ಖಾಕಿ ಅಂಡರ್ ವೇರ್ ಹೇಳಿಕೆ: ನನ್ನದೇ ತಪ್ಪು ಎಂದಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ- ಅಜಂ ಖಾನ್

ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಮರ್ಥನೆ ನೀಡಿದ್ದು, ನಾನು ಮಾಡಿದ್ದು ತಪ್ಪು ಎಂದು ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ತುತ್ತಾಗಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಮರ್ಥನೆ ನೀಡಿದ್ದು, ನಾನು ಮಾಡಿದ್ದು ತಪ್ಪು ಎಂದು ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಭಾನುವಾರ ರಾಂಪುರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಅಜಂಖಾನ್, 'ಜಯಪ್ರದಾ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ನಾನು. ಇದೇ ರಾಂಪುರದಿಂದ ಆಕೆಗೆ ಟಿಕೆಟ್ ಕೊಡಿಸಿದ್ದೆ. ಆಕೆಯ ಬಾಡಿಗಾರ್ಡ್ ನಂತೆ ಆಕೆಯನ್ನು ಯಾರೂ ಕೂಡ ಸ್ಪರ್ಶಿಸದಂತೆ ನೋಡಿಕೊಂಡೆ. ಆದರೆ ಆಕೆಯ ನಿಜವಾದ ಮುಖವನ್ನು ತಿಳಿಯಲು ನನಗೆ 17 ವರ್ಷಗಳೇ ಬೇಕಾಯಿತು. 17 ದಿನಗಳ ಹಿಂದಷ್ಟೇ ಆಕೆ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ತಿಳಿಯಿತು ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. 
ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಈ ಸಂಬಂಧ ಸ್ಪಷ್ಟನೆ ನೀಡಿರುವ ಅಜಂಖಾನ್, 'ನಾನು ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿಲ್ಲ, ನಾನು ಜಯಪ್ರದ ಅವರ ನಿಜವಾದ ಮುಖ ಅನಾವರಣಗೊಳ್ಳಲು 17 ವರ್ಷಗಳು ಬೇಕಾಯಿತು. ಆಕೆ ಆರ್ ಎಸ್ ಎಸ್ ಪರ ಒಲವು ಹೊಂದಿದ್ದು, ಆರ್ ಎಸ್ ಎಸ್ ಪ್ಯಾಂಟ್ ಧರಿಸುತ್ತಾರೆ ಎಂದು ಹೇಳಿದ್ದೆ. ಆದರೆ ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನಾನು 9 ಬಾರಿ ರಾಂಪುರದಿಂದ ಶಾಸಕನಾಗಿ ಆರಿಸಿ ಬಂದಿದ್ದೇನೆ. ಏನನ್ನು ಹೇಳಬೇಕು.. ಏನನ್ನು ಹೇಳಬಾರದು ಎಂಬುದು ನನಗೆ ತಿಳಿದಿದೆ. ಒಂದು ವೇಳೆ ನಾನು ಜಯಪ್ರದಾ ಅವರ ವಿರುದ್ಧ ಕೀಳು ಮಟ್ಟದ ಪದ ಬಳಕೆ ಮಾಡಿರುವುದನ್ನು ಯಾರಾದರೂ ಸಾಬೀತು ಪಡಿಸಿದರೆ, ನಾನು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಅಜಂಖಾನ್ ಸವಾಲು ಹಾಕಿದ್ದಾರೆ.
ಅಂತೆಯೇ ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದೂ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com