Kannadaprabha The New Indian Express
ವಾಷಿಂಗ್ಟನ್ ಸ್ಮಾರಕ ಬಳಿ ಯೋಗ ದಿನಾಚರಣೆ, ದಾಖಲೆಯ 2,500 ಮಂದಿ ನೋಂದಣಿ 
By select 
10 Jun 2019 12:00:00 AM IST

ವಾಷಿಂಗ್ಟನ್ : ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿ ಆಯೋಜಿಸುತ್ತಿರುವ ಐದನೇ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ದಾಖಲೆಯ 2, 500 ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಮೂರನೇ ಬಾರಿಗೆ ವಾಷಿಂಗ್ಟನ್ ಸ್ಮಾರಕ ಬಳಿ ಯುಎಸ್ ಕಾಂಗ್ರೆಸ್ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸುತ್ತಿದೆ. 

ಜೂನ್ 16 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ 2,500ಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.2014, ಡಿಸೆಂಬರ್ 11 ರಂದು ಭಾರತ ಸಲ್ಲಿಸಿದ್ದ ಪ್ರಸ್ತಾವನೆ ಮೇರೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತ್ತು 

ಜೂನ್ 16ರಂದು ಪ್ರಸಿದ್ಧ ವಾಷಿಂಗ್ಟನ್ ಸ್ಮಾರಕ ಬಳಿ ನಡೆಯಲಿರುವ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕಾಗಿ ಈಗಾಗಲೇ 2500 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅಮೆರಿಕಾದಲ್ಲಿನ ಭಾರತೀಯ ರಾಯಬಾರಿ ಹರ್ಷವರ್ಧನ್ ಶಿಂಗ್ಲಾ ಹೇಳಿದ್ದಾರೆ.

ಸುಮಾರು 20 ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಾರತೀಯ ರಾಯಬಾರ ಕಚೇರಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150 ನೇ ಜಯಂತೋತ್ಸವ ಪ್ರಯುಕ್ತ ಯೋಗ ದಿನಾಚರಣೆ ಬಳಿಕ ಸಸ್ಯಹಾರಿ ಆಹಾರ ಮೇಳವನ್ನು ಆಯೋಜಿಸಲಾಗುವುದು  ಎಂದು ಶಿಂಗ್ಲಾ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಎಲ್ಲಾ ಪ್ರತಿನಿಧಿಗಳು, ರಾಯಬಾರಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅಮೆರಿಕಾ ಸರ್ಕಾರದ ಹಾಗೂ ಕಾಂಗ್ರೆಸಿನ ಪ್ರಮುಖ ವಿಭಾಗಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. 

Copyright � 2012 Kannadaprabha.com