2 ಸ್ಥಾನದಲ್ಲಿದ್ದ ಬಿಜೆಪಿ 2ನೇ ಬಾರಿಗೆ ಆಯ್ಕೆಯಾಗಿದೆ, ಅಂದಿನ ಸಂಸ್ಕಾರವೇ ಮುಂದೆಯೂ ಇರಲಿದೆ: ಪ್ರಧಾನಿ ಮೋದಿ

ಕೇವಲ ಎರಡೇ ಎರಡು ಸ್ಥಾನದೊಂದಿಗೆ ಆರಂಭಿಸಿದ್ದ ಬಿಜೆಪಿ ಇಂದು 2ನೇ ಬಾರಿಗೆ ಆಯ್ಕೆಯಾಗಿದೆ. ಅಂದಿದ್ದ ಸಂಸ್ಕಾರ ಮುಂದೆಯೂ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ
ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ
ನವದೆಹಲಿ: ಕೇವಲ ಎರಡೇ ಎರಡು ಸ್ಥಾನದೊಂದಿಗೆ ಆರಂಭಿಸಿದ್ದ ಬಿಜೆಪಿ ಇಂದು 2ನೇ ಬಾರಿಗೆ ಆಯ್ಕೆಯಾಗಿದೆ. ಅಂದಿದ್ದ ಸಂಸ್ಕಾರ ಮುಂದೆಯೂ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, 'ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಈ ಹಬ್ಬ ಮಾದರಿಯಾಗಿದೆ. ಇದನ್ನು ಯಶಸ್ವಿ ಮಾಡಿದ ಜನತಾ ಜನಾರ್ದನರಿಗೆ ನಮೋ ನಮಃ. ಇಲ್ಲಿ ಯಾರಾದರೂ ಗೆದ್ದಿದ್ದಾರೆ ಅಂದು ಜನತಾ ಜನಾರ್ದನರ ವಿಜಯ, ಇದು ಲೋಕತಂತ್ರದ ಜಯ ಎಂದು ಹೇಳಿದರು.
'ಬಿಜೆಪಿಯ ನಿಜಕ್ಕೂ ಅದೃಷ್ಟ ಎಂದರೆ ನಮ್ಮಲ್ಲಿರುವ ಕೋಟಿ ಕೋಟಿ ಕಾರ್ಯಕರ್ತರ ಮನದಲ್ಲಿರುವುದು ಕೇವಲ ಭಾರತ ಮಾತೆ, ಭಾರತ ಮಾತೆ. ಇದು ಮೆಚ್ಚುಗೆ ವಿಷಯ.  ಕೆಲವು ದಶಕಗಳ ಹಿಂದೆ ನಮ್ಮ ಪಕ್ಷ ಕೇವಲ ಎರಡು ಸ್ಥಾನ ಹೊಂದಿತ್ತು. ಆದರೆ ಈಗ ಎರಡನೇ ಬಾರಿಗೆ ನಾವು ಅಧಿಕಾರಕ್ಕೆ ಬಂದಿದ್ದೇವೆ. ಎರಡು ಸ್ಥಾನ ಇದ್ದಾಗ ನಾವು ನಿರಾಶರಾಗಿರಲಿಲ್ಲ. ಈಗ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದರೂ ನಮ್ಮ ಆಶಯ, ನಮ್ರತೆ, ವಿನಯತೆ, ಧೋರಣೆ, ಸಿದ್ಧಾಂತಗಳನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಅಂದು ಯಾವ ಸಂಸ್ಕಾರ ಇತ್ತೋ ಅದೇ ಸಂಸ್ಕಾರ ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಹೇಳಿದರು.
