Kannadaprabha The New Indian Express
ಲವ್ ರಾತ್ರಿ: ಸಲ್ಮಾನ್ ಖಾನ್ ವಿರುದ್ಧ ಎಫ್ ಐಆರ್ ದಾಖಲಿಸಲು ಬಿಹಾರ ಕೋರ್ಟ್ ಆದೇಶ! 
By select 
12 Sep 2018 12:00:00 AM IST

ಮುಜಾಫರ್ ನಗರ : ಬಾಲಿವುಡ್ ಸೂಪರ್ ಸ್ಟಾರ್  ಸಲ್ಮಾನ್ ಖಾನ್  ಹೋಮ್  ಪ್ರೋಡಕ್ಷನ್ ನಡಿ   ತಯಾರಾಗುತ್ತಿರುವ,  ಸಲ್ಮಾನ್ ಖಾನ್  ಅಳಿಯ ಆಯುಷ್ ಶರ್ಮಾ ಹಾಗೂ ವಾರಿನಾ ಹುಸೈನ್ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಲವ್ ರಾತ್ರಿ  ಚಿತ್ರಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.

ಈ ಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆರೋಪದ ಮೇರೆಗೆ  ಸಲ್ಮಾನ್ ಖಾನ್ ಹಾಗೂ ಇತರ ಏಳು ಮಂದಿ ಸಹಾಯಕ ನಟರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ  ಇಲ್ಲಿನ ನ್ಯಾಯಾಲಯ ಆದೇಶ ನೀಡಿದೆ.

ಲವ್ ರಾತ್ರಿ  ಶೀರ್ಷಿಕೆ ಇಡುವ ಮೂಲಕ ಹಿಂದೂಗಳ ನವರಾತ್ರಿ ಆಚರಣೆಯನ್ನು ಸಲ್ಮಾನ್ ಖಾನ್ ನಿಂದಿಸಿದ್ದಾರೆ. ಆಶ್ಲೀಲತೆಯನ್ನು  ಉತ್ತೇಜಿಸುವ ರೀತಿಯಲ್ಲಿ ಚಿತ್ರ ಮಾಡಲಾಗಿದೆ ಎಂದು ಆರೋಪಿಸಿ ವಕೀಲ ಸುದೀರ್ ಓಜಾ  ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ   ಮುಜಾಫರ್ ನಗರ ಉಪ-ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶೈಲೇಂದ್ರ ರೈ,  ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಮಿಥನ್ ಪುರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಐಪಿಸಿ  ಸೆಕ್ಷನ್ 295 ( ಪೂಜಾ ಸ್ಥಳ ಹಾನಿ ಅಥವಾ ಅಶುದ್ಧಗೊಳಿಸುವುದು)  ಸೆಕ್ಷನ್ 298 ( ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ನಿಂದನೆ ) ಸೆಕ್ಷನ್ 153 (ಹಿಂಸಾಚಾರಕ್ಕೆ ಪ್ರಚೋದಿಸುವ ಉದ್ದೇಶ  ) ಸೆಕ್ಷನ್ 120 ( ಬಿ )  (ಅಪರಾಧಕ್ಕೆ ಪಿತೂರಿ ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Copyright � 2012 Kannadaprabha.com