Kannadaprabha The New Indian Express
ಅಭಿನಯ ಸರಸ್ವತಿ ಎಲ್.ವಿ. ಶಾರದಾ ಇನ್ನು ನೆನಪು ಮಾತ್ರ 
By select 
21 Mar 2019 12:00:00 AM IST

ಬೆಂಗಳೂರು: ವೈಧವ್ಯ ಶಾಪವಲ್ಲ, ವಿಧವೆ ಜಪಸರ ಹಿಡಿದು ಕೂರುವುದು ಬೇಕಿಲ್ಲ. ಗಂಡಸರಂತೆ ಮರು ವಿವಾಹವಾಗಿ ನೂತನ ಬದುಕು ಕಟ್ಟಿಕೊಳ್ಳುವ ಹಕ್ಕು ಹೆಣ್ಣಿಗೂ ಇದೆ ಎಂದು ದಿಟ್ಟತನದಿಂದ ಸಾರುವ ‘ಫಣಿಯಮ್ಮ’ನ ಪಾತ್ರಕ್ಕೆ ಜೀವ ತುಂಬಿದವರು ಎಲ್.ವಿ. ಶಾರದಾ.
  
ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ನಟಿ ಶಾರದಾ ಮೂಲತಃ ಆಂಧ್ರಪ್ರದೇಶದವರು.  ಆದರೆ ಪ್ರೇಮಾ ಕಾರಂತರ ‘ಫಣಿಯಮ್ಮ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನವನ್ನು ಗೆದ್ದವರು.  ‘ಆದಿಶಂಕರಾಚಾರ್ಯ’, ‘ವಂಶವೃಕ್ಷ’, 'ನಕ್ಕಳಾ ರಾಜಕುಮಾರಿ’, 'ಒಂದು ಪ್ರೇಮದ ಕಥೆ’ಗಳಲ್ಲೂ ಮನೋಜ್ಞ ಅಭಿನಯ ನೀಡಿದ್ದಾರೆ. 

'ವಾತ್ಸಲ್ಯ’ ಚಿತ್ರದ ಅಭಿನಯಕ್ಕಾಗಿ ಅವರಿಗೆ ಶ್ರೇಷ್ಠ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಂದಿದೆ. ನಟನೆಯಿಂದ ವಿಮುಖರಾದ ನಂತರ ಶಾರದಾ ಸಾಕ್ಷ್ಯಚಿತ್ರ ನಿರ್ಮಾಣ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು ಕೆರೆಗಳ ಬಗ್ಗೆ ಅವರು ತಯಾರಿಸಿದ 'ಕೆರೆ ಹಾಡು’ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು. 'ಮೈಸೂರು ವೀಣೆ’ ಕುರಿತ ಸಾಕ್ಷ್ಯಚಿತ್ರವೂ ಸೇರಿದಂತೆ ದೂರದರ್ಶನಕ್ಕಾಗಿ ಅವರು ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದರು. ದಶಕಗಳ ಹಿಂದೆ ತ್ರಿವೆಂಡ್ರಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅವರು ಜ್ಯೂರಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು
  
“ಪಾತ್ರಕ್ಕೆ ಜೀವ ತುಂಬುವ ಸಲುವಾಗಿ ನೀಳಗೂದಲನ್ನೇ ಕತ್ತರಿಸುವ ದೃಢನಿರ್ಧಾರಕ್ಕೆ ಬಂದ ನಟಿ.  ಮಡಿ ಅಜ್ಜಿಯರನ್ನು ಕಂಡಾಗ ನೆನಪಾಗುವಷ್ಟು ಸಹಜ ಅಭಿನಯ ನೀಡಿದವರು ಎಲ್.ವಿ. ಶಾರದಾ . . “ ಹೀಗೆಂದು ನೆನಪುಗಳನ್ನು ಮೆಲುಕು ಹಾಕಿದ್ದು ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ.
  
“1970ರ ದಶಕದಲ್ಲಿ ಬಯಲು ರಂಗಭೂಮಿ ನಾಟಕದ ವೇಳೆ ಸಂಪರ್ಕಕ್ಕೆ ಬಂದ ಶಾರದ ಅವರ ಜತೆ ವಂಶವೃಕ್ಷ, ಫಣಿಯಮ್ಮ, ಮೊದಲಾದ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.  ಪ್ರೇಮಾ ಕಾರಂತ್ ಇರುವತನಕ ‘ಫಣಿಯಮ್ಮ ಫೆಸ್ಟಿವಲ್’ ವೇಳೆ ಭೇಟಿಯಾಗುತ್ತಿದ್ದರು.  ಪ್ರೇಮಾ ನಿಧನದ ಬಳಿಕ ಸಂಪರ್ಕಕ್ಕೆ ಸಿಗಲಿಲ್ಲ.  ಆಕೆಯ ಅದ್ಭುತ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳಲಿಲ್ಲ.  ಈ ಬಗ್ಗೆ ಸ್ವತಃ ಶಾರದಾ ಅವರಿಗೂ ಬೇಸರವಿತ್ತು” ಎಂಬುದು ನಾಗಾಭರಣ ವಿಷಾದ.

Copyright � 2012 Kannadaprabha.com