Kannadaprabha The New Indian Express
ವಿಜಯ್ ಮಲ್ಯ ಹಸ್ತಾಂತರ ಕುರಿತು ಡಿಸೆಂಬರ್ 10ಕ್ಕೆ ತೀರ್ಪು: ಯುಕೆ ಕೋರ್ಟ್ 
By select 
12 Sep 2018 12:00:00 AM IST

ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ವಿಚಾರಣೆಯನ್ನು ಪೂರ್ಣಗೊಳಿಸಿದ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್, ಡಿಸೆಂಬರ್ 10ಕ್ಕೆ ತೀರ್ಪು ಕಾಯ್ದಿರಿಸಿದೆ.

ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 4ರಿಂದ ವಿಚಾರಣೆ ನಡೆಯುತ್ತಿದ್ದು, ಇಂದು ಅಂತಿಮ ವಾದ-ಪ್ರತಿವಾದ ಆಲಿಸಿದ ಕೋರ್ಟ್, ಡಿಸೆಂಬರ್ 10ಕ್ಕೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ತೀರ್ಪು ಪ್ರಕಟಿಸಲಿದೆ.

ವಿಜಯ್ ಮಲ್ಯ ಅವರಾಗಲಿ, ಕಿಂಗ್ ಫಿಶರ್ ಸಂಸ್ಥೆಯಾಗಲಿ ಕೆಟ್ಟ ಉದ್ದೇಶಗಳಿಂದ ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಹಾಕಿದ್ದರು ಎಂದು ಹೇಳಲು ಯಾವುದೇ ಪುರಾವೆ ಇಲ್ಲ ಎಂದು ಮಲ್ಯ ಪರ ವಕೀಲ ಕ್ಲೇರ್ ಮೊಂಟ್ಗೊಮೆರಿ ಅವರು ವಾದಿಸಿದರು.

ಮಲ್ಯ ಅವರ ಕಿಂಗ್ ಫಿಶರ್ ಸಂಸ್ಥೆ ನಷ್ಟದಲ್ಲಿದೆ ಎಂದು ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಚೆನ್ನಾಗಿ ತಿಳಿದಿದ್ದರು. ಮಲ್ಯ ತಮ್ಮ ಸಂಸ್ಥೆಯ ನಷ್ಟವನ್ನು ಮರೆಮಾಚಲು ಯತ್ನಿಸಿದ್ದರೆನ್ನುವ ಸರ್ಕಾರದ ಆರೋಪ ನಿರಾಧಾರ ಎನ್ನುವುದಕ್ಕೆ ಐಡಿಬಿಐ ಅಧಿಕಾರಿಗಳಿಂದ ಬಂದ ಈ ಮೇಲ್ ಗಳೇ ಸಾಕ್ಷಿ ಮಲ್ಯ ಪರ ವಕೀಲರು ಕೋರ್ಟ್ ಗೆ ತಿಳಿಸಿದರು.

ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಷ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ಸಹ ಪೂರ್ಣಗೊಂಡಿದೆ. 

62 ವರ್ಷದ ಮದ್ಯ ದೊರೆ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ  ಬಂಧನಕ್ಕೊಳಗಾದ ನಂತರ ಹಸ್ತಾಂತರ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು, ವಿದೇಶದಲ್ಲಿದ್ದುಕೊಂಡೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.

