Kannadaprabha The New Indian Express
ಮೌಂಟ್ ಎವರೆಸ್ಟ್ ನಲ್ಲೂ ಟ್ರಾಫಿಕ್ ಜಾಮ್: ತರಬೇತಿ ಇಲ್ಲದ ಪರ್ವತಾರೋಹಿಗಳನ್ನು ತಡೆಯಿರಿ ಎಂದ ಸಂತ್ರಸ್ಥೆ! 
By select 
28 May 2019 12:00:00 AM IST

ಕಠ್ಮಂಡು: ವಿಶ್ವದ ಅತ್ಯಂತ ಶಿಖರ ಮೌಂಟ್ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದೇ ಟ್ರಾಫಿಕ್ ಜಾಮ್ ನಿಂದಾಗಿ ಮತ್ತು ಅವೈಜ್ಞಾನಿಕ ಪರ್ವತಾರೋಹಣದಿಂದಾಗಿ ಇಲ್ಲಿ ಸಾಕಷ್ಟು ಸಾವುನೋವು ಸಂಭವಿಸುತ್ತಿದ್ದು, ಈ ಪೈಕಿ ನಾನು ಕೂಡ ಓರ್ವ ಸಂತ್ರಸ್ಥೆ ಎಂದು ಪರ್ವತಾರೋಹಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಮೀಶಾ ಚೌಹಾಣ್ ಎಂಬ ಪರ್ವತಾರೋಹಿಯೊಬ್ಬರು ಮೌಂಟ್ ಎವರೆಸ್ಟ್ ನಲ್ಲಿ ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದು, ಎವರೆಸ್ಟ್ ಏರುವ ಆತುರದಲ್ಲಿ ಅಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಅವೈಜ್ಞಾನಿಕ ಪರ್ವತಾರೋಹಣ ಮತ್ತು ತರಬೇತಿ ಇಲ್ಲದವರನ್ನೂ ಶಿಖರಕ್ಕೆ ಕರೆತರುತ್ತಿರುವುದು ಇಲ್ಲಿನ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಅಮೀಶ್ ಚೌಹಾಣ್ ಹೇಳಿದ್ದಾರೆ.

ಕಳೆದ 2 ವಾರಗಳಲ್ಲಿ ಎವರೆಸ್ಟ್ ಶಿಖರದಲ್ಲಿ 10ಕ್ಕೂ ಹೆಚ್ಚು ಮಂದಿ ಪರ್ವತಾರೋಹಣದ ವೇಳೆ ಸಾವನ್ನಪ್ಪಿದ್ದು, ವ್ಯತಿರಿಕ್ತ ಹವಾಮಾನ ಮತ್ತು ಇತರೆ ಕಾರಣಗಳಿಂದಾಗಿ ಎವರೆಸ್ಟ್ ಶಿಖರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನಾನೂ ಕೂಡ ಸುಮಾರು 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದೆ. ಆದರೆ ಮತ್ತೆ ಕೆಲವರಂತೂ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದರು.

ಹಾಲಿ ವರ್ಷ ಎವರೆಸ್ಚ್ ಶಿಖರವನ್ನೇರಲು ನೇಪಾಳ ಸರ್ಕಾರ 381 ಪರವಾನಗಿ ನೀಡಿತ್ತು. ಆದರೆ ಈ ಪೈಕಿ ಪರ್ವತಾರೋಹಣಕ್ಕೆ ಮುಂದಾದ ಹಲವರು ಸರಿಯಾದ ತರಬೇತಿಯನ್ನೇ ಪಡೆದಿಲ್ಲ. ಕನಿಷ್ಟ ಪಕ್ಷ ಪರ್ವತಾರೋಹಣದ ಸಾಮಾನ್ಯ ಜ್ಞಾನ ಕೂಡ ಅವರಿಗಿಲ್ಲ. ಹೀಗಾಗಿ ಅವರು ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದ್ದಾರೆ. ಇಂತಹ ಬೆಳವಣಿಗೆ ತೀರಾ ಅಪಾಯಕಾರಿಯಾದದ್ದು, ಈ ಕುರಿತು ಕೂಡಲೇ ನೇಪಾಳ ಸರ್ಕಾರ ಕಠಿಣಕ್ರಮ ಕೈಗೊಳ್ಳಬೇಕು. ಪರ್ವತಾರೋಹಣ ಸಂಬಂಧ ಕಠಿಣ ನಿಯಮಗಳನ್ನು ಹೇರಬೇಕು. ಕೇವಲ ನುರಿತ ಮತ್ತು ತರಬೇತಿ ಪಡೆದ ಪರ್ವತಾರೋಹಗಿಳಿಗೆ ಮಾತ್ರ ಅನುಮತಿ ನೀಡಬೇಕು. ಟ್ರಾಫಿಕ್ ಜಾಮ್ ನಿಂದಾಗಿ ಪರ್ವತಾರೋಹಿಗಳು ತಂದಿದ್ದ ಆಮ್ಲಜನಕ ಕಡಿಮೆಯಾಗಿ ಅಥವಾ ಖಾಲಿಯಾಗಿ ಅವರು ಸಾವನ್ನಪ್ಪುತ್ತಾರೆ. ಮತ್ತೆ ಕೆಲವರಂತೂ ಆಮ್ಲಜನಕ ಖಾಲಿಯಾಗುತ್ತಾ ಬಂದಿದ್ಜರೂ ಶಿಖರವನ್ನು ಏರಲೇಬೇಕು ಎಂಬ ಹಠದೊಂದಿಗೆ ಪರ್ವತಾರೋಹಣ ಮುಂದುವರೆಸುತ್ತಾರೆ. ಇದು ಅಪಾಯಕಾರಿ ಎಂದು ಅಮೀಶಾ ಚೌಹಾಣ್ ಹೇಳಿದ್ದಾರೆ.

