Kannadaprabha The New Indian Express
ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ಮಗಳಿಗೆ 'ಇಂಡಿಯಾ' ಎಂದು ಹೆಸರಿಡಲು ಕಾರಣವೇನು ಗೊತ್ತೆ? 
By select 
12 Jun 2019 12:00:00 AM IST

ನವದೆಹಲಿ: ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ತಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಭಾರತೀಯರ ಮನ ಗೆದ್ದಿದ್ದಾರೆ. ಕ್ರಿಸ್ ಹೆಮ್ಸ್‌ವರ್ಥ್, ಹಾಲಿವುಡ್‍ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ಮಿಂಚಿ ಎಲ್ಲೆಡೆ ಹೆಸರು ಮಾಡಿದ ನಟ.

ಹಾಲಿವುಡ್ ಸ್ಟಾರ್ ಆಗಿದ್ದರು ಕೂಡ ಭಾರತದ ಮೇಲೆ ಇವರು ವಿಶೇಷ ಪ್ರೀತಿ ಇಟ್ಟಿದ್ದಾರೆ. ಹೀಗಾಗಿ ತಮ್ಮ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ಕ್ರಿಸ್ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕ್ರಿಸ್ ಅವರೇ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ತಮ್ಮ ನೆಟ್‍ಫ್ಲಿಕ್ಸ್ ಪ್ರಾಜೆಕ್ಟ್ `ಧಾಕಾ’ದ ಶೂಟಿಂಗ್‍ಗಾಗಿ ಭಾರತಕ್ಕೆ ಬಂದಿದ್ದ ಕ್ರಿಸ್ ಇಲ್ಲಿನ ಅಹಮದಾಬಾದ್ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಿದ್ದರು. ಇಲ್ಲಿನ ಜನರು ಶೂಟಿಂಗ್ ವೇಳೆ ನಮಗೆ ತೋರಿದ ಪ್ರೀತಿ, ಗೌರವ ನಿಜಕ್ಕೂ ನನಗೆ ಬಹಳ ಇಷ್ಟವಾಗಿತ್ತು ಎಂದು ಹೊಗಳಿದರು.

ನನ್ನ ಪತ್ನಿ ಎಲ್ಸಾ ಗರ್ಭಿಣಿಯಾಗಿದ್ದಾಗ ಭಾರತದಲ್ಲಿ ಸಾಕಷ್ಟು ಸಮಯ ಕಳೆದಿದ್ದಳು, ಅವಳಿಗೆ ಕೂಡ ಭಾರತ ಅಚ್ಚುಮೆಚ್ಚು ಹೀಗಾಗಿ ನಾವಿಬ್ಬರು ನಮ್ಮ ಮಗಳಿಗೆ ಇಂಡಿಯಾ ಎಂದು ಹೆಸರಿಡಲು ನಿರ್ಧರಿಸಿದೆವು ಎಂದು ತಿಳಿಸಿದರು. ಹಾಗೆಯೇ ಇದೇ ವೇಳೆ ತಮ್ಮ ಅವಳಿ ಮಕ್ಕಳಾದ ಸಾಶಾ ಹಾಗೂ ಡ್ರಿಸ್ಟನ್ ಬಗ್ಗೆ ಕೂಡ ಕ್ರಿಸ್ ಮಾತನಾಡಿದ್ದಾರೆ..

ನನಗೆ ಭಾರತ, ಅಲ್ಲಿನ ಜನರು ಮತ್ತು ಅಲ್ಲಿ ಮಾಡಿದ ಶೂಟಿಂಗ್ ತುಂಬಾ ಇಷ್ಟ. ಇಲ್ಲಿ ಪ್ರತಿನಿತ್ಯವು ನಾವು ಶೂಟಿಂಗ್ ಮಾಡುವಾಗ ಸಾವಿರಾರು ಮಂದಿ ನಿಂತು ನೋಡುತ್ತಿದ್ದರು. ಆ ರೀತಿ ಶೂಟಿಂಗ್ ಸೆಟ್‍ನಲ್ಲಿ ಜನ ಇರುವುದನ್ನ ನಾನು ಹಿಂದೆಂದೂ ನನ್ನ ಅನುಭವದಲ್ಲಿ ನೋಡಿರಲಿಲ್ಲ. ಆಗ ಸ್ವಲ್ಪ ಭಯವಾಯ್ತು ಬಳಿಕ ಜನರನ್ನು ನೋಡಿ ಖುಷಿಯಾಯ್ತು ಎಂದರು.

Copyright � 2012 Kannadaprabha.com