿ ದರ ಹೆಚ್ಚಾಗಿ ಅಲ್ಲೇ ಅವರ ಹೂಡಿಕೆಗೆ ಹೆಚ್ಚಿನ ಲಾಭ ಸಿಗುತ್ತದೆ ಎಂದಾಗ ತಕ್ಷಣ ಅವರು ಇಲ್ಲಿನ ತಮ್ಮ ಹೂಡಿಕೆ ಹಣವನ್ನ ತೆಗೆದು ಮತ್ತೆ ಅಮೇರಿಕಾದಲ್ಲಿ ಹೂಡಿಕೆ ಮಾಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಸಣ್ಣ ಪುಟ್ಟ ದೇಶಗಳ ಫಾರಿನ್ ರಿಸೆರ್ವ್ ತೀವ್ರ ಕುಸಿತ ಕಾಣುತ್ತದೆ. ಸಾಮಾನ್ಯಾವಾಗಿ ಫಾರಿನ್ ರಿಸರ್ವ್ ಇರುವುದು ಡಾಲರ್ ನಲ್ಲಿ ಹೀಗಾಗಿ ಒಮ್ಮೆಲೇ ಡಾಲರ್ ನ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾಗಿ ಅದರ ಲಭ್ಯತೆ ಕಡಿಮೆಯಿದ್ದಾಗ ಅದರ ಬೆಲೆ ಹೆಚ್ಚಾಗುತ್ತದೆ. ಸದ್ಯಕ್ಕೆ ಅರ್ಜೆಂಟಿನಾ ಟರ್ಕಿ ಮತ್ತು ವೆನಿಜುಯೆಲಾದಲ್ಲಿ ಆಗಿರುವುದು ಇದೆ. ಗಮನಿಸಿ ನೋಡಿ ಇದರಿಂದ ಸ್ಥಳಿಯಾಗಿ ಬಳಕೆಗೆ ಬೇಕಾಗಿರುವ ವಸ್ತುಗಳು ಹೇರಳವಾಗಿ ಸಿಗುತ್ತಿದ್ದರೂ ಅದನ್ನ ಕೊಳ್ಳುವ ಶಕ್ತಿಯಿಲ್ಲದೆ ಮಾರುಕಟ್ಟೆ ಕುಸಿತ ಕಾಣುತ್ತದೆ. ಇವೆಲ್ಲಕ್ಕೂ ಮೂಲ ಕಾರಣ ಡಾಲರ್ ಅನ್ನು ಜಗತ್ತಿನ ಇತರ ಕರೆನ್ಸಿ ಮೌಲ್ಯ ಮಾಪನ ಮಾಡುವ ಸಾಧನವನ್ನಾಗಿ ಬಳಸುತ್ತಿರುವುದು. ಇದು ಬದಲಾಗದ ಹೊರತು ಈ ಸಮಸ್ಯೆ ಕೊನೆಯಾಗುವುದಿಲ್ಲ. 

ಭಾರತದ ಸ್ಥಾನವೇನು ? ನಮ್ಮ ಮಾರುಕಟ್ಟೆ ಓಕೆನಾ ? 
ಕಳೆದ 4 ವರ್ಷ ಭಾರತದ ಓಟ ಸುಗಮವಾಗಿತ್ತು. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಓಟದಲ್ಲಿ ಮೊದಲಿನ ಲಯ ಮತ್ತು ವೇಗ ಎರಡೂ ಸ್ವಲ್ಪ ಕಡಿಮೆ ಎಂದು ಹೇಳಬಹದು. ಕುಸಿದ ರೂಪಾಯಿ ಮತ್ತು ಹೆಚ್ಚಾಗುತ್ತಿರುವ ಬೆಲೆ ಇದಕ್ಕೆ ಕಾರಣ. ಹೀಗಿದ್ದೂ ನಮ್ಮ ಫಾರಿನ್ ರಿಸರ್ವ್ ಅತ್ಯಂತ ಆರೋಗ್ಯಕರ ಸಂಖ್ಯೆಯಲ್ಲಿದೆ. ನಮ್ಮ ನೆರವಿಗೆ ಯಾವ ಅಂತರರಾಷ್ಟ್ರೀಯ ಸಮುದಾಯದ ಹಂಗೂ ಬೇಕಿಲ್ಲ. ನಮ್ಮ ರಿಸರ್ವ್ ಬ್ಯಾಂಕ್ ರೂಪಾಯಿ ಕುಸಿತ ತಡೆ ಹಿಡಿಯುವ ತಾಕತ್ತು ಹೊಂದಿದೆ. ತನ್ನ ಬಳಿಯಿರುವ ಒಂದಷ್ಟು ಫಾರಿನ್ ರಿಸರ್ವ್ ಮಾರಿ ರೂಪಾಯಿ ಕುಸಿತ ತಡೆಯಿಡಿಯಬಹದು. ರೂಪಾಯಿ ಕುಸಿತ ನಿಂತರೆ ಬೆಲೆ ಏರಿಕೆ ತಾನಾಗೇ ಕಡಿಮೆಯಾಗುತ್ತದೆ. ಹೀಗಾಗಿ ನಮ್ಮ ಆಂತರಿಕ ಆರೋಗ್ಯ ಸರಿಯಾಗಿದೆ. ಆದರೆ ಜಗತ್ತಿನ ಇತರ ದೇಶಗಳು ಕುಸಿದರೆ ಅದರ ಪರಿಣಾಮ ಎದುರಿಸಲು ನಾವು ಸಿದ್ಧರಾಗಿರಬೇಕು. 

ಎಮರ್ಜಿಂಗ್ ಮಾರುಕಟ್ಟೆ ಕುಸಿದರೆ ಅಮೆರಿಕಾದ ಉತ್ಪನ್ನ ಕೊಳ್ಳುವರಾರು? ಕೊನೆಗೆ ಅದು ಅಮೇರಿಕಾ ಮಾರುಕಟ್ಟೆ ಕುಸಿತಕ್ಕೂ ಕಾರಣವಾಗುತ್ತದೆ. ಟ್ರಂಪ್ ಫೆಡರಲ್ ಬಡ್ಡಿ ದರದ ಏರಿಕೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸರುವುದು ಏಕೆ? ಉತ್ತರ ಸಿಕ್ಕಿತ್ತಲವೇ? 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Copyright � 2012 Kannadaprabha.com