Kannadaprabha The New Indian Express
ವಿಶ್ವಕಪ್ ಮಹಾಸಮರ: ಟೀಂ ಇಂಡಿಯಾ-ಪಾಕ್ ಪಂದ್ಯ ನಡೆಯುವುದು ಡೌಟ್! ಯಾಕೆ ಅಂತೀರಾ? 
By select 
12 Jun 2019 12:00:00 AM IST

ಲಂಡನ್: ಪುಲ್ವಾಮಾ ಉಗ್ರ ಆತ್ಮಾಹುತಿ ಬಾಂಬ್ ದಾಳಿ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಪಂದ್ಯ ಆಡಬಾರದು ಎಂಬ ಕೂಗು ಭಾರತದಲ್ಲಿ ಜೋರಾಗಿತ್ತು. ಇದರ ಮಧ್ಯೆ ಪಾಕ್ ವಿರುದ್ಧದ ಪಂದ್ಯವನ್ನು ಆಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಇದೀಗ ಇಂಡೋ-ಪಾಕ್ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

ಜೂನ್ 16ರಂದು ಸಾಂಪ್ರಾದಾಯಿಕ ಎದುರಾಳಿಗಳಾದ ಇಂಡೋ-ಪಾಕ್ ಪಂದ್ಯ ನಿಗದಿಯಾಗಿದೆ. ಈ ಪಂದ್ಯ ನೋಡಲು ಇದೀಗ ಇಡೀ ಜಗತ್ತೆ ಎದುರು ನೋಡುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಪಂದ್ಯ ರದ್ದಾಗುವ ಸಾಧ್ಯತೆ ಇರುವುದರಿಂದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವಾಗಬಹುದು.

ಸದ್ಯ ಪಂದ್ಯಕ್ಕೆ ಉಭಯ ರಾಷ್ಟ್ರಗಳ ನಡುವಿನ ವೈಷಮ್ಯ ಅಥವಾ ರಾಜತಾಂತ್ರಿಕ ನಡೆ ಅಡ್ಡಿಯಾಗುತ್ತಿಲ್ಲ. ಬದಲಿಗೆ ಮಳೆರಾಯನ ಅವಕೃಪೆಯಿಂದ ಪಂದ್ಯ ರದ್ದಾಗಬಹುದು. ಹೌದು ಮಳೆಯಿಂದಾಗಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ, ನಿನ್ನೆಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಗಳು ರದ್ದಾಗಿತ್ತು.

ಸದ್ಯ ಟೌನ್ಟನ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಇಂದು ನಡೆಯಲಿದ್ದು ಅದಾಗಲೇ ಅಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಇನ್ನು ಮಳೆ ಹೀಗೆ ಮುಂದುವರೆದರೆ ಭಾನುವಾರ ನಡೆಯಲಿರುವ ಇಂಡೋ-ಪಾಕ್ ಪಂದ್ಯ ಸಹ ರದ್ದಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Copyright � 2012 Kannadaprabha.com