ಪ್ರಿಯಾಂಕಾ ಎದುರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಮಕ್ಕಳು; ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಒತ್ತಾಯ

ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ...
ಮಕ್ಕಳೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ
ಮಕ್ಕಳೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ
ಲಕ್ನೊ: ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ನಡೆಸುತ್ತಿದ್ದ ವೇಳೆ ಶಾಲಾ ಮಕ್ಕಳ ಗುಂಪೊಂದು ಎದುರಾಯಿತು. ಪ್ರಿಯಾಂಕಾ ಅವರನ್ನು ನೋಡಿದ್ದೇ ತಡ ಚೌಕಿದಾರ್ ಚೋರ್ ಹೈ ಎಂದು ಕೂಗುತ್ತಾ ಕೇಕೆ ಹಾಕಲಾರಂಭಿಸಿದರು.
ಪ್ರಿಯಾಂಕಾ ಗಾಂಧಿ ಆಶ್ಚರ್ಯದಿಂದ ಮಕ್ಕಳನ್ನು ನೋಡಿದಾಗ ಮಕ್ಕಳು ಪ್ರಧಾನ ಮಂತ್ರಿ ಗರ್ವಿ, ಅಹಂಕಾರಿ ಎಂದರು. ಆಗ ಪ್ರಿಯಾಂಕಾ ಅವರು ತಕ್ಷಣವೇ ಮಕ್ಕಳನ್ನು ತಡೆದು, ಇದು ಚೆನ್ನಾಗಿಲ್ಲ, ಒಳ್ಳೆಯ ಮಕ್ಕಳಾಗಿ ಒಳ್ಳೆಯದನ್ನು ಮಾತನಾಡಿ ಎಂದರು. ನಂತರ ಮಕ್ಕಳು ರಾಹುಲ್ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದು ಕೂಗಿದರು. ಆಗ ಖುಷಿಯಿಂದ ಪ್ರಿಯಾಂಕಾ ಮಕ್ಕಳ ತಲೆಸವರಿ ಮುಂದೆ ಹೋದರು.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಮಧ್ಯೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಮಕ್ಕಳು ಅವಹೇಳನಕಾರಿ ಹೇಳಿಕೆಗಳನ್ನು ಮತ್ತು ನಿಂದನಕಾರಿ ಶಬ್ದಗಳನ್ನು ಬಳಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ತಪ್ಪು, ಅಲ್ಲದೆ ಪಕ್ಷದ ಪೋಸ್ಟರ್ ಗಳು, ಭಿತ್ತಿಪತ್ರಗಳನ್ನು ಹಂಚಲು, ಘೋಷಣೆಗಳನ್ನು ಕೂಗಲು, ರ್ಯಾಲಿಗಳಲ್ಲಿ ಭಾಗವಹಿಸಲು ಮಕ್ಕಳನ್ನು ಬಳಸದಂತೆ ಆದೇಶ ಹೊರಡಿಸಬೇಕೆಂದು ಮಕ್ಕಳ ಹಕ್ಕುಗಳ ಆಯೋಗ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com