 ಸಿಬಿಐ ಎಲ್ಲಾ ದಾಖಲೆಗಳನ್ನು ಲಂಡನ್   ನ್ಯಾಯಾಲಯಕ್ಕೆ ಸಲ್ಲಿಸಿದೆ. ಮಾಜಿ ಐಡಿಬಿಐ ಬ್ಯಾಂಕು  ಉಪ ವ್ಯವಸ್ಥಾಪಕ ನಿರ್ದೇಶಕ ಬಿಕೆ ಪಾತ್ರ ವಿರುದ್ಧ ಪಿತೂರಿ ಪ್ರಕರಣ ಸೇರಿದಂತೆ ಎಲ್ಲಾ ವಿಚಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನಷ್ಟದಲ್ಲಿದ್ದ ಕಿಂಗ್ ಪಿಶರ್ ಏರ್ ಲೈನ್ಸ್ ಗಾಗಿ ಕೆಲ ಪ್ರಕ್ರಿಯೆಗಳನ್ನು ಉಲ್ಲಂಘಿಸಿ ಮಲ್ಯ ಸಾಲ ಪಡೆದುಕೊಂಡಿದ್ದಾರೆ ಎಂದು ತನಿಖಾ ದಳ ಹೇಳಿದೆ.

ವಿಜಯ್ ಮಲ್ಯ ಹಸ್ತಾಂತರ ಪ್ರಕರಣದಲ್ಲಿ ಒಂದು ವೇಳೆ ನ್ಯಾಯಾಧೀಶರು ಭಾರತದ ಪರವಾಗಿ ತೀರ್ಪು ನೀಡಿದ್ದರೆ ಮಲ್ಯ ಅವರನ್ನು ಭಾರತಕ್ಕೆ  ಹಸ್ತಾಂತರ ಆದೇಶಕ್ಕೆ   ಲಂಡನ್  ಗೃಹ ಕಾರ್ಯದರ್ಶಿ ಸಹಿ  ಹಾಕಲು ಎರಡು ತಿಂಗಳು ಬೇಕಾಗುತ್ತದೆ.
ಆದಾಗ್ಯೂ, ಮ್ಯಾಜಿಸ್ಟ್ರೇಟ್  ನ್ಯಾಯಾಲಯದ ತೀರ್ಪಿನ ವಿರುದ್ಧ ಉನ್ನತ ನ್ಯಾಯಾಂಗಕ್ಕೆ ಮೇಲ್ಮನವಿ ಸಲ್ಲಿಸಲು ಇಬ್ಬರಿಗೂ ಅವಕಾಶವಿದೆ.

ಒಂದು ವೇಳೆ ಮಲ್ಯ ಅವರನ್ನು ಲಂಡನ್ ನಿಂದ ಹಸ್ತಾಂತರಿಸಿದ್ದರೆ ಅವರನ್ನು ಮುಂಬೈಯ ಅರ್ಥರ್ ರಸ್ತೆಯಲ್ಲಿರುವ ಕಾರಾಗೃಹದಲ್ಲಿಡುವ ಸಾಧ್ಯತೆ ಇದೆ. ಈ ಕಾರಾಗೃಹದ ಪೋಟೋಗಳನ್ನು  ಲಂಡನ್ ಮೂಲದ ಕಾರಾಗೃಹ ತಜ್ಞ ಡಾ. ಅಲನ್ ಮಿಚ್ಚೆಲ್  ಇಟ್ಟುಕೊಂಡಿದ್ದು,ಈ ದಾಖಲೆಗಳನ್ನು  ಮಲ್ಯ ರಕ್ಷಣಾ ತಂಡ  ನ್ಯಾಯಾಲಯಕ್ಕೆ ಸಲಿಸಲಿದೆ ಎನ್ನಲಾಗುತ್ತಿದೆ.

ಮಾರ್ಚ್ 2016 ರಿಂದಲೂ ವಿಜಯ್ ಮಲ್ಯ ಲಂಡನ್ ನಲ್ಲಿದ್ದು, ಸಿಬಿಐ ಹಾಗೂ ಇಡಿ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡುತ್ತಿವೆ. ತನ್ನ ಬಳಿ ಇರುವ ಆಸ್ತಿ ಮಾರಾಟ ಮಾಡಿ ಬ್ಯಾಂಕುಗಳಿಗೆ ಸಾಲ ಹಿಂದಿರುಗಿಸುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.

Copyright � 2012 Kannadaprabha.com