Kannadaprabha The New Indian Express
ಒಂದೇ ವಾರದಲ್ಲಿ ನನ್ನ ಸಂಸ್ಥೆ ಮುಚ್ಚಲಾಗಿದೆ, ನನ್ನ 6 ಸಾವಿರ ಉದ್ಯೋಗಿಗಳು, ಷೇರುದಾರರ ಗತಿ ಏನು?: ಮೆಹುಲ್ ಚೋಕ್ಸಿ 
By select 
12 Sep 2018 12:00:00 AM IST

ನವದೆಹಲಿ: ಕೇವಲ ಒಂದು ವಾರದ ಅವಧಿಯಲ್ಲಿ ನನ್ನ ಎಲ್ಲ ಸಂಸ್ಥೆಗಳನ್ನೂ ಮುಚ್ಚಲಾಗಿದ್ದು, ನನ್ನ 6 ಸಾವಿರ ಮಂದಿ ಉದ್ಯೋಗಿಗಳು ಇಂದು ನಿರುದ್ಯೋಗಿಗಳಾಗಿದ್ದಾರೆ. ಷೇರುದಾರರು ಬೀದಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಗೀತಾಂಜಲಿ ಜೆಮ್ಸ್ ಸಂಸ್ಥೆಯ ಮುಖ್ಯಸ್ಥ ಮೆಹುಲ್ ಚೋಕ್ಸಿ ಹೇಳಿದ್ದಾರೆ.

ಪ್ರಸ್ತುತ ಆ್ಯಂಟಿಗುವಾ ನಾಗರಿಕತ್ವ ಪಡೆದು ಅಲ್ಲಿನ ರಹಸ್ಯ ಸ್ಥಳದಲ್ಲಿರುವ ಮೆಹುಲ್ ಚೋಕ್ಸಿ, ಅಲ್ಲಿಂದಲೇ ಸುದ್ದಿಸಂಸ್ಥೆಯೊಂದಕ್ಕೆ ವಿಡಿಯೋ ಸಂದರ್ಶನ ನೀಡಿದ್ದಾರೆ. ಈ ವೇಳೆ ಚೋಕ್ಸಿ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ಅಲ್ಲ ಗಳೆದಿದ್ದು, ಜಾರಿ ನಿರ್ದೇಶನಾಲಯ ಮಾಡಿರುವ ಎಲ್ಲ ಆರೋಪಗಳೂ ಸುಳ್ಳು ಎಂದು ಹೇಳಿದ್ದಾರೆ.

'ಜಾರಿ ನಿರ್ದೇಶನಾಲಯ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಹಾಗೂ ಆಧಾರ ರಹಿತ. ಇಡಿ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶಗಳೇ ಇಲ್ಲ. ಕಾನೂನು ಬಾಹಿರವಾಗಿ ನನ್ನ ಆಸ್ತಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಕೇವಲ ಒಂದು ವಾರದ ಅವಧಿಯಲ್ಲಿ ನನ್ನ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಅಲ್ಲಿದ್ದ 6 ಸಾವಿರ ಜನ ಕಾರ್ಮಿಕರು ಇದೀಗ ನಿರೋದ್ಯೋಗಿಗಳಾಗಿದ್ದಾರೆ. ಅಂತೆಯೇ ಸಂಸ್ಥೆಯನ್ನು ನಂಬಿ ಹೂಡಿಕೆ ಮಾಡಿದ್ದ ಷೇರುದಾರರು ತಮ್ಮ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ' ಎಂದು ಹೇಳಿದ್ದಾರೆ.

'ನಾನು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ನನ್ನ ಪಾಸ್ ಪೋರ್ಟ್ ರದ್ದು ಮಾಡಲಾಗಿದೆ. ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆದಾಗ ಈ ಬಗ್ಗೆ ನನಗೆ ಮಾಹಿತಿ ತಿಳಿಯಿತು. ಫೆ.16ರಂದು ತನ್ನ ಪಾಸ್ ಪೋರ್ಟ್ ಅನ್ನು ಭಾರತ  ಸರ್ಕಾರ ರದ್ದು ಮಾಡಿದೆ. ಫೆಬ್ರವರಿ 20ರಂದು ನನಗೆ ಪಾಸ್ ಪೋರ್ಟ್‌ ತಡೆಹಿಡಿದಿರುವ ಕುರಿತು ಇ-ಮೇಲ್‌ ಬಂದಿದೆ. ಅಲ್ಲದೆ ದೇಶದ ಭದ್ರತೆಗೆ ತೊಡಕಾಗುವ ಸಂಬಂಧ ಪಾಸ್ ಪೋರ್ಟ್‌ ತಡೆಹಿಡಿದಿರುವುದಾಗಿ ಇ-ಮೇಲ್‌ ಮಾಡಿದ್ದಾರೆ. ದೇಶದ ಭದ್ರತೆ ಧಕ್ಕೆಯಾಗುವ ಕೆಲಸ ನಾನೇನು ಮಾಡಿದ್ದೇನೆ ಎಂದು ತಿಳಿಯುತ್ತಿಲ್ಲ. ಈ ಸಂಬಂಧ ಮುಂಬೈ ಪ್ರಾದೇಶಿಕ ಪಾಸ್ ಪೋರ್ಟ್‌ ಕಚೇರಿಗೆ ಸ್ಪಷ್ಟೀಕರಣ ಕೇಳಿ ಇ-ಮೇಲ್‌ ಮಾಡಿದ್ದೇನೆ. ಆದರೂ ಈ ಬಗ್ಗೆ ಅಲ್ಲಿಂದ ಉತ್ತರ ಬಂದಿಲ್ಲ. ವಿನಾ ಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಚೋಕ್ಸಿ ಕಿಡಿಕಾರಿದ್ದಾರೆ.

Copyright � 2012 Kannadaprabha.com