ಲೋಕಸಭೆ ಚುನಾವಣೆಗೆ ಆಪ್​​ ಪ್ರಣಾಳಿಕೆ ಬಿಡುಗಡೆ: ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನದ ಭರವಸೆ

ಲೋಕಸಭೆ ಚುನಾವಣೆಗೆ ಆಮ್​​ ಆದ್ಮಿ ಪಕ್ಷ(ಎಎಪಿ) ಗುರುವಾರ ತನ್ನ ರಾಷ್ಟ್ರೀಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೆ ಪೂರ್ಣ ಪ್ರಮಾಣದ...
ಪ್ರಣಾಳಿಕೆ ಬಿಡುಗಡೆ
ಪ್ರಣಾಳಿಕೆ ಬಿಡುಗಡೆ
ನವದೆಹಲಿ: ಲೋಕಸಭೆ ಚುನಾವಣೆಗೆ ಆಮ್​​ ಆದ್ಮಿ ಪಕ್ಷ (ಎಎಪಿ) ಗುರುವಾರ ತನ್ನ ರಾಷ್ಟ್ರೀಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ನೀಡುವ ಭರವಸೆ ನೀಡಿದೆ.
ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ಸಿಗುವವರೆಗೆ ನಮ್ಮ ಹೋರಾಟ ಕೇಂದ್ರದ ವಿರುದ್ಧ ಮುಂದುವರೆಯಲಿದೆ ಎಂದಿದ್ದಾರೆ. 
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಆದರೆ, ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಸಿಗಬೇಕಾದಲ್ಲಿ ನಾವು ಲೋಕಸಭಾ ಚುನಾವಣೆ ಗೆದ್ದು ಸಂಸತ್​​ ಪ್ರವೇಶಿಸಬೇಕಿದೆ. ಹಾಗಾಗಿ ನಮ್ಮನ್ನು ಗೆಲ್ಲಿಸಿದರೆ ಸಂಪೂರ್ಣ ರಾಜ್ಯ ದೆಹಲಿಗೆ ತರಲಿದ್ದೇವೆ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ-ಅಮಿತ್ ಶಾ ಜೋಡಿಯನ್ನು ತಡೆಯಲು ತಾವು ಯಾವುದೇ ಜಾತ್ಯತೀತ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ದೆಹಲಿ ಸಿಎಂ ಹೇಳಿದ್ದಾರೆ.
ಹಿಂದೂ, ಸಿಖ್ ಮತ್ತು ಬೌದ್ಧರನ್ನು ಬಿಟ್ಟು ಉಳಿದ ಅಕ್ರಮ ವಲೆಸಿಗರನ್ನು ದೇಶದಿಂದ ಹೊರಹಾಕಿ ಎಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಅವರ ಈ ಹೇಳಿಕೆಯಿಂದ ಈ ಮೂರು ಧರ್ಮಿಯರನ್ನು ಬಿಟ್ಟು ಉಳಿದವರನ್ನು ದೇಶದಿಂದ ಹೊರಹಾಕುವ ಬಿಜೆಪಿ ಉದ್ದೇಶ ಸ್ಪಷ್ಟವಾಗಿದೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಅವರು ಕೇವಲ ಟ್ವೀಟ್ಟರ್ ನಲ್ಲಿ ಮಾತ್ರ ಮೈತ್ರಿ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿಯೇ ಹೊಣೆಗಾರರು ಎಂದಿದ್ದಾರೆ.
ನಾವು ಮೈತ್ರಿಗೆ ಸಿದ್ದರಿದ್ದೇವೆ ಎಂದು ಕಾಂಗ್ರೆಸ್​ ಹೇಳುತ್ತದೆ. ಅದೂ ಕೇವಲ ವ್ಯಂಗ್ಯವಾಡುವ ಮಾತುಗಳನ್ನು ಆಡುತ್ತಿದೆ. ಮತ್ತೆ ಕೇಂದ್ರದಲ್ಲಿ ಮೋದಿ-ಅಮಿತ್​ ಶಾ ಜೋಡಿ ಅಧಿಕಾರಕ್ಕೆ ಬಂದರೇ, ಅದಕ್ಕೆ ನೇರಹೊಣೆ ರಾಹುಲ್​ ಗಾಂಧಿಯವರೇ ಎಂದು ಸಿಎಂ ಕೇಜ್ರಿವಾಲ್​​ ಕಿಡಿಕಾರಿದರು.
ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟಚಾರ ಮುಕ್ತ ಭಾರತ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ನಾವು ಗೆದ್ದರೇ ಜನಲೋಕ್ ಪಾಲ್ ಮಸೂದೆ ಜಾರಿಗೆ ಹೋರಾಟ ಮಾಡುತ್ತೇವೆ. ಲೋಕಪಾಲ್ ವ್ಯಾಪ್ತಿಗೆ ದೇಶದ ಪ್ರಧಾನಿಯಿಂದ ಹಿಡಿದು ಜವಾನನ​​ವರೆಗೂ ಒಳಪಡುವಂತೆ ಮಾಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com