Kannadaprabha The New Indian Express
ತಮಿಳುನಾಡು: ಡಿಎಂಕೆ ಖಜಾಂಚಿ ದುರೈ ಮುರುಗನ್ ಮನೆ ಮೇಲೆ ಐಟಿ ದಾಳಿ 
By select 
30 Mar 2019 12:00:00 AM IST

ವೆಲ್ಲೂರು: ತಮಿಳುನಾಡಿನ ವೆಲ್ಲೂರು ಬಳಿಯ ಕಟ್ಪಾಡಿಯಲ್ಲಿರುವ  ಡಿಎಂಕೆ ಖಜಾಂಚಿ ದುರೈ ಮುರುಗನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳಂಬೆಳ್ಳಗೆ ದಾಳಿ ನಡೆಸಿದ್ದಾರೆ.

ಈ ರಾಜಕಾರಣಿಯ ಮನೆ ಮಾತ್ರವಲ್ಲದೇ, ಕಿಂಗ್ಸ್ ಟನ್ ಎಂಜಿನಿಯರಿಂಗ್ ಕಾಲೇಜ್ ಮತ್ತು ದುರೈ  ಮುರುಗನ್ ಬಿಎಡ್ ಕಾಲೇಜ್ ಮೇಲೂ ದಾಳಿ ನಡೆಸಲಾಗಿದೆ.

ದುರೈ ಮುರುಗನ್ ಚುನಾವಣಾ ಪ್ರಚಾರ ಮುಗಿಸಿ ಮನೆಗೆ ವಾಪಾಸ್ ಆದ ನಂತರ ಮೂವರು ಅಧಿಕಾರಿಗಳು ಮನೆಗೆ ಬಂದಿದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅರಾಕೊಣಂ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಸರ್ಚ್ ವಾರೆಂಟ್ ತಂದಿದ್ದರು.

ಆದಾಗ್ಯೂ, ದುರೈ ಮುರುಗನ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಇದು ಅನ್ವಯವಾಗುವುದಿಲ್ಲ ಎಂದು ಡಿಎಂಕೆ ಕಾನೂನು ಘಟಕದ  ಜಂಟಿ ಕಾರ್ಯದರ್ಶಿ ಪರಂತಮನ್ ಹೇಳಿದ್ದಾರೆ.

ಶೋಧ ಕಾರ್ಯಕ್ಕಾಗಿ ದಾಖಲೆ ಪತ್ರಗಳನ್ನು ಹಾಜರುಪಡಿಸಲು ಡಿಎಂಕೆ ಸದಸ್ಯರು ಹಾಗೂ ಅವರ ವಕೀಲರು ನಿರಾಕರಿಸಿದ್ದರಿಂದ ಮೂವರು ಅಧಿಕಾರಿಗಳು ಮನೆಯಿಂದ ಹೊರಗೆ ಬಂದರು. ನಂತರ ಐಟಿ ಇಲಾಖೆ ಸಹಾಯಕ ಕಮೀಷನರ್  ವಿಜಯ್ ದೀಪನ್  ಸ್ಥಳಕ್ಕೆ ಆಗಮಿಸಿದ್ದಾಗ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಯಿತು.

ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾನೂನು ಪ್ರಕಾರ ನಡೆದುಕೊಂಡಿದ್ದರೆ ಶೋಧ ಕಾರ್ಯಾಚರಣೆಗೆ ಸಹಕರಿಸಲು ಸಿದ್ಧವಿರುವುದಾಗಿ ಪರಂತಮನ್  ಹೇಳಿದರು. ಈ ಮಧ್ಯೆ ಭದ್ರತೆಗಾಗಿ  ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

Copyright � 2012 Kannadaprabha.com