Kannadaprabha The New Indian Express
4-1 ಅಂತರದಲ್ಲಿ ಸರಣಿ ಸೋತಿದ್ದರೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ: ವಿರಾಟ್ ಕೊಹ್ಲಿ 
By select 
12 Sep 2018 12:00:00 AM IST

ಲಂಡನ್ :  ನಿನ್ನೆ ಮುಕ್ತಾಯಗೊಂಡ  ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಭಾರತ 4-1  ಅಂತರದಲ್ಲಿ ಸೋತಿದ್ದರೂ  ಇದನ್ನೇ  ಆಧಾರವಾಗಿಟ್ಟುಕೊಂಡು   ಟೀಂ ಇಂಡಿಯಾ ಆಟ ಆಡಿಲ್ಲ ಎನ್ನುವುದು  ಸರಿಯಲ್ಲ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ  ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇಂಗ್ಲೆಂಡ್ ನಮ್ಮಗಿಂತ ಉತ್ತಮವಾಗಿ ಆಡಿದ್ದರಿಂದ 4-1  ಅಂತರದಲ್ಲಿ ಸೋತಿದ್ದೇವೆ.  ಆದರೆ,  ಲಾರ್ಡ್ಸ್ ಟೆಸ್ಟ್   ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ  ನಾವು  ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾದ್ದೇವು ಎಂದು ಕೊಹ್ಲಿ  ಪಂದ್ಯದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಹೇಳಿದರು.

ನಾವು ಇಂತಹ ಪಂದ್ಯವನ್ನು  ನಿರೀಕ್ಷೆ ಮಾಡಿರಲಿಲ್ಲ.  ಆದರೆ, ಉಭಯ  ತಂಡಗಳು ಸರಣಿಯನ್ನು ಪೈಪೋಟಿಯಿಂದ ತೆಗೆದುಕೊಂಡಿದ್ದಾಗಿ  ತಿಳಿಸಿದ ಕೊಹ್ಲಿ, ಈ ಸರಣಿಯಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ದೊಡ್ಡ ಪ್ರಚಾರ ಸಿಕ್ಕಂತಾಗಿದೆ ಎಂದರು.

 ಇಂಗ್ಲೆಂಡ್ ತಂಡ ವೃತ್ತಿಪರ ಆಟಗಾರರಿಂದ ಕೂಡಿದೆ. ಎರಡರಿಂದ ಮೂರು ಓವರ್ ಗಳಲ್ಲಿ ಪಂದ್ಯ ಬದಲಾಗುತ್ತಿದುದ್ದನ್ನು ನಾವು  ಗಮನಿಸಿದ್ದೇವೆ .ಅವರು ನಿರ್ಭೀತಿಯಿಂದ ಆಡಿದ್ದರಿಂದ  ನಾವೂ ಸೋಲಬೇಕಾಯಿತು ಎಂದು ವಿರಾಟ್ ಕೊಹ್ಲಿ ತಿಳಿಸಿದರು.

 ಟೆಸ್ಟ್ ಪಂದ್ಯದಲ್ಲಿ ಶತಕಗಳನ್ನು ಗಳಿಸಿದ ಕೆ. ಎಲ್ . ರಾಹುಲ್ ಹಾಗೂ ರಿಷಬ್ ಪಂತ್  ಅವರನ್ನು ಹೊಗಳಿದ ವಿರಾಟ್ ಕೊಹ್ಲಿ, ಈ ಯುವ ಆಟಗಾರರಿಗೆ ಹೆಚ್ಚಿನ ಕ್ರೆಡಿಟ್ ಸಲ್ಲಬೇಕಾಗುತ್ತದೆ. ಅವರು ಭಾರತದ ಭವಿಷ್ಯದ ತಾರೆಗಳು  ಎಂದು ಹೊಗಳಿದ ಕೊಹ್ಲಿ, ಮೊದಲ   ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿದ ರಿಷಬ್ ಪಂತ್ ಅವರನ್ನು ವಿಶೇಷ ಮಾತುಗಳಿಂದ ಅಭಿನಂದನೆ ಸಲ್ಲಿಸಿದರು. 

 ಭಾರತ ಸರಣಿ ಸೋಲಿನ ಹೊರತಾಗಿಯೂ ದೊಡ್ಡ ಮಟ್ಟದ ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡಿದೆ. ಇದರಿಂದ ಅನೇಕರ ಪ್ರೀತಿ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ  ಉತ್ತಮ ರೀತಿಯಲ್ಲಿ ಇದಕ್ಕೆ ಸ್ಪಂದಿಸುವುದಾಗಿ ಹೇಳಿದ ವಿರಾಟ್ ಕೊಹ್ಲಿ,  ಉತ್ತಮ ಗುಣಗಳಿಂದಾಗಿ ಸ್ಯಾಮ್ ( ಕ್ಯೂರನ್)  ಗೆ ಸರಣಿ ಶ್ರೇಷ್ಠ ಪ್ರಶಸ್ತಿ ದೊರೆಯಲು ಮತ ಮಾಡಿದ್ದಾಗಿ ತಿಳಿಸಿದರು.

ಇಂಗ್ಲೆಂಡ್ ಪಿಚ್ ಗಳು ಕುತೂಹಲಕಾರಿಯಾಗಿರುತ್ತದೆ. ಇಲ್ಲಿನ  ಕ್ರಿಕೆಟ್ ಅಭಿಮಾನಿಗಳ ಬೆಂಬಲ ಪಂದ್ಯಗಳಿಗೆ ಉತ್ತಮವಾಗಿರುತ್ತದೆ ಎಂದು ಹೇಳಿದ ವಿರಾಟ್ ಕೊಹ್ಲಿ  ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟೈರ್ ಕುಕ್ ಅವರಿಗೆ ಅಭಿನಂದನೆ ಸಲ್ಲಿಸಿದರು.  ಕುಕ್ ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುವುದಾಗಿ ಕೊಹ್ಲಿ ಹೇಳಿದರು.

Copyright � 2012 Kannadaprabha.com