Kannadaprabha The New Indian Express
ರಾಜ್ಯ ಬಜೆಟ್ 2019: ಶೇ.9.6ರಷ್ಟು ಆರ್ಥಿಕ ಬೆಳವಣಿಗೆ ನಿರೀಕ್ಷೆ: ಸಿಎಂ ಕುಮಾರಸ್ವಾಮಿ 
By select 
08 Feb 2019 12:00:00 AM IST

ಬೆಂಗಳೂರು: 2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶೇ.9.6ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವ ನಿರೀಕ್ಷೆ ಹೊಂದಿದೆ ಎಂದು ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಜಂಟಿ ಅಧಿವೇಶನದಲ್ಲಿ 2019ರ ರಾಜ್ಯ ಬಜೆಟ್‍ ಮಂಡಿಸಿದ ಅವರು, 2017-18ರಲ್ಲಿ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ ಬೆಳವಣಿಗೆ ಶೇ.10.4ರಷ್ಟಿತ್ತು. ಆದರೆ ಕೃಷಿ ಬೆಳವಣಿಗೆ ಇಳಿಕೆಯಿಂದಾಗಿ ಈ ವರ್ಷ ಆರ್ಥಿಕ ಬೆಳವಣಿಗೆ ಕುಂಠಿತವಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿನ ಮಳೆ ಅಭಾವದಿಂದಾಗಿ ಈ ಸಲ ಕೃಷಿ ಬೆಳವಣಿಗೆ ಶೇ.4.8ಕ್ಕೆ ಕುಸಿಯಬಹುದು. ಆದರೆ ಕೈಗಾರಿಕೆ ಮತ್ತು ಸೇವಾ ವಲಯ 2018-19ರಲ್ಲಿ ಕ್ರಮವಾಗಿ ಶೇ.7.4 ಮತ್ತು ಶೇ.12.3ರಷ್ಟು ಪ್ರಗತಿ ಸಾಧಿಸಲಿವೆ. ಕಳೆದ ವರ್ಷ ಈ ಪ್ರಮಾಣ ಶೇ. 4.7 ಮತ್ತು ಶೇ.12.2ರಷ್ಟಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದೇ ವೇಳೆ ಕುಮಾರಸ್ವಾಮಿ ಅವರು ನೀರಾವರಿಗೆ 17, 202 ಕೋಟಿ ರೂ ಅನುದಾನ ಮೀಸಲಿರಿಸಿದ್ದು, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ 46, 850 ಕೋಟಿ ರೂಗಳನ್ನು ಮೀಸಲಿಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

2,34,153 ಕೋಟಿ ರೂ. ಗಾತ್ರದ ಕರ್ನಾಟಕ ಬಜೆಟ್ ಮಂಡನೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2019-20ನೇ ಸಾಲಿನಲ್ಲಿ ಒಟ್ಟು 2,34,153 ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.  ಈ ಸಾಲಿನಲ್ಲಿ ಸರ್ಕಾರದ ಒಟ್ಟಾರೆ ಸ್ವೀಕೃತಿ 2,30,738 ಕೋಟಿ ರೂ. ಆಗಿದ್ದು, 1,81,863 ಕೋಟಿ ರೂ. ಆದಾಯ ಸಂಗ್ರಹ ನಿರೀಕ್ಷೆಯಿದೆ. 48,601 ಕೋಟಿ ರೂ. ಸಾರ್ವಜನಿಕ ಸಾಲ, 48,876 ಕೋಟಿ ರೂ. ಬಂಡವಾಳ ಹೂಡಿಕೆ ಅಂದಾಜಿಸಲಾಗಿದೆ. ಕೃಷಿ ಸಾಲ ಮನ್ನಾಕ್ಕೆ 6500 ಕೋಟಿ ರೂ. ಮೀಸಲಿಡಲಾಗಿದ್ದು, ಕೃಷಿ ಮತ್ತು ಸಂಬಂಧಿತ ಕ್ಷೇತ್ರಕ್ಕೆ 46,853 ಕೋಟಿ ರೂ. ಅನುದಾನ ನೀಡಲಾಗಿದೆ.  ಜಿಎಸ್ಟಿ ಅಡಿಯಲ್ಲಿ 76,406 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷಿತ.

Copyright � 2012 Kannadaprabha.com