Kannadaprabha The New Indian Express
ಉದಯೋನ್ಮುಖ ಆಟಗಾರರಿಗೆ ಮೈದಾನದಲ್ಲಿ ಕೊಹ್ಲಿ ಉತ್ತಮ ಮಾರ್ಗದರ್ಶಕ: ಹನುಮ ವಿಹಾರಿ 
By select 
11 Sep 2018 12:00:00 AM IST

ಲಂಡನ್: ಉದಯೋನ್ಮುಖ ಆಟಗಾರರಿಗೆ ಮೈದಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಮಾರ್ಗದರ್ಶಕ ಎಂದು ಟೀಂ ಇಂಡಿಯಾ ಯುವ ಆಟಗಾರ ಹನುಮ ವಿಹಾರಿ ಹೇಳಿದ್ದಾರೆ.

ಹೌದು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕಟ್ ಗೆ ಪಾದಾರ್ಪಣೆ ಮಾಡಿದ್ದ ಹನುಮ ವಿಹಾರಿ ಮೊದಲ ಇನ್ನಿಂಗ್ಸ್ ನಲ್ಲೇ (56 ರನ್) ಅರ್ಧ ಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಪುಷ್ಟಿಗೊಳಿಸಿದ್ದರು. 

ಇದೇ ವೇಳೆ ರಾಹುಲ್ ದ್ರಾವಿಡ್ ಬಗ್ಗೆ ಮಾತನಾಡಿರುವ ವಿಹಾರಿ, ಇದು ತಮ್ಮ ಮೊದಲ ಪಂದ್ಯವಾಗಿದ್ದರಿಂದ ನಾನು ಮೊದಲಿಗೆ ರಾಹುಲ್ ದ್ರಾವಿಡ್ ಅವರಿಗೆ ಫೋನ್ ಕಾಲ್ ಮಾಡಿದ್ದೆ. ಈ ವೇಳೆ ದ್ರಾವಿಡ್ ಅವರ ಮಾತುಗಳು ನನ್ನಲ್ಲಿನ ಆತಂಕವನ್ನು ದೂರ ಮಾಡಿ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 

ಪಂದ್ಯಕ್ಕೂ ಮುನ್ನ ಕೆಲ ಸಮಯ ಅವರೊಂದಿಗೆ ಮಾತನಾಡಿದೆ. ಅವರಾಡಿದ ಮಾತುಗಳು ನನ್ನಲ್ಲಿನ ಹಿಂಜರಿಕೆಯನ್ನು ದೂರ ಮಾಡಿ ಶಕ್ತಿ ತುಂಬಿತ್ತು. ಅವರು ಕ್ರಿಕೆಟ್ ಗೇಮ್ ಲೆಜೆಂಡ್. ಅವರ ಪ್ರತಿಯೊಂದು ಸಲಹೆಯೂ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದರು. 

ಟೀಂ ಇಂಡಿಯಾ ಎ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಯುವ ಆಟಗಾರರನ್ನು ಸೃಷ್ಟಿಸಿ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಅದರ ಫಲವಾಗಿಯೇ ಇಂದು ಹನುಮ ವಿಹಾರಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಸಾಕ್ಷಿ.

ಇನ್ನು ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಹಲವು ಯುವ ಕ್ರಿಕೆಟಿಗರಿಗೆ ಚೈತನ್ಯ ತುಂಬುವ ದೊಡ್ಡ ಶಕ್ತಿಯಾಗಿದ್ದಾರೆ. 

Copyright � 2012 Kannadaprabha.com