Kannadaprabha The New Indian Express
ಗಿರೀಶ್ ಗೌಡ ಚುನಾವಣಾ ರಾಯಭಾರಿಯಾಗಿ ನೇಮಕ, ವಿಕಲಚೇತನರಿಗೆ ವಿಶೇಷ ಸೌಲಭ್ಯ 
By select 
20 Mar 2019 12:00:00 AM IST

ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾವಣೆಯ ರಾಜ್ಯ ರಾಯಭಾರಿಯಾಗಿ ಪದ್ಮಶ್ರೀ‌ ಪುರಸ್ಕೃತ ಹಾಗೂ ಪ್ಯಾರಾ ಒಲಂಪಿಕ್ಸ್ ಬೆಳ್ಳಿಪದಕ ವಿಜೇತ ಕ್ರೀಡಾಪಟು ಗಿರೀಶ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದು ಸುದ್ದಿಗೊಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು, 2018ರ ವಿಧಾನಸಭಾ ಚುನಾವಣೆಯಲ್ಲೂ ಚುನಾವಣಾ ರಾಯಭಾರಿಯಾಗಿದ್ದ ಗಿರೀಶ್ ಗೌಡ ಅವರು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು. 

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ದಿವ್ಯಾಂಗರ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. 4,03,907 ದಿವ್ಯಾಂಗರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, 35,739 ಮತಗಟ್ಟೆಗಳಲ್ಲಿ  ಮತ ಚಲಾಯಿಸಲಿದ್ದಾರೆ. ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ 35,739 ಗಾಲಿ ಕುರ್ಚಿಗಳು, 41,669 ಭೂತಗನ್ನಡಿಗಳು, 2,213 ಸಂಜ್ಞಾ ಭಾಷೆ ವಿವರಣೆಗಾರರು, 31,515 ಸಹಾಯಕರನ್ನು ಒದಗಿಸಲಾಗುವುದು. ಅಗತ್ಯ ಸಾರಿಗೆ ವ್ಯವಸ್ಥೆ ಕೂಡ ಕಲ್ಪಿಸಲಾಗುವುದು ಎಂದರು.

ಇದೇ ಮೊದಲ ಬಾರಿಗೆ ಮತಗಟ್ಟೆಯ ಹೊರಗೆ ಬ್ರೈಲ್ ಪೋಸ್ಟರ್ ಹಾಕಲಾಗುತ್ತದೆ. ದೃಷ್ಟಿ ದೋಷ ಉಳ್ಳವರು ತಾವು ಯಾವ ಅಭ್ಯರ್ಥಿಗೆ, ಎಷ್ಟನೇ ಸಂಖ್ಯೆಗೆ ಮತ ಚಲಾಯಿಸಬೇಕು ಎಂಬ ಮಾಹಿತಿಯನ್ನು ಈ ಪೋಸ್ಟರ್ ಮೂಲಕ ಪಡೆಯಬಹುದು. ಜೊತೆಗೆ, ಮತದಾರರಿಗೆ  ಬ್ರೈಲ್  ಮತದಾರರ ಮಾರ್ಗಸೂಚಿ ಕೈಪಿಡಿಯ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ ಎಂದರು. 

2018 ರಲ್ಲಿ ನಡೆದ ಚುನಾವಣೆಯಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ 26 ಮತಗಟ್ಟೆಗಳನ್ನು ಸಂಪೂರ್ಣವಾಗಿ ವಿಕಲಚೇತನ ಸಿಬ್ಬಂದಿ ನಿರ್ವಹಣೆ ಮಾಡಿದ್ದರು. ಇದು ಇತರ ವಿಕಲಚೇತರ ಸಿಬ್ಬಂದಿಯಲ್ಲಿ ಉತ್ಸಾಹ ಮೂಡಿಸಿದೆ. ಈ ಬಾರಿ ಯಾವುದೇ ಸಿಬ್ಬಂದಿ ಅಂಗವೈಕಲ್ಯದ ನೆಪವೊಡ್ಡಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೋರಿಲ್ಲ. ಈ ಬಾರಿ ಎಲ್ಲಾ ಜಿಲ್ಲೆಯಲ್ಲೂ ಕೆಲ‌ ಮತ ಗಟ್ಟೆಗಳನ್ನು ಸಂಪೂರ್ಣವಾಗಿ ಅವರೇ ನಿರ್ವಹಣೆ ಮಾಡಲಿದ್ದಾರೆ ಎಂದರು.

