ನಮಗೆಲ್ಲರಿಗೂ ಇರುವ ಸಾಮಾನ್ಯ ಶತ್ರು ನರೇಂದ್ರ ಮೋದಿ ಮತ್ತು ಎನ್ ಡಿಎ:ವೀರಪ್ಪ ಮೊಯ್ಲಿ

ತೆಲಂಗಾಣ ಮುಖ್ಯಮಂತ್ರಿ ಟಿಆರ್ ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಪ್ರಾದೇಶಿಕ ಪಕ್ಷಗಳ ...
ಎಂ ವೀರಪ್ಪ ಮೊಯ್ಲಿ
ಎಂ ವೀರಪ್ಪ ಮೊಯ್ಲಿ
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಟಿಆರ್ ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಪ್ರಾದೇಶಿಕ ಪಕ್ಷಗಳ ಸಂಯುಕ್ತ ರಂಗ ರಚಿಸಲು ಪ್ರಯತ್ನಿಸುತ್ತಿರುವುದರಲ್ಲಿ ಯಾವ ತಪ್ಪೂ ಇಲ್ಲ, ಅವರ ನಡೆ ಬಿಜೆಪಿ ನೇತೃತ್ವದ ಎನ್ ಡಿಎಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಚಂದ್ರಶೇಖರ್ ರಾವ್ ಅವರನ್ನು ಬಿಜೆಪಿಯೇತರ, ಕಾಂಗ್ರೆಸ್ಸೇತರ ಸ್ಥಳೀಯ ಪಕ್ಷಗಳ ಮುಖಂಡನಾಗಿ ಮುಂದೆ ತಳ್ಳುವುದರಲ್ಲಿ ಯಾವುದೇ ತಪ್ಪು ಇಲ್ಲ. ಅದರರ್ಥ ಚಂದ್ರಶೇಖರ್ ರಾವ್ ಎನ್ ಡಿಎಗೆ ವಿರುದ್ಧವಾಗಿದ್ದಾರೆ ಎಂದು. ನಮಗೆ ಅಷ್ಟು ಧಾರಾಳ ಸಾಕು. ಶಿವಸೇನೆ, ರಾಮ್ ವಿಲಾಸ್ ಪಾಸ್ವಾನ್ ಅವರ ಪಕ್ಷ ಹಾಗೂ ಇನ್ನು ಕೆಲ ಬೆರಳೆಣಿಕೆಯ ಪಕ್ಷಗಳು ಬಿಟ್ಟರೆ ಎನ್ ಡಿಎ ಬೆಂಬಲಕ್ಕೆ ಯಾರೂ ಇಲ್ಲ ಎಂದು ಹೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸುಮಾರು 200 ಸೀಟುಗಳು ದೊರಕಲಿದ್ದು ವಿರೋಧ ಪಕ್ಷಗಳಲ್ಲಿ ಅತಿದೊಡ್ಡ ಗೆಲುವಿನ ಪಕ್ಷವಾಗಿ ಹೊರಹೊಮ್ಮಲಿದೆ ಎಂದರು.
ರಾಜ್ಯದಿಂದ ರಾಜ್ಯಕ್ಕೆ ಚುನಾವಣಾ ವಿಶ್ಲೇಷಣೆ ಮಾಡಿದಾಗ ಎನ್ ಡಿಎ ಸರ್ಕಾರ ಈ ಬಾರಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಸ್ಪಷ್ಟ ತೀರ್ಮಾನಕ್ಕೆ ಬರಬಹುದು. ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಸೇರಿ ಸರ್ಕಾರ ರಚಿಸಲಿದೆ ಎಂದು ಹೇಳಿದರು.
ವಿರೋಧ ಪಕ್ಷಗಳಲ್ಲಿ ಕಾಂಗ್ರೆಸ್ ಗೆ ಅತಿ ಹೆಚ್ಚಿನ ಸೀಟುಗಳು ಸಿಗಲಿದೆ. ಎಲ್ಲರಿಗೂ ಇರುವ ಸಾಮಾನ್ಯ ಶತ್ರು ನರೇಂದ್ರ ಮೋದಿಯವರು ಮತ್ತು ಎನ್ ಡಿಎ. ಹೀಗಾಗಿ ಯಾರೂ ಎನ್ ಡಿಎಗೆ ಸೇರಲು ಸಾಧ್ಯವಿಲ್ಲ. ಆಗ ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಖಂಡಿತಾ ಮೈತ್ರಿ ಸರ್ಕಾರವನ್ನು ರಚಿಸುತ್ತವೆ ಎಂದು ಭವಿಷ್ಯ ನುಡಿದರು.
ವಾರಣಾಸಿ ಕ್ಷೇತ್ರದಿಂದ ನರೇಂದ್ರ ಮೋದಿಯವರ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ನಿಲ್ಲದಿರುವ ತೀರ್ಮಾನ ತೆಗೆದುಕೊಂಡಿದ್ದು ಸರಿಯಾಗಿದೆ. ಅಲ್ಲಿ ಸ್ಪರ್ಧಿಸಿಯೇ ಅವರು ಆ ಕ್ಷೇತ್ರಕ್ಕೆ ಹತ್ತಿರವಾಗಬೇಕೆಂದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸದೆ ಕೂಡ ಆ ಕ್ಷೇತ್ರದಲ್ಲಿ ಪ್ರಿಯಾಂಕಾ ಅವರು ಕೆಲಸ ಮಾಡಬಹುದು ಎಂದರು.
ಇಂದು ಕಾಂಗ್ರೆಸ್ ಗೆ ಪ್ರಿಯಾಂಕಾ ಅವರ ಸೇವೆ ಲಭ್ಯವಾಗಿದೆ. ಪ್ರತಿಯೊಂದು ಕಡೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ, ಇದರಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ಮೊಯ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com