Kannadaprabha The New Indian Express
ದಲಿತರನ್ನು ಉದ್ದರಿಸದ ದೇವರನ್ನು ಗಟಾರಕ್ಕೆ ಎಸೆಯಿರಿ: ಕೆ.ಎಸ್‌.ಭಗವಾನ್‌ 
By select 
24 Apr 2019 12:00:00 AM IST

ಬೆಂಗಳೂರು: ದಲಿತರನ್ನು ಯಾವ ದೇವರೂ ಉದ್ದಾರ ಮಾಡುವುದಿಲ್ಲ, ನಾವು ಶತಮಾನಗಳಿಂದ ಅನೇಕ ದೇವರನ್ನು ಪೂಜಿಸುತ್ತಾ ಬಂದಿದ್ದೇವೆ, ಆದರೆ ಯಾವೊಬ್ಬ ದೇವರೂ ನಮ್ಮನ್ನು ಉತ್ತಮ ಸ್ಥಿತಿಗೆ ಕರೆದೊಯ್ಯಲಿಲ್ಲ. ಇಂತಹಾ ದೇವರನ್ನು ಗಟಾರಕ್ಕೆ ಎಸೆಯಬೇಕು ಎಂದು ಖ್ಯಾಸ ಸಂಶೋಧಕ, ಸಾಹಿತಿ ಕೆ.ಎಸ್. ಭಗವಾನ್ ಹೇಳಿದ್ದಾರೆ.

ಬೆಂಗಳೂರಿನ ಗಾಂಧೀ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಬಿ. ಬಸವಲಿಂಗಪ್ಪನವರ 95ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿದರು.

ಎಲ್ಲಾ ಶೂದ್ರ ಜನಾಂಗವೂ ಬ್ರಾಹ್ಮಣರ ಗುಲಾಮರು, ಈ ಗುಲಾಮರು ಬ್ರಾಹ್ಮಾಣರ ಸೇವೆಗೆ ಸೃಷ್ಟಿಯಾಗಿದ್ದಾರೆ ಎಂದು ಮನುಸ್ಮೃತಿ ಹೇಳುತ್ತದೆ. ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ದಲಿತರನ್ನು ಯಾವೊಬ್ಬ ದೇವರೂ ರಕ್ಷಿಸಿಲ್ಲ, ಹೀಗಾಗಿ ಇಂತಹಾ ದೇವರನ್ನೇಕೆ ಪೂಜಿಸಬೇಕು? ದಲಿತರನ್ನು ತುಳಿಯಲಿಕ್ಕಾಗಿಯೇ ಇಂತಹಾ ದೇವರು ಸೃಷ್ಟಿಯಾಗಿದೆ, ಇವರನ್ನು ಗಟಾರಕ್ಕೆ ಎಸೆಯಬೇಕು ಎಂದು ಅವರು ಹೇಳಿದ್ದಾರೆ.

ಎಲ್ಲಾ ಧರ್ಮಗಳಲ್ಲಿ ಕೆಳಜಾತಿಯವರನ್ನು ತುಳಿಯಲಾಗಿದೆ, ಅದಕ್ಕಾಗಿ ರಕ್ತಪಾತ ಹರಿಸಲಾಗಿದೆ. ಆದರೆ ಬೌದ್ಧ ಧರ್ಮ ಮಾತ್ರ ಇದಕ್ಕೆ ಅಪವಾದ ಎಂದಿರುವ ಭಗವಾನ್ "ಧರ್ಮ" ಹಾಗೂ "ಧಮ್ಮ"ದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು ಧರ್ಮದಲ್ಲಿ ಮೇಲು, ಕೀಳು, ಬೇಧ ಭಾವವಿದೆ, ಬುದ್ದನ ಧಮ್ಮದಲ್ಲಿ ಅಂತಹಾ ಯಾವ ಬೇಧವಿಲ್ಲ ಎಂದರು.

ಅಂಬೇಡ್ಕರ್ ಸಂವಿಧಾನದ ಅನುಸಾರ ಎಲ್ಲರಿಗೆ ಸಮಾನ ಹಕ್ಕುಗಳಿದ್ದು ದೇಶದ ಪ್ರತಿಯೊಬ್ಬರಿಗೆ ನೆಮ್ಮದಿಯ ಬದುಕು ತೋರಿಸಲು ಇದರಿಂದ ಸಾಧ್ಯವಿದೆ.ಆದರೆ ಕೆಲ ಕ್ಷುದ್ರ ಶಕ್ತಿಗಳು ಈ ಸಂವಿಧಾನ ಬುಡಮೇಲು ಮಾಡಲು ಯೋಜಿಸಿದೆ.ಕೇಂದ್ರ ಸಚಿವರೊಬ್ಬರು ತಾವು ಸಂವಿಧಾನ ಬದಲಿಸಲಿಕ್ಕಾಗಿ ಬಂದಿದ್ದೇವೆ ಎಂದಾಗಲೂ ಯಾರೊಬ್ಬರೂ ಇದನ್ನು ಗಟ್ಟಿ ದನಿಯಲ್ಲಿ ಪ್ರಶ್ನಿಸಲಿಲ್ಲ ಎಂದು ಭಗವಾನ್ ಹೇಳಿದ್ದಾರೆ.

ವಾಲ್ಮೀಕಿಯ ರಾಮ ತಾನು ಮನುಷ್ಯ, ದೇವರಲ್ಲ ಎಂದೇ ಹೇಳಿದ್ದಾನೆ, ನಾನು ಎರಡು ವರ್ಷ ಕಾಲ ರಾಮಾಯಣವನ್ನು ಅಧ್ಯಯನ ಮಾಡಿದ್ದೇನೆ. ನಾವು ತಿಳುವಳಿಕೆ ಪಡೆಯದೇ ಹೋದರೆ ನಮಗೆ ಸತತವಾಗಿ ಮೋಸ ಆಗುತ್ತಲೇ ಇರುತ್ತದೆ.. ಕೇವಲ ಭಜನೆ ಮಾಡುವುದರಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಭಜನೆ ಮಾಡುವುದು ದೇಶದ ಜನರನ್ನು ದಡ್ಡರನ್ನಾಗಿಸುವುದಕ್ಕಾಗಿಯೇ ಹೊರತು ಬೇರೇನಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮಾಜಿ ಸಚಿವ ಎ.ಆರ್‌.ಸೀತಾರಾಮ್, ದಸಂಸ ಸಮತಾವಾದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ಮಾರಪ್ಪ, ಹೈಕೋರ್ಟ್‌ ಹಿರಿಯ ನ್ಯಾಯವಾದಿ ಎಚ್‌.ಆರ್‌.ವಿಶ್ವನಾಥ್‌, ಪೆರಿಯಾರ್‌ ವಿಚಾರವಾದಿ ಕಲೈ ಸೆಲ್ವಿ, ದಸಂಸದ ಬೆಂಗಳೂರು ನಗರ ಜಿಲ್ಲೆ ಉಪ ಪ್ರಧಾನ ಸಂಚಾಲಕ ಕೆಂಪಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Copyright � 2012 Kannadaprabha.com