Kannadaprabha The New Indian Express
ಇದೇ ಮೊದಲು: 32 ಕಿ.ಮೀ ದೂರದಿಂದ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು! 
By select 
06 Dec 2018 12:00:00 AM IST

ಗಾಂಧಿನಗರ: ವಿಶ್ವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  ಮೊದಲ ಟೆಲೆರೊಬೊಟಿಕ್ ಹೃದಯರಕ್ತನಾಳದ ಸ್ಟೆಂಟ್ ಶಸ್ತ್ರಚಿಕಿತ್ಸೆಯನ್ನು ಗುಜರಾತ್ ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. 

ಗುಜರಾತ್ ನ ಗಾಂಧಿನಗರದಿಂದ 32 ಕಿಮೀ ದೂರದಲ್ಲಿದ್ದ ಮಹಿಳಾ ರೋಗಿಗೆ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕಾರ್ಡಿಯಾಲಜಿಸ್ಟ್ ಡಾ. ತೇಜಸ್ ಪಟೇಲ್ ರೋಬೋಟಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.  ಇದೇ ಮಹಿಳೆಗೆ ಹೃದಯಾಘಾತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಡಾ. ಪಟೇಲ್ ಕೆಲವು ದಿನಗಳ ಹಿಂದೆ ರಕ್ತನಾಳಗಳಿಂದ ಬ್ಲಾಕೇಜ್ ನ್ನು ತೆಗೆದಿದ್ದರು. ಆದರೆ ಮತ್ತೆ  ಬ್ಲಾಕೇಜ್ ಪತ್ತೆಯಾಗಿತ್ತು, ಈ ವೇಳೆ ಡಾ.ಪಟೇಲ್ ಸ್ವಾಮಿ ನಾರಾಯಣ ಅಕ್ಷರಧಾಮ ದೇವಾಲಯದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ದೇವಾಲಯದಿಂದಲೇ ಕಟಿಂಗ್ ಎಡ್ಜ್ ಟೆಕ್ನಾಲಜಿ (cutting-edge technology) ಯನ್ನು ಬಳಸಿಕೊಂಡು ವಿಶ್ವದ ಮೊದಲ ಟೆಲೆರೊಬೊಟಿಕ್ ಕಾರ್ನರಿ ಇಂಟ್ರಾವೆನ್ಷನ್ ನ್ನು ಯಶಸ್ವಿಯಾಗಿ ಮಾಡಿದ್ದಾರೆ.

ರೋಬೋಟಿಕ್ ಶಸ್ತ್ರಚಿಕಿತ್ಸೆಯಾದರೂ ಸಹ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಯಲ್ಲಿಯೂ ವೈದ್ಯರು ಜಾಗರೂಕರಾಗಿದ್ದರು.  ಈ ತಂತ್ರಜ್ಞಾನದ ಸಹಾಯದಿಂದ ವೈದ್ಯರು ರೋಗಿ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಇಂಟರ್ ನೆಟ್, ಕ್ಯಾಥ್ ಲ್ಯಾಬ್, ರೋಬೋಟಿಕ್ ಆರ್ಮ್  
ಸಹಾಯದಿಂದ ಅವರನ್ನು ತಲುಪಿ ಶಸ್ತ್ರಚಿಕಿತ್ಸೆ ನಿರ್ವಹಣೆ ಮಾಡಬಹುದಾಗಿದೆ. 

ಮಹಿಳೆಗೆ ಈ ಮುಂಚೆಯೂ ಹೃದಯನಾಳದಲ್ಲಿ ಬ್ಲಾಕೇಜ್ ಕಂಡುಬಂದಿತ್ತು, ಅದಾದ ನಂತರ ಮತ್ತೆ ಬ್ಲಾಕೇಜ್ ಇರುವುದು ಕಂಡುಬಂದಿತ್ತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ಈ ಇತಿಹಾಸ ನಿರ್ಮಾಣ ಸ್ವಾಮಿ ನಾರಾಯಣ ಅಕ್ಷರಧಾಮ ದೇವಾಲಯದ ಪ್ರಮುಖ್ ಸ್ವಾಮಿ ಮಹಾರಾಜರಿಗೆ ಅರ್ಪಿಸುತ್ತೇನೆ ಎಂದು ಡಾ.ಪಟೇಲ್ ತಿಳಿಸಿದ್ದಾರೆ. 

1986 ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಸ್ಟೆಂಟ್ ಶಸ್ತ್ರಚಿಕಿತ್ಸೆಯಾದ 32 ವರ್ಷಗಳ ನಂತರ ಈ ರೀತಿಯ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. 

Copyright � 2012 Kannadaprabha.com