ಸ್ವಾತಂತ್ರ್ಯ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪರ ಅಲೆ ಇದೆ: ನರೇಂದ್ರ ಮೋದಿ

ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಆಡಳಿತ ಸರ್ಕಾರ ಪರ ಅಲೆ ಚುನಾವಣೆ ಸಂದರ್ಭದಲ್ಲಿ ಈಗ ಕಾಣುತ್ತಿದ್ದು ದೇಶಾದ್ಯಂತ ಜನರು ಮತ್ತೊಂದು ಬಾರಿ ಎಂದು ಹೇಳಿ ಪ್ರಧಾನಿ ಮೋದಿಯವರು ...
ವಾರಣಾಸಿಯಲ್ಲಿ ನಿನ್ನೆ ರೋಡ್ ಶೋನಲ್ಲಿ ಬೆಂಬಲಿಗರತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ
ವಾರಣಾಸಿಯಲ್ಲಿ ನಿನ್ನೆ ರೋಡ್ ಶೋನಲ್ಲಿ ಬೆಂಬಲಿಗರತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ
ವಾರಣಾಸಿ: ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಆಡಳಿತ ಸರ್ಕಾರ ಪರ ಅಲೆ ಚುನಾವಣೆ ಸಂದರ್ಭದಲ್ಲಿ ಈಗ ಕಾಣುತ್ತಿದ್ದು ದೇಶಾದ್ಯಂತ ಜನರು ಮತ್ತೊಂದು ಬಾರಿ ಎಂದು ಹೇಳಿ ಪ್ರಧಾನಿ ಮೋದಿಯವರು ಮಾತನ್ನು ತಡೆದರು.
ಆಗ ಅಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಸರ್ಕಾರ ಎಂದು ಒಕ್ಕೊರಲಿನಿಂದ ಕೂಗಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಇನ್ನು ಕೆಲವೇ ಹೊತ್ತಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ನೆರೆದಿದ್ದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ನಾನು ಗೆಲ್ಲುತ್ತೀನೋ, ಇಲ್ಲವೋ ಎನ್ನುವುದು ಮುಖ್ಯವಲ್ಲ, ಪ್ರಜಾಪ್ರಭುತ್ವ ಗೆಲ್ಲಬೇಕು. ನೀವು ಮೋದಿಯ ಸೈನಿಕರಾಗಿದ್ದರೆ ಟಿವಿಗಳಲ್ಲಿ ಚರ್ಚೆ ಮಾಡುವವರ ಮಾತುಗಳಿಂದ ಪ್ರೇರೇಪಿತರಾಗಬೇಡಿ. ರಾಜಕೀಯದಲ್ಲಿ ಪ್ರೀತಿ, ಸ್ನೇಹ ಮುಖ್ಯವಾಗಿದ್ದು ಅದು ನಿಧಾನವಾಗಿ ಕಣ್ಮರೆಯಾಗುತ್ತಿದೆ ಎಂದರು.
ರಾಜಕೀಯದಲ್ಲಿ ಪ್ರೀತಿ, ಸೌದಾರ್ದತೆ, ಸ್ನೇಹವನ್ನು ಮತ್ತೆ ತರಬೇಕಿದೆ. ಯಾರು ಏನೇ ಹೇಳಲಿ, ಮೋದಿಯನ್ನು ಎಷ್ಟೇ ಬೈಯಲಿ, ನಿಂದಿಸಲಿ ಆದರೆ ನೀವು ಅವಕ್ಕೆಲ್ಲ ಆತಂಕಗೊಳ್ಳಬೇಕಿಲ್ಲ ಎಂದು ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ನನ್ನನ್ನು ಅವರು ಚೋರ ಎನ್ನಲಿ, ಸುಳ್ಳ ಎನ್ನಲಿ ನೀವು ಪ್ರತಿಕ್ರಿಯಿಸಬೇಡಿ, ಪ್ರೀತಿಸುವುದನ್ನು ನಿಲ್ಲಿಸಬೇಡಿ. ಪ್ರೀತಿಯ ರಾಜಕಾರಣವನ್ನು ನಾವೆಲ್ಲ ಮಾಡೋಣ, ನನ್ನ ವಿರುದ್ಧ ಯಾರನ್ನೂ ಶತ್ರುಗಳಂತೆ ನೋಡಬೇಡಿ. ಎಲ್ಲ ಉಮೇದುವಾರರು ಆದರಣೀಯರು. ಪ್ರಜಾಪ್ರಭುತ್ವ ಬಲಪಡಿಸಲು ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎನ್ನುವ ಭಾವನೆ ನಿಮಗಿರಲಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ನರೇಂದ್ರ ಮೋದಿ ಹೇಳಿದರು.
ಯಾವುದೇ ಋಣಾತ್ಮಕ ಅಂಶಗಳನ್ನು ಬಿತ್ತಬೇಡಿ, ನಮೋ ಆಪ್ ನ್ನು ಓದಿ ಎಂದು ಮೊದಲ ಬಾರಿ ಮತದಾನ ಮಾಡುತ್ತಿರುವ ಯುವಕರಿಗೆ ಹೇಳಿದರು.
ಕಳೆದ 5 ವರ್ಷಗಳಲ್ಲಿ ನಾನೆಂದಿಗೂ ಕಾರ್ಯಕರ್ತನೆಂದು ಹೇಳಿಕೊಂಡು ತಿರುಗಲಿಲ್ಲ. ಎಲ್ಲರನ್ನೂ ಭೇಟಿ ಮಾಡುತ್ತಿದ್ದೆ. ನನ್ನೊಳಗಿರುವ ಕಾರ್ಯಕರ್ತನನ್ನು ಸಾಯಲು ನಾನೆಂದಿಗೂ ಬಿಡುತ್ತಿರಲಿಲ್ಲ. ಪ್ರಧಾನಿಯಾಗಿ ನನ್ನ ಕರ್ತವ್ಯ, ಕೆಲಸಗಳ ಬಗ್ಗೆ ನನಗೆ ಅರಿವಿದೆ.
ಸಂಸದನಾಗಿಯೂ ಏನು ಮಾಡಬೇಕೆಂದು ಗೊತ್ತಿದೆ ಎಂದರು. ಪ್ರಧಾನಿ ರೋಡ್ ಶೋ ವೇಳೆ ಎನ್ ಡಿಎ ಸರ್ಕಾರದ ಹಲವು ಉನ್ನತ ಸಚಿವರುಗಳು ಹಾಜರಿದ್ದರು. ವಾರಣಾಸಿಯಲ್ಲಿ ಮೇ 19ರಂದು ಮತದಾನ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com