ಬಿಜೆಪಿ ಮೇಲೆ ನಂಬಿಕೆ ಇಟ್ಟ ಭಾರತದ 130 ಕೋಟಿ ಜನರಿಗೆ ಶಿರ ಬಾಗಿ ನಮಿಸುತ್ತೇನೆ. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ಅತಿ ದೊಡ್ಡ ಹಬ್ಬವಾಗಿದೆ. ಇಡೀ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಅದು 35 ರಿಂದ 40ರಷ್ಟು ಡಿಗ್ರಿ ಸೆಲ್ಷಿಯಸ್‌ ನಷ್ಟು ತಾಪಮಾನ ಇದ್ದರೂ ಸ್ವಯಂ ಪ್ರೇರಿತರಾಗಿ ಪ್ರಜೆಗಳು ಬಂದು ಮತದಾನ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ.  ಇಂದಿನ ಲೋಕಸಭಾ ಚುನಾವಣೆ ಫಲಿತಾಂಶವು ನವ ಭಾರತದ ನಿರ್ಮಾಣಕ್ಕೆ ನೀಡಿದ ಜನಾದೇಶವಾಗಿದೆ. ಅತ್ಯಧಿಕ ಮತದಾನ ಈ ಬಾರಿ ಆಗಿದೆ. ಇದು ಇಡೀ ವಿಶ್ವಕ್ಕೆ ದೊಡ್ಡ ಸಂಗತಿಯಾಗಿದೆ. ಇದರಿಂದ ಇಡೀ ವಿಶ್ವಕ್ಕೆ ಭಾರತದ ಪ್ರಜಾಪ್ರಭುತ್ವದ ತಾಕತ್ತು ಏನೆಂಬುದು ಅರ್ಥವಾಗಿದೆ ಎಂದು ಮೋದಿ ಹೇಳಿದರು.
ಮಹಾಭಾರತದ ಕಥೆ ಪ್ರಸ್ತಾಪಿಸಿದ ಮೋದಿ
ಇದೇ ವೇಳೆ ಮಹಾಭಾರತದ ಕಥೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮಹಾಭಾರತದ ಯುದ್ಧ ಮುಗಿದಾಗ ಶ್ರೀಕೃಷ್ಣನನ್ನು ಕುರುಕ್ಷೇತ್ರ ಯುದ್ಧದಲ್ಲಿ ನೀನು ಯಾರ ಪರ ನಿಂತೆ ಅಂತಾ ಕೇಳಲಾಯಿತು. ಆಗ ಉತ್ತರ ನೀಡಿದ ಶ್ರೀಕೃಷ್ಣ ಪರಮಾತ್ಮನು, ನಾನು ಯಾರ ಪರವೂ ನಿಂತಿರಲಿಲ್ಲ. ಕೇವಲ ಹಸ್ತಿನಾಪುರದ ಕ್ಷೇಮೋಭ್ಯುದಯಕ್ಕಾಗಿ ಕೆಲಸ ಮಾಡಿದೆ. ಹಸ್ತಿನಾಪುರದ ಜನತೆ ಪರವಾಗಿ ಕೆಲಸ ಮಾಡಿದ್ದಾಗಿ ಹೇಳಿದ್ದ. ಅದೇ ರೀತಿ ಇಂದು ಶ್ರೀಕೃಷ್ಣನ ರೂಪದಲ್ಲಿರುವ 125 ಕೋಟಿ ಭಾರತೀಯರು, ತಾವು ಯಾವುದೇ ಪಕ್ಷದ ಪರವೂ ನಿಲ್ಲದೇ ಕೇವಲ ಹಿಂದೂಸ್ತಾನದ ಪರವಾಗಿ ನಿಂತಿದ್ದಾಗಿ ಇಂದು ಹೇಳಿದ್ದಾರೆ. ಹೀಗಾಗಿ, ದೇಶದ ಮತದಾರರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು. 
ಇದಕ್ಕೂ ಮೊದಲು, ಹೊಸದಿಲ್ಲಿಯ ಲೋಕ ಕಲ್ಯಾಣ್‌ ಮಾರ್ಗದಲ್ಲಿರುವ ಬಿಜೆಪಿ ಮುಖ್ಯ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು.  ಬಿಜೆಪಿ ಮುಖ್ಯ ಕಚೇರಿ ಬಳಿ ಸಾವಿರಾರು ಕಾರ್ಯಕರ್ತರು ಸೇರಿದ್ದು, ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಸುಷ್ಮಾ ಸ್ವರಾಜ್​, ಜೆಪಿ ನಡ್ಡಾ, ಥಾವರ್​ ಚಂದ್​​ ಗೆಹ್ಲೋತ್​​, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಸೇರಿದಂತೆ ಪಕ್ಷದ ವರಿಷ್ಠ ನಾಯಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com