ಇದೇ ಟ್ರಾಫಿಕ್ ಜಾಮ್ ನಿಂದಾಗಿಯೇ ತಾನು ಕೂಡ ಅಪಾಯಕ್ಕೆ ಸಿಲುಕಿದ್ದೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದೆ ಎಂದು ಆಮೀಶ್ ಚೌಹಾಣ್ ಹೇಳಿದ್ದಾರೆ.

ಡೆತ್ ಜೋನ್ ನಲ್ಲೇ ಅತೀ ಹೆಚ್ಚು ಸಾವು
ಇನ್ನು ಮೌಂಟ್ ಎವರೆಸ್ಟ್ ಶಿಖರದ 8 ಸಾವಿರ ಅಡಿ ಮೇಲಿನ ಪ್ರದೇಶವನ್ನು ಪರ್ವತಾರೋಹಿಗಳು ಡೆತ್ ಜೋನ್ ಎಂದು ಕರೆಯುತ್ತಾರೆ. ಕಾರಣ ಈ ಜಾಗದಲ್ಲಿ ಆಮ್ಲಜನಕದ ಪ್ರಮಾಣ ಅತ್ಯಂತ ಕಡಿಮೆ ಇದ್ದು, ಪರ್ವತಾರೋಹಣಕ್ಕೂ ಇಲ್ಲಿ ಅನುಕೂಲಕರ ವಾತಾವರಣ ಇಲ್ಲ. ಅತೀ  ಹೆಚ್ಚು ಶೀತವಿದ್ದು, ಗಾಳಿ ಅಪಾಯಕಾರಿಯಾಗಿ ಬೀಸುತ್ತಿರುತ್ತದೆ. ನುರಿತ ಮತ್ತು ತರಬೇತಿ ಪಡೆದ ಪರ್ವತಾರೋಹಿಗಳು ಮಾತ್ರ ಇಲ್ಲಿ ಪರ್ವತಾರೋಹಣ ಮಾಡಬಲ್ಲರು. ಇದೇ ಜಾಗದಲ್ಲೇ ತರಬೇತಿ ಇಲ್ಲದ ಮಂದಿಯೂ ಕೂಡ ಪರ್ವತಾರೋಹಣ ಮಾಡಿ ಮುಂದೆ ಸಾಗಲಾಗದೇ ಇಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದೇ ಟ್ರಾಫಿಕ್ ಜಾಮ್ ನಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಾರಿ ಟ್ರಾಫಿಕ್ ಜಾಮ್ ನಿಂದಾಗಿಯೇ ಕನಿಷ್ಠ 4 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ವಿಶ್ವವಿಖ್ಯಾತ ಎವರೆಸ್ಟ್ ಶಿಖರದಲ್ಲಿ ಪರ್ವತಾರೋಹಣದ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದವರ ಸಾಕಷ್ಟ ಮೃತದೇಹಗಳು ಪತ್ತೆ ಹಚ್ಚಲಾಗಿಲ್ಲ. ಅಲ್ಲದೆ ಪರ್ವತಾರೋಹಿಗಳು ಪರ್ವತಾರೋಹಣ ಮಾಡುವಾಗ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಅಮೆರಿಕ ಮೂಲದ ವೈದ್ಯರೊಬ್ಬರು ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದರು. ಎವರೆಸ್ಚ್ ಶಿಖರದಲ್ಲಿ ನೂರಾರು ಶವಗಳು ಈಗಲೂ ಇದ್ದು, ಅವುಗಳನ್ನು ತೆರವುಗೊಳಿಸಲಾಗದ ಕಠಿಣ ಪ್ರದೇಶದಲ್ಲಿ ಅವು ಬಿದ್ದಿವೆ ಎಂದು ಹೇಳಿದ್ದಾರೆ.

Copyright � 2012 Kannadaprabha.com