ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ: ಒಮರ್​ ಅಬ್ದುಲ್ಲಾಗೆ ಮೋದಿ ತರಾಟೆ, ಮಹಾಘಟ್ ಬಂಧನ್ ನಿಲುವು ಪ್ರಶ್ನಿಸಿದ ಪ್ರಧಾನಿ

ತಾವು ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ನೇಮಕ ಮಾಡುವುದಾಗಿ ಹೇಳಿದೆ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ....
ನರೇಂದ್ರ ಮೋದಿ
ನರೇಂದ್ರ ಮೋದಿ
ಸಿಖಂದರಾಬಾದ್​: ತಾವು ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ನೇಮಕ ಮಾಡುವುದಾಗಿ ಹೇಳಿದೆ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಈ ಕಾಂಗ್ರೆಸ್ ಸೇರಿದಂತೆ ಮಹಾಘಟ್ ಬಂಧನ್ ನಾಯಕರು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಆಂಧ್ರ ಪ್ರದೇಶದ ಸಿಖಂದರಬಾದ್ ನಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಮರ್​ ಅಬ್ದುಲ್ಲಾ ಹೇಳಿಕೆಯನ್ನು ಪ್ರಸ್ತಾಪಿಸುತ್ತಾ ವಿರೋಧ ಪಕ್ಷಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‌ ಪ್ರಮುಖ ಮೈತ್ರಿಪಕ್ಷವಾಗಿರುವ ನ್ಯಾಷನಲ್‌ ಕಾನ್ಫರೆನ್ಸ್ ನಾಯಕರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಮಂತ್ರಿ ಬೇಕು ಎಂದು ಹೇಳುತ್ತಿದ್ದಾರೆ. ಇಂಥ ದುಸ್ಸಾಹಸದ ಬೇಡಿಕೆಗಳನ್ನು ಕಾಂಗ್ರೆಸ್‌ ಪಕ್ಷದ ಮೈತ್ರಿ ಪಕ್ಷ ಮುಂದಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು. 
ಹಿಂದೂಸ್ತಾನಕ್ಕೆ ಮತ್ತೊಬ್ಬ ಪ್ರಧಾನಿ ಬೇಕಾ? ಕಾಂಗ್ರೆಸ್‌ಗೆ ಇದು ಬೇಕಾ? ಇದಕ್ಕೆ ಕಾಂಗ್ರೆಸ್‌ ಪಕ್ಷವೇ ಉತ್ತರ ನೀಡಬೇಕು. ಇಂಥ ಮಾತುಗಳನ್ನು, ಹೇಳಿಕೆಗಳನ್ನು ನೀಡುವ ಧೈರ್ಯ ಎಲ್ಲಿಂದ ಬಂದಿದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ದೇಶವನ್ನು ಮತ್ತೆ 1953ರ ದಶಕಕ್ಕೆ ಕೊಂಡೊಯ್ಯುವ ಯೋಜನೆ ಹಾಕಿಕೊಂಡಂತಿದೆ ಎಂದು ಮೋದಿ ಕಿಡಿಕಾರಿದರು.
ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್​ಡಿ ದೇವೇಗೌಡರ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ನಿಮ್ಮ ಮಹಾಘಟಬಂಧನದ ಮಿತ್ರ ಪಕ್ಷದ ನಾಯಕರೊಬ್ಬರು ಭಾರತಕ್ಕೆ ಇಬ್ಬಿಬ್ಬರು ಪ್ರಧಾನಿಗಳು ಬೇಕು ಎಂದಿದ್ದಾರೆ. ಕಾಶ್ಮೀರವನ್ನು ಪ್ರತ್ಯೇಕಗೊಳಿಸಿ, ಅಲ್ಲಿಗೆ ಬೇರೊಬ್ಬ ಪ್ರಧಾನ ಮಂತ್ರಿಯನ್ನು ನೇಮಕ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ದೇಶಕ್ಕೆ ಮಾರಕವಾಗುವಂತಹ ಇಂತಹ ಆಲೋಚನೆ ಬಗ್ಗೆ ನಿಮ್ಮ ನಿಲುವೇನು? ನೀವೂ ಬೇರೊಬ್ಬ ಪ್ರಧಾನ ಮಂತ್ರಿಯನ್ನು ಬಯಸುತ್ತೀರಾ? ನಿಮ್ಮ ನಿಲುವನ್ನು ಕರ್ನಾಟಕದ ಜನತೆ ಮುಂದೆ ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದ್ದಾರೆ.
ಇದೇ ವೇಳೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ, ನಾಯ್ಡು ಅವರು ಪ್ರತ್ಯೇಕ ಪ್ರಧಾನಿ ಬೇಕು ಎನ್ನುತ್ತಿರುವ ಪಕ್ಷದ ನಾಯಕನೊಂದಿಗೆ ಇತ್ತೀಚೆಗಷ್ಟೇ ಆಂಧ್ರ ಪ್ರದೇಶದಲ್ಲಿ ಬಹಿರಂಗ ಸಭೆ ನಡೆಸಿದ್ದಾರೆ. ಯೂಟರ್ನ್ ಬಾಬು ಅವರೇ ನೀವೇನು ಹೇಳ್ತೀರಾ? ಎಂದು ಪ್ರಧಾನಿ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com