Kannadaprabha The New Indian Express
ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ 
By select 
12 Jun 2019 12:00:00 AM IST

ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ 2019ರ ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಎಂಬ ಕೀರ್ತಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. 

ಒಡಂಬಡಿಕೆಗಳಿಂದ 21 ದಶಲಕ್ಷ ಯು ಎಸ್‌ ಡಾಲರ್ ಹಾಗೂ ಸಂಬಳ ಹಾಗೂ ಪಂದ್ಯದ ಪ್ರಶಸ್ತಿಗಳಿಂದ 4 ದಶಲಕ್ಷ ಡಾಲರ್‌ ಸೇರಿದಂತೆ ಒಟ್ಟು 25 ದಶಲಕ್ಷ ಡಾಲರ್‌ ಆದಾಯವನ್ನು ಕಳೆದ 12 ತಿಂಗಳಿಂದ ವಿರಾಟ್‌ ಕೊಹ್ಲಿ ಗಳಿಸಿದ್ದಾರೆ. ಮಂಗಳವಾರ 100 ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬಾರ್ಸಿಲೋನಾ ಹಾಗೂ ಅರ್ಜೆಂಟೀನಾ ಫುಟ್ಬಾಲ್‌ ತಾರೆ ಲಿಯೊನೆಲ್‌ ಮೆಸ್ಸಿ ಅಗ್ರ ಸ್ಥಾನದಲ್ಲಿದ್ದಾರೆ. ಕೊಹ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ವಿರಾಟ್‌ 83ನೇ ಸ್ಥಾನದಲ್ಲಿದ್ದರು. 
 
ಮೆಸ್ಸಿ ಇದೇ ಮೊದಲ ಬಾರಿ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಕಳೆದ ವರ್ಷ 31ರ ಪ್ರಾಯದ ಮೆಸ್ಸಿ 127 ದಶಲಕ್ಷ ಡಾಲರ್ ಗಳಿಸಿದ್ದಾರೆ. ಜುವೆಂಟಸ್‌ ತಂಡದ ಮುಂಚೂಣಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು (109 ದಶಲಕ್ಷ ಡಾಲರ್‌) ಎರಡನೇ ಸ್ಥಾನ ಪಡೆದಿದ್ದಾರೆ. ಬ್ರೆಜಿಲ್‌ ತಂಡದ ನೇಮರ್‌ (105 ದಶಲಕ್ಷ ಡಾಲರ್‌) ಅವರು ಮೂರನೇ ಸ್ಥಾನ ಪಡೆದಿದ್ದಾರೆ. 

ನಾಲ್ಕನೇ ಸ್ಥಾನದಲ್ಲಿ ಬಾಕ್ಸರ್‌ ಕ್ಯಾನೆಲೊ ಅಲ್ವರೆಜ್‌, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಟೆನಿಸ್‌ ತಾರೆ ರೋಜರ್‌ ಫೆಡರರ್‌, ರಸೆಲ್‌ ವಿಲ್ಸನ್‌(ಫುಟ್ಬಾಲ್‌) ಹಾಗೂ ಆ್ಯರೋನ್‌ ರಾಡ್ಜರ್ಸ್(ಫುಟ್ಬಾಲ್‌) ಸ್ಥಾನ ಪಡೆದಿದ್ದಾರೆ. 63ನೇ ಸ್ಥಾನ ಪಡೆದಿರುವ ಟೆನಿಸ್‌ ತಾರೆ ಸೆರೇನಾ ವಿಲಿಯಮ್ಸ್‌ ಅವರು ಫೋರ್ಬ್ಸ್‌ ಪಟ್ಟಿಯಲ್ಲಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ.

Copyright � 2012 Kannadaprabha.com