ಆನೆಗಳನ್ನು ಓಡಿಸುವುದು ರಾಹುಲ್ ಅವರ ಸ್ವಾಗತಕ್ಕಿಂತ ಮುಖ್ಯ: ವಯನಾಡ್ ಬುಡಕಟ್ಟು ಜನರಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ

ಕೇರಳದ ಬುಡಕಟ್ಟು ಪ್ರಾಬಲ್ಯದ ಕ್ಷೇತ್ರವಾದ ವಯನಾಡ್ ನಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗುರುವಾರ ವಯನಾಡ್ ನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಯನಾಡ್: ಕೇರಳದ ಬುಡಕಟ್ಟು ಪ್ರಾಬಲ್ಯದ ಕ್ಷೇತ್ರವಾದ ವಯನಾಡ್ ನಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗುರುವಾರ ವಯನಾಡ್ ನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ರೋಡ್ ಶೋಗಳನ್ನು ಸಹ ಪ್ರಾರಂಭಿಸಿದ್ದಾರೆ.  ಆದರೆ ದಕ್ಷಿಣಕ್ಕೆ ಬಂದ ರಾಹುಲ್ ಗೆ ಇಲ್ಲಿನ ಅರಣ್ಯ ನಿವಾಸಿಗಳು ಎದುರಿಸುತ್ತಿರುವ ತೀವ್ರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ತುರ್ತು ಎದುರಾಗಿದೆ. ರಾಜಕೀಯ ಚರ್ಚೆಗಳ ಹೊರತಾಗಿ ಇಲ್ಲಿನ ಅರಣ್ಯ ನಿವಾಸಿ, ಬುಡಕಟ್ಟು ಜನರ ಆಹಾರ, ಆಶ್ರಯ ಮತ್ತು  ಪದೇ ಪದೇ ಎದುರಾಗುವ ಆನೆ ದಾಳಿಗಳಂತಹಾ ಸಮಸ್ಯೆಯ ವಿರುದ್ಧದ ಹೋರಾಟಕ್ಕೆ ಶಾಶ್ವತ ಪರಿಹಾರವನ್ನು ಈ ಜನರು ಎದುರು ನೋಡುತ್ತಿದ್ದಾರೆ.
ವಯನಾಡ್ ಜಿಲ್ಲೆಯ ಸುಮಾರು 18 ಪ್ರತಿಶತದಷ್ಟು ಜನ ಬುಡಕಟ್ಟು ಸಮುದಾಯದವರೇ  ಇದ್ದು ಇಲ್ಲಿನ ಎರಡು ವಿಧಾನಸಭೆ ಕ್ಷೇತ್ರಗಳಾದ ಸುಲ್ತಾನ್ ಬತೇರಿ ಹಾಗೂ ಮಣಂತವಾಡಿಗಳಲ್ಲಿ ಬುಡಕಟ್ಟು ಜನ ಆಶ್ರಯ ಪಡೆದಿದ್ದಾರೆ.
"ನಮಗೆ ಆಶ್ರಯ ಅಥವಾ ಒಳ್ಳೆಯ ವಾಸಸ್ಥಾನವಿಲ್ಲ, ಯಾವುದೇ ರಸ್ತೆಗಳಿಲ್ಲ, ಸರಿಯಾದ ಕುಡಿಯುವ ನೀರು ಇಲ್ಲ, ರಾಜಕಾರಣಿಗಳು ಈ ಸಂಬಂಧ ಯಾವ ಭರವಸೆಯನ್ನೂ ನೀಡುವುದಿಲ್ಲ, ಇದನ್ನು ಈಡೇರಿಸುವುದು ಸಹ ಇಲ್ಲ. " ವಯನಾಡ್ ಕಾಡುಗಳಲ್ಲಿ ವಾಸಿಸುವ ಬುಡಕಟ್ಟುವ್ಯಕ್ತಿಯೊಬ್ಬರು ಹೇಳಿದ್ದಾರೆ.
"ಬುಡಕಟ್ಟು ಮಂದಿಯಾದ ನಮ್ಮ ಮನೆಗಳು ಅರಣ್ಯದಲ್ಲಿದ್ದು ನಮ್ಮಲ್ಲಿ ನಿರಂತರವಾಗಿ ಆನೆ ದಾಳಿಗಳು ನಡೆಯುತ್ತದೆ. ಮನೆಗಳಿಗೆ ಆನೆ ನುಗ್ಗುವುದು ಸಾಮಾನ್ಯವಾಗಿದೆ. ಆನೆ ದಾಳಿಯಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಇದಕ್ಕೆ ಯಾವ ರಾಜಕಾರಣಿಗಳೂ ಪರಿಹಾರ ಸೂಚಿಸುವುದಿಲ್ಲ. ಹೀಗಾಗಿ ನಾವು ಈ ಬಾರಿ ಮತ ಚಲಾಯಿಸುವುದಿಲ್ಲ. ಮತದಾನ ಬಹಿಷ್ಕರಿಸುತ್ತೇವೆ" ಬುಡಕಟ್ಟು ಮಹಿಳೆಯೊಬ್ಬರು ಹೇಳಿದ್ದಾರೆ.
