Kannadaprabha The New Indian Express
ಇನ್ನೂ ಪತ್ತೆಯಾಗದ ಐಎಎಫ್ ವಿಮಾನ: 'ಮೋಡ ಕವಿದ ವಾತಾವರಣ ಕಾರಣ' ಎಂದು ಮೋದಿ ಕಾಲೆಳೆದ ಪಾಕ್ ನಟಿ! 
By select 
05 Jun 2019 12:00:00 AM IST

ಇಸ್ಲಾಮಾಬಾದ್: ಬಾಲಾಕೋಟ್ ವಾಯುದಾಳಿ ಕುರಿತು ಪ್ರದಾನಿ ಮೋದಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ ಕುರಿತಂತೆ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಕಳೆದ 2 ದಿನಗಳ ಹಿಂದೆ ಅಸ್ಸಾಂ ನಿಂದ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆ ಎಎನ್ 32 ಸರಕು ಸಾಗಾಣಿಕಾ ವಿಮಾನದ ಕುರಿತಂತೆ ಈ ವರೆಗೂ ಮಾಹಿತಿ ಲಭ್ಯವಾಗಿಲ್ಲ, ವಿಮಾನ ಪತನವಾಗಿರುವ ಕುರಿತೂ ಈ ವರೆಗೂ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ನಾಪತ್ತೆಯಾದ ವಿಮಾನಕ್ಕಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಸರ್ವೇಕ್ಷಣಾ ವಿಮಾನಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಅಂತೆಯೇ ವಿಮಾನದ ಶೋಧ ಕಾರ್ಯಾಚರಣೆಗೆ ಇಸ್ರೋ ಕೂಡ ಸಾಥ್ ನೀಡಿದ್ದು ತನ್ನ ಉಪಗ್ರಹಗಳ ಮೂಲಕ ವಿಮಾನಕ್ಕಾಗಿ ಶೋಧ ನಡೆಸುತ್ತಿವೆ.

ಈ ನಡುವೆ ನಾಪತ್ತೆಯಾಗಿರುವ ಎಎನ್ 32 ವಿಮಾನದ ಕುರಿತಂತೆ ಪಾಕಿಸ್ತಾನದ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವೀಣಾ ಮಲ್ಲಿಕ್ ಟ್ವಿಟರ್ ನಲ್ಲಿ ವ್ಯಂಗ್ಯ ಮಾಡಿದ್ದು, ಮೋಡ ಕವಿದ ವಾತಾವರಣದಿಂದ ವಿಮಾನ ರಾಡಾರ್ ಕಣ್ಣಿಗೆ ಕಾಣದೇ ಹೋಗಿದೆ ಎಂದು ಹೇಳಿದ್ದಾರೆ.

'ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆಯಿಂದಾಗಿ ಭಾರತೀಯ ವಾಯುಸೇನೆಯ ವಿಮಾನ ರೆಡಾರ್ ಕಣ್ಣಿಗೆ ಕಾಣಿಸುತ್ತಿಲ್ಲ ವೀಣಾ ಟ್ವೀಟ್ ಮಾಡಿದ್ದಾರೆ. ಇನ್ನು ವೀಣಾ ಮಲ್ಲಿಕ್ ಟ್ವೀಟ್ ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಭಾರತೀಯ ಸಿನಿಮಾಗಳಲ್ಲಿ ನಟಿಸಿ ತನ್ನ ಹೊಟ್ಟೆ ತುಂಬಿಸಿಕೊಂಡ ನಟಿ ಮರಳಿ ಭಾರತಕ್ಕೆ ಅವಮಾನವಲ್ಲದೇ ಮತ್ತೇನು ನೀಡಿಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ. ಪಾಕಿಸ್ತಾನದ ನಟಿ ವೀಣಾ ಮಲಿಕ್ ಭಾರತೀಯ ಸಿನಿಮಾಗಳಲ್ಲೂ ನಟಿಸಿದ್ದು, ಕನ್ನಡದ ‘ಡರ್ಟಿ ಪಿಕ್ಚರ್ಸ್ ಸಿಲ್ಕ್’ನಲ್ಲೂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆ ನಡುವೆ, ಪಾಕಿಸ್ತಾನ ರೆಡಾರ್ ಕಣ್ತಪ್ಪಿಸಿ ಬಾಲಾಕೋಟ್ ವಾಯುದಾಳಿ ನಡೆಸಲಾಯಿತು ಎಂಬ ಪ್ರಧಾನಿ ಮೋದಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಭಾರೀ ಮಳೆಯ ಮಧ್ಯೆ ಯುದ್ಧ ವಿಮಾನಗಳು ರೆಡಾರ್ ಕಣ್ಣಿಗೆ ಕಾಣಿಸುವುದಿಲ್ಲವೇ ಎಂಬ ಚರ್ಚೆಗೆ ಪ್ರಧಾನಿ ಮೋದಿ ಹೇಳಿಕೆ ಇಂಬು ನೀಡಿತ್ತು.

Copyright � 2012 Kannadaprabha.com