Kannadaprabha The New Indian Express
ವಿದ್ಯಾಸಾಗರ್ ಪ್ರತಿಮೆಗೆ ಟಿಎಂಸಿ ಹಾನಿ, ಅದೇ ಜಾಗದಲ್ಲಿ ಅವರ ಬೃಹತ್ ಪ್ರತಿಮೆ ಸ್ಥಾಪನೆ: ಪ್ರಧಾನಿ ಮೋದಿ 
By select 
16 May 2019 12:00:00 AM IST

ಮಾವು (ಉತ್ತರ ಪ್ರದೇಶ): ತೃಣಮೂಲ ಕಾಂಗ್ರೆಸ್ ನ ಗೂಂಡಾಗಳು ನಾಶ ಮಾಡಿರುವ ಜಾಗದಲ್ಲೇ ಈಶ್ವರ್ ಚಂದ್ರ ವಿದ್ಯಾ ಸಾಗರ್ ಅವರ ಅದ್ಭುತ ಮೂರ್ತಿಯನ್ನು ಸ್ಥಾಪಿಸಲು ತಾವು ಬದ್ಧರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ  ಮೋದಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ, ಇವತ್ತು ನಾನು ಡಮ್ ಡಮ್ ನಲ್ಲಿ ರ್ಯಾಲಿ ನಡೆಸಲು ಉದ್ದೇಶಿಸಿದ್ದೇನೆ, ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅದಕ್ಕೆ ಅವಕಾಶ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ, ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಬಿಡುತ್ತಾರೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ, ಟಿಎಂಸಿ ಗೂಂಡಾಗಳು ಹಾನಿ ಮಾಡಿರುವ ಸ್ಥಳದಲ್ಲೇ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಅಭೂತ ಪೂರ್ವ ಪ್ರತಿಮೆ ಸ್ಥಾಪಿಸಲಾಗುವುದು ಹಾಗೂ ಮೂರ್ತಿ ಭಗ್ನಗೊಳಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಮೂರ್ತಿಯನ್ನು ಪಂಚಲೋಹದಿಂದ ನಿರ್ಮಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ. 19ನೇ ಶತಮಾನದ ಕ್ರಾಂತಿಕಾರಿ ಈಸ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸ ಮಾಡಲಾಗಿತ್ತು, ಈ ಹಿನ್ನೆಲೆಯಲ್ಲಿ ಹಿಂಸಾಚಾರ ಕೂಡ ನಡೆದಿತ್ತು. 

Copyright � 2012 Kannadaprabha.com