ಈ ಪ್ರದೇಶವು ಶತಮಾನಗಳಿಂದ ಬುಡಕಟ್ಟು ಜನಾಂಗದವರ ನೆಲೆಯಾಗಿದೆ ಸಾಂಪ್ರದಾಯಿಕವಾಗಿ, ವಯನಾಡ್ ಬುಡಕಟ್ಟಿನ ಭೂಮಿ, ಅವರು ತಮ್ಮ ಹೆಸರಿನಲ್ಲಿ ಭೂಮಿಯನ್ನು ನೊಂದಾಯಿಸಿಕೊಳ್ಳುವುದಕ್ಕೆ ಸರ್ಕಾರ ಅಡ್ಡಿಯಾಗಿದೆ.  ಅಲ್ಲದೆ ಈಗ ಇಲ್ಲಿನ ಮೂಲನಿವಾಸಿಗಳೇ ಇಲ್ಲಿಗೆ ಹೊರಗಿನವರೆನ್ನುವಂತಾಗಿದೆ" ನಾಲ್ಕು ದಶಕಗಳ ಕಾಲ ವಯನಾಡ್ ಬುಡಕಟ್ಟು ಜನಾಂಗದ ಪರ ಕೆಲಸ ಮಾಡುತ್ತಿರುವ ಡಾ ಜಿತೇಂದ್ರನಾಥ್ ಹೇಳಿದರು.
ಸುಲ್ತಾನ್ ಬತೇರಿ ಮೂಲದವರಾದ ಜಿತೇಂದ್ರನಾಥ್ ಈ ಪ್ರದೇಶದ ಜನರಲ್ಲಿ ಅಪೌಷ್ಟಿಕತೆ ಮುಂತಾದ ಸಮಸ್ಯೆಗಳು ಇನ್ನೂ ಜೀವಂತವಾಗಿದೆ ಎಂದಿದ್ದಾರೆ. ಬುಡಕಟ್ಟು ಜನಾಂಗದ ಪ್ರಧಾನ ಆಹಾರವೆಂದರೆ ಮಾಂಸ ಮತ್ತು ಹಣ್ಣುಗಳು, ಆದರೆ ಸರ್ಕಾರ ವಿವಿಧ ಯೋಜನೆಗಳಡಿಯಲ್ಲಿ ಹಾಲಿನ ಪುಡಿ, ಅಕ್ಕಿ ಮುಂತಾದ ಆಹಾರ ವಿತರಣೆ ಮಾಡಿದ್ದಲ್ಲದೆ ಜನರು ಆಹಾರ ಪದ್ದತಿ ಬದಲಿಸಿಕೊಳ್ಳಬೇಕೆಂದು ಒತ್ತಡ ಹೇರುತ್ತಿದೆ. ಅಂತಹಾ ಆಹಾರವನ್ನು ಅವರು ಬಳಸುವುದಿಲ್ಲ, ಇದರಿಂದ ಅವರಿಗೆ ಅಪೌಷ್ಟಿಕತೆಯು ಸಮಸ್ಯೆ ತಲೆದೋರುತ್ತಿದೆ ಎಂದು ಅವರು ಹೇಳೀದ್ದಾರೆ.
ತಮ್ಮ ಮೂಲಭೂತ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅದನ್ನು ಬಗೆಹರಿಸುವ ಉಪಾಯ ಯೋಜಿಸುವುದು ಅಗತ್ಯವಾಗಿದೆ ಎನ್ನುವ ಇಲ್ಲಿನ ಜನತೆ  "ದಯವಿಟ್ಟು ನಮ್ಮನ್ನು ನಿಮ್ಮ ಮತಬ್ಯಾಂಕುಗಳನ್ನಾಗಿ ನೋಡಬೇಡಿ" ಎಂದು ಒತ್ತಾಯಿಸಿದ್ದಾರೆ.
ಈ ಬಾರಿ ರಾಹುಲ್ ಗಾಂಧಿ ಅವರಿಗೆ ಎದುರಾಳಿಗಳಾಗಿ ಸಿಪಿಐ ನ ಪಿಪಿ ಸುನೀರ್ ಎಲ್ಡಿಎಫ್ ಅಭ್ಯರ್ಥಿಯಾಗಿದ್ದರೆ ಬಿಡಿಜೀಸ್ ಅಭ್ಯರ್ಥಿಯಾದ ತುಷಾರ್ ವೆಳ್ಳಪಳ್ಳಿ ಎನ್ ಡಿಎ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನ ಎಂ.ಐ ಶಾನವಾಸ್ ಇತ್ತೀಚ್ಗೆ ಮೃತಪಟ್ಟಿದ್ದು ಅವರು ಈ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com