Kannadaprabha The New Indian Express
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ, ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ 
By select 
22 May 2019 12:00:00 AM IST

ಮೈಸೂರು: ತೀವ್ರ ಚರ್ಚೆಗೀಡಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಬೋಧನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರಸ್ತಾವಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ತಾವು ರಾಜಿ ಆಗುವುದಿಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನೃಪತುಂಗ ಕಲಾ-ವಾಣಿಜ್ಯ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ರೂಪಿಸಿಕೊಂಡಿದ್ದೇವೆ. ಅದರಲ್ಲಿ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆ ವಿಚಾರ ಪ್ರಸ್ತಾಪವಿಲ್ಲ. ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮಕ್ಕಳ ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ಮೇಲೆ ವ್ಯಾಮೋಹ ಹೆಚ್ಚುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಆರ್ಥಿಕವಾಗಿ ಹಿಂದುಳಿದವರು , ಬಡವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿಸಲು ಆಸೆ ಪಡುತ್ತಾರೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಲು ನಮ್ಮ ವಿರೋಧವಿಲ್ಲ.ಆದರೆ ಇಂಗ್ಲಿಷ್ ಮಾಧ್ಯಮ ಬೇಡ ಎನ್ನುತ್ತಿದ್ದೇವೆ. ಈ ಬಗ್ಗೆ ಪೋಷಕರಲ್ಲಿ ಗೊಂದಲವಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಿರರ್ಗಳವಾಗಿ ಮಾತನಾಡಬಹುದೇ ಹೊರತು, ಅದು ನಮ್ಮ ಹೃದಯದ ಭಾಷೆ ಆಗಲಾರದು ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ , ಇದರಿಂದಾಗಿ ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿವೆ. ಸಾಮಾಜಿಕ ,ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಭಾರತ ದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುತ್ತಲೇ ಇದೆ. ಜಾತಿ ಜಾತಿಗಳ ನಡುವೆ ಸಾಮಾಜಿಕ ಅಸಮಾನತೆ ನಿವಾರಣೆಯಾಗದೆ ಹೋದರೆ ಜನರು ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಕೆಳ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮಾನತೆ ಸಿಕ್ಕರೆ ಜಾತಿ ವ್ಯವಸ್ಥೆ ಕ್ರಮೇಣವಾಗಿ ಕಡಿಮೆಯಾಗುಗುತ್ತದೆ ಎಂದು ತಮ್ಮ ಅಹಿಂದ ವಿಚಾರ ಧಾರೆಗಳನ್ನು ಪ್ರತಿಪಾದಿಸಿದರು.

ತಮ್ಮನ್ನು ಲಿಂಗಾಯತ ವಿರೋಧಿ ಎಂದು ಬಣ್ಣಿಸಿದ್ದಾರೆ. ವಿರಕ್ತ ಪರಂಪರೆ ಮಠಾಧಿಪತಿಗಳು ತಮ್ಮನ್ನು ಭೇಟಿಯಾಗಿ ಲಿಂಗಾಯತ ಧರ್ಮ ಮಾಡಿ ಎಂದು ಮನವಿ ಮಾಡಿದರು. ಗುರು ಪರಂಪರೆ ಮಠಾಧೀಶರು ವೀರಶೈವ ಲಿಂಗಾಯತ ಧರ್ಮ ಮಾಡುವಂತೆ ಎಂದು ಮನವಿ ಮಾಡಿದರು. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ, ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಆದರೆ ತಮ್ಮನ್ನು ಮಾತ್ರ ಏಕೆ ಲಿಂಗಾಯತ ವಿರೋಧಿ ಎಂಬ ಪಟ್ಟ ಕಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪೊಲೀಸರು ಹೊರಗೊಂದು, ಒಳಗೊಂದು ಭಾಷೆಯಲ್ಲಿ ಮಾತನಾಡುತ್ತಾರೆ. ಅವರನ್ನು ನಂಬುವುದು ಕಷ್ಟ. ಒಳ್ಳೆಯ ಭಾಷೆ ಮಾತನಾಡುವ ಪೊಲೀಸರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ. ಒಳ್ಳೆಯ ಭಾಷೆಯಲ್ಲಿ ಮಾತನಾಡಿದರೆ ಅಲ್ಲಿ ನಿಮ್ಮ ಕೆಲಸ ಆಗುವುದಿಲ್ಲ ಎಂದು , ಕೆಟ್ಟ ಭಾಷೆಯಲ್ಲಿ ಮಾತನಾಡಬೇಕು ಎಂದು ಅವರಿಗೆ ತರಬೇತಿ ನೀಡಿದ್ದಾರೆ ಏನೋ? ಈ ಹಿಂದೆ ಪೊಲೀಸರು ಹಿಂಸೆ ನೀಡುತ್ತಿದ್ದರು ಆದರೆ ಈಗ ಅದು ಕಡಿಮೆಯಾಗಿದೆ ಪೊಲೀಸರು ತುಂಬಾ ಬದಲಾಗಿದ್ದಾರೆ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

Copyright � 2012 Kannadaprabha.com