Kannadaprabha The New Indian Express
'ಕನ್ನಡ ಚಲನಚಿತ್ರ ಕ್ರಿಕೆಟ್ ಕಪ್ ಟೂರ್ನಿ 'ಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಚಾಲನೆ 
By select 
08 Sep 2018 12:00:00 AM IST

ಬೆಂಗಳೂರು : ಕನ್ನಡ ಚಿತ್ರರಂಗದ ಒಗ್ಗಟ್ಟು ಪ್ರದರ್ಶಿಸುವ ಎರಡು ದಿನಗಳ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಚಾಲನೆ ನೀಡಿದರು.

ಮಾಜಿ ಸಚಿವ ಅಂಬರೀಷ್, ವಾಣಿಜ್ಯ ಮಂಡಳಿ  ಅಧ್ಯಕ್ಷ ಚಿನ್ನೇಗೌಡ, ನಟರಾದ ಸುನೀಲ್ ಶೆಟ್ಟಿ, ಪುನೀತ್ ರಾಜ್ ಕುಮಾರ್,  ಕ್ರಿಕೆಟಿಗರಾದ  ಆಡಂ ಗಿಲ್ ಕ್ರಿಸ್ಟ್, ಹರ್ಷಲ್  ಗಿಬ್ಸ್  ಸೇರಿದಂತೆ  ಕಲಾವಿದರು, ತಂತ್ರಜ್ಞರು, ನಟ, ನಟಿಯರು ನಿರ್ದೇಶಕರು ಭಾಗವಹಿಸಿದ್ದರು.

ಕಿಚ್ಚ ಸುದೀಪ್ ಅವರ ಆಸಕ್ತಿಯಿಂದಾಗಿ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ ರೂಪುಗೊಂಡಿದ್ದು, ಎರಡನೇ ಬಾರಿ ಪಂದ್ಯಾವಳಿ ನಡೆಯುತ್ತಿದೆ.

 6 ನಟರ ಪ್ರತಿ ತಂಡದಲ್ಲೂ ಒಬ್ಬರು ಅಂತಾರಾಷ್ಟ್ರೀಯ ಮಟ್ಟದ ಆಟಗಾರರಾದ ವಿರೇಂದ್ರ ಸೆಹ್ವಾಗ್, ದಕ್ಷಿಣ ಆಫ್ರಿಕಾದ ಹರ್ಷಗಿಬ್ಸ್, ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್, ನ್ಯೂಜಿಲೆಂಡ್‍ನ ಓವೈಸಾ ಶಾ, ಆಸ್ಟ್ರೇಲಿಯಾ ದ ಆ್ಯಡಂ ಗಿಲ್‍ಕ್ರಿಸ್ಟ್ ಸೇರಿದಂತೆ ಹಲವರು ಆಡಲಿದ್ದಾರೆ.

ಸುದೀಪ್ ನಾಯಕತ್ವದ ಕದಂಬ ಲಯನ್ಸ್ ಮತ್ತು ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ ತಂಡಗಳ ನಡುವೆ ಆರಂಭಿಕ ಪಂದ್ಯ ನಡೆಯಿತು.

ನಾಳೆ ಸೆಮಿಫೈನಲ್ ನಲ್ಲಿ ಎರಡು ಪಂದ್ಯಗಳು ನಡೆಯಲಿದ್ದು,  6 ಗಂಟೆಗೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಚಿತ್ರರಂಗದ ಪ್ರಮುಖ ನಟ, ನಟಿಯರು ಕಾರ್ಯಕ್ರಮ ನೀಡಲಿದ್ದಾರೆ. ಇದಾದ ಬಳಿಕ ರಾತ್ರಿ 8-30ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

ಪಂದ್ಯಾವಳಿ ಯಿಂದ ಸಂಗ್ರಹಿತವಾದ ಟಿಕೆಟ್ ಹಣವನ್ನು ಕೊಡಗಿನ ನಿರಾಶ್ರಿತರಿಗೆ ನೀಡಲಾಗುತ್ತಿದ್ದು, ಕನಿಷ್ಠ 50 ರೂ.ನಿಂದ 5000 ರೂ.ವರೆಗೂ ಟಿಕೆಟ್ ದರ ನಿಗಧಿಗೊಳಿಸಲಾಗಿದೆ.

Copyright � 2012 Kannadaprabha.com