Kannadaprabha The New Indian Express
ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಏರಿಕೆ: ಪ್ರಧಾನಿ ನರೇಂದ್ರ ಮೋದಿ ಘೋಷಣೆ 
By select 
11 Sep 2018 12:00:00 AM IST

ನವದೆಹಲಿ: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ. ಮುಂದಿನ ತಿಂಗಳಿನಿಂದ ಅವರಿಗೆ ನೀಡಲಾಗುವ ಗೌರವಧನವನ್ನು ಏರಿಸುವುದಾಗಿ  ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಲ್ಲದೇ,  ಮಾನ್ಯತೆ ಪಡೆದ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಪ್ರಮುಖ ಸಾಮಾಜಿಕ ಸುರಕ್ಷತಾ ಯೋಜನೆ ವ್ಯಾಪ್ತಿಗೊಳಪಡಿಸಲಾಗುವುದು, ಪ್ರಧಾನಮಂತ್ರಿ ಜೀವನ್  ಜ್ಯೋತಿ ಭೀಮಾ ಹಾಗೂ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯಡಿ ಉಚಿತ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾಮಾಜಿಕ ಆರೋಗ್ಯ  ಕಾರ್ಯಕರ್ತೆಯರು ವಿಮೆಗಾಗಿ ಯಾವುದೇ ಪ್ರೀಮಿಯಂ ಹಣ ಪಾವತಿಸುವಂತಿಲ್ಲ. ಆಕಸ್ಮಿಕ ಘಟನೆಗಳ ಸಂದರ್ಭದಲ್ಲಿ  4 ಲಕ್ಷ ರೂ ಪಡೆಯಲಿದ್ದಾರೆ ಎಂದು  ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜೊತೆಗಿನ ಸಂವಾದದಲ್ಲಿ ನರೇಂದ್ರ ಮೋದಿ ಇಂದು  ಹೇಳಿದರು.

ಪರಿಷ್ಕೃತ ಗೌರವಧನ ಆದೇಶ ಅಕ್ಚೋಬರ್ ತಿಂಗಳಿನಿಂದ ಜಾರಿಯಾಗಲಿದ್ದು, ದೀಪಾವಳಿ ಕೊಡುಗೆಯಾಗಿ ನವೆಂಬರ್ ಸಂಬಳದಲ್ಲಿ ಅವರಿಗೆ ದೊರೆಯಲಿದೆ. 3 ಸಾವಿರ ರೂ. ಪಡೆಯುತ್ತಿದ್ದವರು 4500 ,   2. 200 ರೂ ಪಡೆಯುತ್ತಿದ್ದವರು, 3, 500  ಹಾಗೂ 1500 ರೂ. ಪಡೆಯುತ್ತಿದ್ದ ಅಂಗನವಾಡಿ ಸಹಾಯಕಿಯರು  2,500 ಪಡೆಯಲಿದ್ದಾರೆ ಎಂದರು.

ಕೇಂದ್ರಸರ್ಕಾರದಿಂದ ಆಶಾ ಹಾಗೂ ಅಂಗನವಾಡಿ  ಕಾರ್ಯಕರ್ತೆಯರು ಪಡೆಯುವ ಗೌರವ ಧನ ಇದಾಗಿದೆ. ರಾಜ್ಯಸರ್ಕಾರದಿಂದಲೂ ಅವರು ಪ್ರತ್ಯೇಕವಾದ ಗೌರವಧನ ಪಡೆಯುತ್ತಿದ್ದಾರೆ.

ದೇಶದ ಪ್ರಗತಿಯಲ್ಲಿ  ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪೌಷ್ಠಿಕ ಆಹಾರ ಹಾಗೂ ನೈರ್ಮಲ್ಯ ಕಾಪಾಡುವ ಮೂಲಕ  ಶಿಶುಗಳು ಉತ್ತಮ ಆರೋಗ್ಯದಿಂದ ಇರುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೆಚ್ಚುವರಿ ಗೌರವ ಧನ ಪಡೆಯಲು  ನೂತನ ಆಪ್  ಸಾಪ್ಟ್ ವೇರ್  (ಐಸಿಡಿಎಸ್- ಸಿಎಎಸ್ )  ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಪ್ರಧಾನಿ ಸಲಹೆ ನೀಡಿದರು. ಕಾರ್ಯಕ್ಷಮತೆ ಆಧಾರದ ಮೇಲೆ ಗೌರವಧನವನ್ನು 250 ರಿಂದ 500 ರೂವರೆಗೂ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

ಜಾರ್ಖಂಡ್ ನಲ್ಲಿ  ಸೆಪ್ಟೆಂಬರ್ 23 ರಂದು    ಆರೋಗ್ಯ ವಿಮೆ ಯೋಜನೆ ಆಯುಷ್ಮನ್ ಭಾರತ್  ಚಾಲನೆಗೊಂಡಿದ್ದು, ಈಗ್ಗಾಗಲೇ  ಫಲಾನುಭವಿಗಳನ್ನು ಗುರುತಿಸಲಾಗಿದೆ.  ಈ ಯೋಜನೆಯಡಿ ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಕರಿಷ್ಮಾ ಮೊದಲ ಫಲಾನುಭವಿಯಾಗಿದ್ದಾರೆ ಎಂದು ಅವರು ಹೇಳಿದರು.

ಪೋಷಣ್ ಮಹಾ  ಕಾರ್ಯಕ್ರಮದಡಿಯಲ್ಲಿ  ದೇಶದಲ್ಲಿನ ಪ್ರತಿಯೊಂದು  ಮನೆಯಲ್ಲೂ ಪೌಷ್ಟಿಕತೆ ಮಹತ್ವ ಕುರಿತು  ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ ಪ್ರಧಾನಿ, ಆಧುನಿಕ ತಂತ್ರಜ್ಞಾನ ಮೂಲಕ  ಆರೋಗ್ಯ ಸುಧಾರಣೆ ಹಾಗೂ ನ್ಯೂಟ್ರಿಷನ್ ಮಿಷನ್  ಸಾಧನೆಯಲ್ಲಿ  ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವನ್ನು ಶ್ಲಾಘಿಸಿದರು.

Copyright � 2012 Kannadaprabha.com