ಒಟ್ಟಾರೆ 1,512 ಫ್ಲೈಯಿಂಗ್ ಸ್ಕ್ವಾಡ್‍  ಹಾಗೂ 1,837 ಸ್ಟಾಟಿಕ್  ಕಾರ್ಯಪಡೆಗಳು, 320 ಅಬಕಾರಿ ತಂಡಗಳು ಹಾಗೂ 180 ವಾಣಿಜ್ಯ ತೆರಿಗೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ನಿಶ್ಚಲ ನಿಗಾ ತಂಡಗಳು  1.56 ಲಕ್ಷ ನಗದು, 21.50 ಲಕ್ಷ ರೂ. ಮೌಲ್ಯದ 1529.72 ಲೀಟರ್ ಮದ್ಯ, 1.47 ಲಕ್ಷ ರೂ. ಮೌಲ್ಯದ ಇತರೆ  ವಸ್ತುಗಳನ್ನು ವಶಪಡಿಸಿಕೊಂಡು 106 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಅಬಕಾರಿ ಇಲಾಖೆ 16.31 ಕೋಟಿ ರೂ. ಮೌಲ್ಯದ 3.61 ಲೀಟರ್ ಮದ್ಯ ವಶಪಡಿಸಿಕೊಂಡಿದ್ದು 812 ಗಂಭೀರ ಪ್ರಕರಣಗಳನ್ನು  ದಾಖಲಿಸಿದೆ. 

ಇಲ್ಲಿಯವರೆಗೆ 90,258 ಶಸ್ತ್ರಾಸ್ತ್ರ ಜಮೆ ಮಾಡಿಕೊಳ್ಳಲಾಗಿದ್ದು, 298 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.  9 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್ ಪಿಸಿ ಕಾಯ್ದೆಯಡಿ 37,426 ಪ್ರಕರಣ ದಾಖಲಿಸಲಾಗಿದೆ. ಅವುಗಳಲ್ಲಿ 28,173 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. 17,232 ವ್ಯಕ್ತಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಗಳನ್ನು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗಿರೀಶ್ ಗೌಡ ಮಾತನಾಡಿ,‌ ಮತದಾನ ಎಲ್ಲರ ಆದ್ಯ ಕರ್ತವ್ಯ ಮತ್ತು ಹಕ್ಕು, ದೇಶದ ಉಜ್ವಲ ಭವಿಷ್ಯಕ್ಕಾಗಿ, ಪ್ರತಿಯೊಬ್ಬರೂ ಮತದಾನ ಮಾಡಬೇಕು, ವಿಕಲ‌ಚೇತನರ ಮತದಾನಕ್ಕೆ ನೆರವಾಗಲು ವಿಶೇಷ ಸೌಲಭ್ಯ ಕಲ್ಪಿಸಿದ್ದು, ಇದನ್ನು ಬಳಸಿಕೊಳ್ಳಬೇಕು, ದೇಶದ ಎಲ್ಲಾ  ಪ್ರಜ್ಞಾವಂತರು ಮತ ಚಲಾಯಿಸಬೇಕು, ನಾನು‌ 'ಮತ ಚಲಾಯಿಸುತ್ತೇವೆ ನೀವು ಮತ ಚಲಾಯಿಸಿ' ಎಂದು ಕರೆ ನೀಡಿದರು.

ರಾಜ್ಯಾದ್ಯಂತ ವಿಕಲಚೇತನ ಮತದಾರರ ನೋಂದಣಿ ಅಭಿಯಾನ ನಡೆದಿದೆಯಾದರೂ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳಲ್ಲಿ ನೋಂದಣಿ ಅತ್ಯಂತ ಕಡಿಮೆಯಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿಯವರೆಗೆ 4061, ಬೆಂಗಳೂರು ನಗರದಲ್ಲಿ 1668, ಬಿಬಿಎಂಪಿ ಕೇಂದ್ರ ವಿಭಾಗದಲ್ಲಿ 860, ಬಿಬಿಎಂಪಿ ಉತ್ತರದಲ್ಲಿ 2627, ಬಿಬಿಎಂಪಿ ದಕ್ಷಿಣದಲ್ಲಿ 1446 ವಿಕಲಚೇತನರು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ವಿಕಲಚೇತನ ಇಲಾಖೆ ನಗರದ ಎಲ್ಲ ಜನರನ್ನು ತಲುಪಲು ಸಾಧ್ಯವಾಗದಿರುವುದು ಹಾಗೂ ನಗರದ ಜನರು ಹೆಚ್ಚು ಆಸಕ್ತಿ ತೋರದಿರುವುದು ಇದಕ್ಕೆ ಪ್ರಮುಖ ಕಾರಣ. ತುಮಕೂರಿನಲ್ಲಿ ಅತಿ  ಹೆಚ್ಚು ಅಂದರೆ, 28,430 ಹಾಗೂ ಬೆಳಗಾವಿಯಲ್ಲಿ 24,650 ಮತದಾರರು ನೋಂದಣಿಯಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಗಿರೀಶ್‍ ಗೌಡ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ರಾಯಭಾರಿ ಗಿರೀಶ್‍ ಗೌಡ ಅವರ ಮತದಾನದ ಜಾಗೃತಿ ಮೂಡಿಸುವ ಪೋಸ್ಟರ್ ಹಾಗೂ ವಿಕಲಚೇತನ ಇಲಾಖೆ ಹಾಗೂ ಚುನಾವಣಾ ಆಯೋಗ ಹೊರತಂದಿರುವ 'ಎನೇಬಲಿಂಗ್ ಡೆಮಾಕ್ರೆಸಿ ಫಾರ್ ಯು' ಪುಸ್ತಕ ಬಿಡುಗಡೆ ಮಾಡಲಾಯಿತು.

Copyright � 2012 Kannadaprabha.com