Kannadaprabha The New Indian Express
ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ: ರಾಜಾಸಾಬ್ 
By select 
25 Aug 2013 02:00:00 AM IST

ಕ.ಪ್ರ.ವಾರ್ತೆ ತುಮಕೂರು  ಆ. 24
ತುಮಕೂರು ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸುವ ಮೂಲಕ ವಿದೇಶಿ ವಿದ್ಯಾರ್ಥಿಗಳನ್ನೂ ಆಕರ್ಷಿಸುವಂತಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್ ಕಿವಿಮಾತು ಹೇಳಿದರು.
ಕುಲಪತಿಯಾಗಿ ಅಧಿಕಾರ  ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ಘಟಕ ಸಂಸ್ಥೆ ಕಲಾ ಕಾಲೇಜಿಗೆ ಶನಿವಾರ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಹಾಗೂ ಬೋಧಕ-ಬೋಧಕೇತರರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದ ಬಗ್ಗೆ ತಾವು ಉನ್ನತ ಕನಸುಗಳನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದರು.
ವಿಶಾಲ ಕ್ಯಾಂಪಸ್ ಚಿಂತನೆ: ವಿಶ್ವ ವಿದ್ಯಾನಿಲಯವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪಸ್ ಇದರ ನಗರ ಕ್ಯಾಂಪಸ್ ಆಗಿ ಉಳಿಯಬೇಕು. ಇದರ ಜತೆಜತೆಗೆ ಇನ್ನೊಂದು ವಿಶಾಲ ಕ್ಯಾಂಪಸ್ ಅನ್ನು ಕಟ್ಟಿಬೆಳೆಸಿ ಅದನ್ನು ಭೌತಿಕವಾಗಿಯೂ ಬೌದ್ಧಿಕವಾಗಿಯೂ ಬೆಳೆಸುವ ಉದ್ದೇಶ ತಮಗಿದೆ ಎಂದರು.
ಎ ಗ್ರೇಡ್ ಸಾಧನೆ ಮೆಚ್ಚುಗೆ: ಕಲಾ ಕಾಲೇಜು ನ್ಯಾಕ್‌ನಿಂದ ಎ ಗ್ರೇಡ್ ಪಡೆದಿರುವುದು ಒಂದು ದೊಡ್ಡಸಾಧನೆ. ಇದು ಇಲ್ಲಿನ ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ತೋರಿಸುತ್ತದೆ. ಈ ಗುಣಮಟ್ಟವನ್ನು ಉಳಿಸಿಕೊಂಡುಹೋಗುವಲ್ಲಿ ಎಲ್ಲರೂ ಮಹತ್ವದ ಪಾತ್ರ ವಹಿಸಬೇಕು ಎಂದರು.
ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ: ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಅಧ್ಯಯನಗಳಲ್ಲಿ ನಿರತರಾಗಿರಬೇಕು. ವಿಚಾರವಂತರ ಸಂಗ ಮಾಡಬೇಕು. ಕೀಳರಿಮೆ ತೊರೆದು ನಿರ್ದಿಷ್ಟ ಗುರಿ ಸಾಧಿಸಲು ಯತ್ನಿಸಬೇಕು. ಜ್ಞಾನಾರ್ಜನೆ ಒಂದೆರಡು ವರ್ಷಗಳ ಕಾರ್ಯವಲ್ಲ. ಅದೊಂದು ನಿರಂತರ ಪ್ರಕ್ರಿಯೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು.
ವಿದ್ಯಾರ್ಥಿಗಳ ಪರವಾಗಿ ಮನವಿ: ವಿದ್ಯಾರ್ಥಿಗಳ ಪರವಾಗಿ ಯಶವಂತ್ ಮತ್ತು ತ್ರಿವೇಣಿ ಕಾಲೇಜಿನ ಅವಶ್ಯಕತೆಗಳ ಬಗ್ಗೆ ಕುಲಪತಿಗಳಿಗೆ ಮನವಿ ಸಲ್ಲಿಸಿದರು. ಬೋಧಕವರ್ಗದ ಪರವಾಗಿ ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಪದ್ಮನಾಭ ಕೆ.ವಿ. ಮಾತನಾಡಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಕ್ಯಾಂಪಸ್ ಸುದ್ದಿಯ ಎರಡನೇ ವರ್ಷದ ಆವೃತ್ತಿಯನ್ನು ಕುಲಪತಿ ಪ್ರೊ. ರಾಜಾಸಾಬ್ ಇದೇ ಸಂದರ್ಭ ಅನಾವರಣಗೊಳಿಸಿದರು. ವಿ.ವಿ.ಯ ಮೌಲ್ಯಮಾಪನ ಕುಲಸಚಿವ ಡಾ. ಎಂ. ಜಯರಾಮು, ಕಲಾ ಕಾಲೇಜು ಪ್ರಾಂಶುಪಾಲ ಟಿ.ಎನ್. ಹರಿಪ್ರಸಾದ್, ಕಾಲೇಜಿನ ಬೋಧಕ -ಬೋಧಕೇತರ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಗಿರಿಜಾ ವಂದಿಸಿದರು.

Copyright � 2012 Kannadaprabha.com