ನಿಮ್ಮ ಟೀಕೆಗೆ ಹೆದರಿ ಓಡಿ ಹೋಗುವವಳು ನಾನಲ್ಲ: ಅಜಂಖಾನ್ ವಿರುದ್ಧ ಜಯಪ್ರದಾ ಆಕ್ರೋಶ

ಸಮಾಜವಾದಿ ಮುಖಂಡ ಅಜಂಖಾನ್ ರ 'ಖಾಕಿ ಅಂಡರ್ ವೇರ್' ಹೇಳಿಕೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದ ಈ ಸಂಬಂಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ನಟಿ ಮತ್ತು ಬಿಜೆಪಿ ಅಭ್ಯರ್ಥಿ ಜಯಪ್ರದ
ನಟಿ ಮತ್ತು ಬಿಜೆಪಿ ಅಭ್ಯರ್ಥಿ ಜಯಪ್ರದ
ಲಖನೌ: ಸಮಾಜವಾದಿ ಮುಖಂಡ ಅಜಂಖಾನ್ ರ 'ಖಾಕಿ ಅಂಡರ್ ವೇರ್' ಹೇಳಿಕೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದ ಈ ಸಂಬಂಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವಿವಾದ ಸೃಷ್ಟಿಯಾದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಜಯಪ್ರದಾ ಅವರು, ಅಜಂಖಾನ್ ಅವರಿಗೆ ನಾನೇನು ಮಾಡಿದ್ದೇನೋ ನನಗೆ ತಿಳಿಯುತ್ತಿಲ್ಲ. ಅವರಿಗೆ ನನ್ನ ಬಗ್ಗೆ ಗೌರವ ಬೇಡ.. ಕನಿಷ್ಟ ಪಕ್ಷ ಹೆಣ್ಣಿನ ಮೇಲೂ ಗೌರವವಿದ್ದಂತೆ ಕಾಣುತ್ತಿಲ್ಲ. ಓರ್ವ ಹೆಣ್ಣಾಗಿ ಅವರು ನನ್ನ ವಿರುದ್ಧ ಬಳಸಿರುವ ಪದಗಳನ್ನು ನಾನು ಹೇಳಲು ಸಾಧ್ಯವಿಲ್ಲ. ನಾನು ಈಗ ಬಿಜೆಪಿಯಲ್ಲಿದ್ದೇನೆ ಎಂದು ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಅಂದು ನಾನು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾಗಲೂ ಅಜಂಖಾನ್ ನನ್ನ ವಿರುದ್ಧ ಹೇಳಿಕೆ ನೀಡಿದಾಗ ಯಾರೂ ಕೂಡ ನನ್ನ ಬೆಂಬಲಕ್ಕೆ ನಿಂತಿರಲಿಲ್ಲ. ಪ್ರಚಾರ ಮಾಡಿರಲಿಲ್ಲ. ನನ್ನ ಬಗ್ಗೆ ಅಜಂಖಾನ್ ಅವರಿಗೆ ಏಕೆ ಇಷ್ಟು ಕೋಪ ನನಗೆ ತಿಳಿಯುತ್ತಿಲ್ಲ. ನಾನು ಅವರಿಗೇನು ಮಾಡಿದ್ದೇನೋ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಇಂತಹ ಟೀಕೆಗಳು ನನಗೇನು ಹೊಸದಲ್ಲ. ಇಂತಹ ಟೀಕೆಗಳಿಂದ ನಾನು ಮತ್ತಷ್ಟು ಗಟ್ಟಿಗೊಳ್ಳುತ್ತೇನೆ. ನನ್ನ ಗುರಿ ನಿಖರವಾಗಿದ್ದು, ಜನರ ಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದ ಜಯಪ್ರದಾ ಅವರು, ಅಜಂಖಾನ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. 'ಇಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಬಾರದು. ಒಂದು ವೇಳೆ ಇಂತಹವರು ಗೆದ್ದರೆ ಸಂವಿಧಾನ ಮತ್ತು ಪ್ರಜಾಪ್ರಭತ್ವದ ಗತಿ ಏನು..? ಆಗ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನವೇ ಇಲ್ಲದಂತಾಗುತ್ತದೆ. ನಾವು ಎಲ್ಲಿಗೆ ಹೋಗಬೇಕು.. ನಮ್ಮ ಅಸ್ಥಿತ್ವವನ್ನು ಹೇಗೆ ರಕ್ಷಿಸಿಕೊಳ್ಳಬೇಕು? ಒಂದು ವೇಳೆ ನಿಮ್ಮ ಈ ಹೇಳಿಕೆಗಳಿಂದ ನಾನು ಭಯಪಡುತ್ತೇನೆ ಮತ್ತು ರಾಂಪುರದಿಂದ ಓಡಿ ಹೋಗುತ್ತೇನೆ ಎಂದು ನೀವು ಭಾವಿಸಿದ್ದರೆ.. ಅದು ನಿಮ್ಮ ತಪ್ಪು ನಿರ್ಣಯ.. ಯಾವುದೇ ಕಾರಣಕ್ಕೂ ನಾನು ಕ್ಷೇತ್ರ ಬಿಟ್ಟು ಪರಾರಿಯಾಗುವುದಿಲ್ಲ. ಬದಲಿಗೆ ಮತ್ತಷ್ಟು ಗಟ್ಟಿಗೊಂಡು ಪ್ರಚಾರ ನಡೆಸುತ್ತೇವೆ ಎಂದು ಜಯಪ್ರದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com