ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದೇ ಬಿಜೆಪಿ; ಸಿದ್ದರಾಮಯ್ಯ

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದೇ ಬಿಜೆಪಿ ಪಕ್ಷ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಭುಗಿಲೆದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇವಿಎಂ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದೇ ಬಿಜೆಪಿ ಪಕ್ಷ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಈಗಾಗಲೇ ಪ್ರತಿಪಕ್ಷಗಳು ಹೇಳಿರುವಂತೆ ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆ ಆಗಿರುವ ಸಾಧ್ಯತೆ ಇದೆ. ವಿದ್ಯುನ್ಮಾನ ಮತಯಂತ್ರ ದುರ್ಬಳಕೆ ಆಗುವುದು ಸಾಧ್ಯ. ಇದನ್ನು ನಾವು ಹೇಳುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಬಿಜೆಪಿಯೇ ಹೇಳಿದ್ದು, ಅದರ ಸಂಸದರೇ ಈ ಬಗ್ಗೆ ಪುಸ್ತಕ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಇವಿಎಂ ದುರ್ಬಳಕೆ ಆಗಿರುವ ಸಾಧ್ಯತೆ ಇದೆ. ಎಲ್ಲಾ ಸಮೀಕ್ಷೆ ಗಳು ಹೇಗೆ ಏಕ ಪ್ರಕಾರ ಆಗಲು ಸಾಧ್ಯವಿಲ್ಲ. ನಾನೇ 24 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೆ. ಅಲ್ಲಿನ ಜನರ ಅಭಿಪ್ರಾಯ ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ಫಲಿತಾಂಶದಲ್ಲಿ ವ್ಯತ್ಯಾಸವಾಗುವ ಶಂಕೆ ಇದೆ.  ಜನರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ನಮ್ಮ ಆಂತರಿಕ ವರದಿ ಹೇಳುತ್ತದೆ. ಹಾಗಿರುವಾಗ  ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಕೇವಲ ನಾಲ್ಕೈದು ಸ್ಥಾನ ಬರುತ್ತದೆ ಎಂದರೆ ಹೇಗೆ ನಂಬಲು ಸಾಧ್ಯ? ಬಹುತೇಕ ಎಲ್ಲಾ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಮಹಾ ಚುನಾವಣೆಯಲ್ಲಿ ಮಾತ್ರ ಗೆಲ್ಲಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಅಧಿಕಾರದ ದಾಹದಿಂದ ಬೇಗ್ ಹೇಳಿಕೆ, ವಿಶ್ವನಾಥ್ ನಮ್ಮ ಪಕ್ಷದವರಲ್ಲ, ಅವರ ಹೇಳಿಕೆ ಪ್ರತಿಕ್ರಿಯಿಸಲ್ಲ
ಇದೇ ವೇಳೆ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಹಿರಿಯ ಶಾಸಕ ರೋಷನ್ ಬೇಗ್ ಕುರಿತಂತೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಅಧಿಕಾರದ ದಾಹದಿಂದ ಕಾಂಗ್ರೆಸ್‌ ಶಾಸಕ ರೋಷನ್ ಬೇಗ್‌ ಈ ರೀತಿಯ ಹೇಳಿಕೆ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಅಧಿಕಾರದ ದಾಹ ಇರುತ್ತದೆ. ರೋಷನ್ ಬೇಗ್ ಮಂತ್ರಿಗಿರಿಗೂ ಆಸೆ ಪಟ್ಟಿದ್ದರು. ಜತೆಗೆ ಲೋಕಸಭಾ ಟಿಕೆಟ್ ಕೂಡ ಸಿಗಲಿಲ್ಲ. ಇದರಿಂದ ಹತಾಶರಾಗಿ ಆ ರೀತಿ ಮಾತನಾಡಿದ್ದಾರೆ.  ಅದಕ್ಕೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದರು. 
ಅಂತೆಯೇ ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ವಿಶ್ವನಾಥ್ ಟೀಕೆಗಳ ಕುರಿತಂತೆ ಮಾತನಾಡಿದ ಸಿದ್ದರಾಮಯ್ಯ ಅವರು, ವಿಶ್ವನಾಥ್ ನಮ್ಮ ಪಕ್ಷದವರಲ್ಲ. ಅವರು ನೀಡುವ ಹೇಳಿಕೆಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com