Kannadaprabha The New Indian Express
ಲಂಡನ್: ಕರ್ನಾಟಕ ಹೈ ಕೋರ್ಟ್ ಎದುರು 'ಸಮಗ್ರ ಪರಿಹಾರ'ದ ಪ್ರಸ್ತಾಪ ಮಾಡಿದ್ದಾಗಿ ವಿಜಯ್ ಮಲ್ಯ ಹೇಳಿಕೆ 
By select 
12 Sep 2018 12:00:00 AM IST

ಲಂಡನ್: ಬಹುಕೋಟಿ ರು. ವಂಚನೆ, ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್ ತಾವು ಈ ಮುನ್ನವೇ ಮಾಡಿದ್ದ "ಪರಿಹಾರ" ಪ್ರಸ್ತಾಪವು ತನ್ನ ಬಾಕಿ ಮೊತ್ತವನ್ನು ಪಾವತಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಮಲ್ಯ ಬುಧವಾರ ತಮ್ಮ ಮೇಲಿನ ಆರೋಪ ವಿಚಾರಣೆಗಾಗಿ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಸಿಬಿಐ ಸಲ್ಲಿಸಿದ್ದ ಮುಂಬೈ ಜೈಲು ಕುರಿತ ವಿಶೇಷ ವೀಡಿಯೋವನ್ನು ನ್ಯಾಯಾಧೀಶರು ಪರಿಶೀಲನೆ ನಡೆಸಿದ್ದಾರೆ.

ಕಿಂಗ್ ಫಿಷರ್ ಸಂಸ್ಥೆಯ ಮಾಜಿ ದೊರೆ ಮಲ್ಯ ಕಳೆದ ವರ್ಷ ಏಪ್ರಿಲ್ ನಲ್ಲಿ ಬಂಧನಕ್ಕೊಳಗಾದಂದಿನಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂದು ನ್ಯಾಯಾಲಯದ ಹೊರಗೆ ಎದುರಾದ ಪತ್ರಕರ್ತರಿಗೆ ತಮ್ಮ ಎಂದಿನ ವಿಭಿನ್ನ ಶೈಲಿಯಲ್ಲಿ ಉತ್ತರಿಸಿದ ಮಲ್ಯ "ನ್ಯಾಯಾಲಯವೇ ಎಲ್ಲವನ್ನೂ ನಿರ್ಧರಿಸಲಿದೆ" ಎಂದಿದ್ದಾರೆ.

"ನಾನು ಭರವಸೆ ಹೊಂದಿದ್ದೇನೆ,  ಗೌರವಾನ್ವಿತ ನ್ಯಾಯಾಧೀಶರು ಸರಿಯಾಗಿ ತೀರ್ಮಾನಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ಎಲ್ಲರೂ ನನ್ನಿಂದ ಬರಬೇಕಾದ ಬಾಕಿಯನ್ನು ಪಡೆಯಲಿದ್ದಾರೆ ಮತ್ತು ಅದುವೇ ನನ್ನ ಪ್ರಾಥಮಿಕ ಗುರಿಯಾಗಿದೆ"  ಸುಮಾರು 9 ಸಾವಿರ ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿರುವ ವಿಜಯ್ ಮಲ್ಯ ಹೇಳಿದರು.

ಮಲ್ಯ ಪ್ರಕಾರ, ಅವರು ಮತ್ತು ಯುನೈಟೆಡ್ ಬ್ರೂವರೀಸ್ ಗ್ರೂಪ್ (ಯುಬಿಎಚ್ಎಲ್) ಜೂನ್ 22, 2018 ರಂದು ಕರ್ನಾಟಕ ಹೈಕೋರ್ಟ್ ಗೆ ಸುಮಾರು  13,900 ಕೋಟಿ ರೂ.ಆಸ್ತಿಯ ಆಧಾರವನ್ನು ನೀಡಿದ್ದು ಸಾಲ ಮರುಪಾವತಿ ಮಾಡಿಯೇ ತೀರುವೆನೆಂದು ಅರ್ಜಿ ಸಲ್ಲಿಸಿದರು.

ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಆಸ್ತಿಗಳ ಮಾರಾಟವನ್ನು ಅನುಮತಿಸಲು ಅವರು ನ್ಯಾಯಾಲಯವನ್ನು ಕೋರಿದ್ದರು.  ಸಾರ್ವಜನಿಕ ವಲಯದ ಬ್ಯಾಂಕುಗಳೂ ಸೇರಿ ವಿವಿಧ ಬ್ಯಾಂಕುಗಳಿಂದ ಪಡೆದ ಸಾಲಗಳ ಮರುಪಾವತಿಗೆ ಈ ಮೂಲಕ ನ್ಯಾಯಾಲಯ ಅವಕಾಶ ಒದಗಿಸಬೇಕು ಎಂದು ಮಲ್ಯ ಕೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ 4 ರಂದು ಲಂಡನ್ ನ್ಯಾಯಾಲಯದಲ್ಲಿ ಮಲ್ಯ ಹಸ್ತಾಂತರ ವಿಚಾರವಾಗಿ  ವಿಚಾರಣೆ ಪ್ರಾರಂಭವಾಗಿದೆ 

Copyright � 2012 Kannadaprabha.com