ಪಾದಯಾತ್ರೆ to ವಿಧಾನಸಭೆ; ತಂದೆ ಹಾದಿಯಲ್ಲೇ ಸಾಗಿದ ಜಗನ್ ಗೆ ಗದ್ದುಗೆ, ದಶಕದ ಹೋರಾಟಕ್ಕೆ ಕೊನೆಗೂ ಜಯ!

ವಿಭಜಿತ ಆಂಧ್ರ ಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾ ರೂಢ ತೆಲುಗು ದೇಶಂ ಪಕ್ಷವನ್ನು ಮಣ್ಣು ಮುಕ್ಕಿಸಿರುವ ವೈಎಸ್ ಆರ್ ಸಿಪಿ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಕೊನೆಗೂ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಮರಾವತಿ: ವಿಭಜಿತ ಆಂಧ್ರ ಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತಾ ರೂಢ ತೆಲುಗು ದೇಶಂ ಪಕ್ಷವನ್ನು ಮಣ್ಣು ಮುಕ್ಕಿಸಿರುವ ವೈಎಸ್ ಆರ್ ಸಿಪಿ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಕೊನೆಗೂ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
175 ಸದಸ್ಯ ಬಲದ ಆಂಧ್ರಪ್ರದೇಶದಲ್ಲಿ 149 ಕ್ಷೇತ್ರಗಳಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಕೇವಲ 25 ಕ್ಷೇತ್ರಗಳಿಗೆ ಕೃಪ್ತಿ ಪಟ್ಟುಕೊಂಡಿದ್ದು, ಇದೇ ಮೊದಲ ಬಾರಿಗೆ ವೈಎಸ್ಆರ್ ಸಿಪಿ ಸರ್ಕಾರ ರಚನೆ ಮಾಡಲಿದೆ. ಆಂಧ್ರ ಪ್ರದೇಶದಲ್ಲಿ ಸರ್ಕಾರ ರಚನೆಗಾಗಿ 88 ಕ್ಷೇತ್ರಗಳ ಅಗತ್ಯತೆ ಇದ್ದು, ಈಗಾಗಲೇ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ ಅನ್ನೂ ದಾಟಿದೆ. ಹೀಗಾಗಿ ಆಂಧ್ರ ಪ್ರದೇಶದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವ ಸರ್ಕಾರ ರಚನೆಯಾಗಲಿದೆ. ಇದೇ ಮೇ 30ರಂದು ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 
ತಂದೆ ಹಾದಿಯಲ್ಲೇ ಸಾಗಿದ ಜಗನ್ ಗೆ ಗದ್ದುಗೆ, ದಶಕದ ಹೋರಾಟಕ್ಕೆ ಕೊನೆಗೂ ಜಯ!
ಇನ್ನು ಪ್ರಸ್ತುತ ಆಂಧ್ರ ಪ್ರದೇಶ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರುವ ಜಗನ್ ಮೋಹನ್ ರೆಡ್ಡಿ ಈ ಸಾಧನೆಗಾಗಿ ಸವೆಸಿದ ಹಾದಿ ಸುಲಭವಾಗಿರಲಿಲ್ಲ. ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿಯಾಗಿದ್ದ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರನಾದರೂ ಜಗನ್ ರಾಜಕೀಯ ಜೀವನ ಕಲ್ಲು-ಮುಳ್ಳಿನಿಂದಲೇ ಕೂಡಿತ್ತು, ಅವರ ಯಶಸ್ಸು ನಿಜಕ್ಕೂ ಕಠಿಣವಾಗಿತ್ತು. 2009ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಇಳಿದಿದ್ದ ಜಗನ್ ಮೊದಲ ಪ್ರಯತ್ನದಲ್ಲೇ ಕಡಪ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಅಂದು ಜಗನ್ ಕಾಂಗ್ರೆಸ್ ಪಕ್ಷದ ಮೂಲಕ ಸಂಸತ್ತಿಗೆ ಆಯ್ಕೆಯಾಗಿದ್ದರು. ಅಂದು ಅವರ ತಂದೆ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಆದರೆ ಜಗನ್ ಲೋಕಸಭೆಗೆ ಆಯ್ಕೆಯಾದ ಕೆಲವೇ ತಿಂಗಳು ಅಂತರದಲ್ಲಿ ಅವರ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಧಾರುಣ ಸಾವನ್ನಪ್ಪಿದ್ದರು. ಇದು ಜಗನ್ ಪಾಲಿಗೆ ನಿಜಕ್ಕೂ ಅರಗಿಸಿಕೊಳ್ಳಲಾಗದ ಆಘಾತವಾಗಿತ್ತು. ಅಂದು ವೈಎಸ್ ರಾಜಶೇಖರ ರೆಡ್ಡಿ ಅಕಾಲಿಕ ಸಾವಿನ ಬೆನ್ನಲ್ಲೇ ಆಂಧ್ರ ಪ್ರದೇಶ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಸಂಘರ್ಷ ಏರ್ಪಟ್ಟಿತ್ತು. ರಾಜಶೇಖರ ರೆಡ್ಡಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಿಎಂ ಗಾದಿಗೆ ಜಗನ್ ರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದರೆ, ಅತ್ತ ಕಾಂಗ್ರೆಸ್ ನ ಹಿರಿಯ ಮುಖಂಡರ ಗುಂಪೊಂದು ದೆಹಲಿಯಲ್ಲಿ ಲಾಭಿ ಮಾಡಿ ಅವರ ಮುಖ್ಯಮಂತ್ರಿ ಗಾದಿಗೆ ಅಡ್ಡಿಯಾಗಿದ್ದರು. ರಾಜಶೇಖರ್ ರೆಡ್ಡಿ ಸಾವಿನಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಹಂಗಾಮಿ ಮುಖ್ಯಮಂತ್ರಿಯಾಗಿ ಪಕ್ಷದ ಹಿರಿಯ ನಾಯಕ ರೋಸಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು. 
ಕಾಂಗ್ರೆಸ್ ಪಕ್ಷದ ಈ ನಡೆಯನ್ನು ಅರಿತ ಜಗನ್ ಅಂದು 'ಓದಾರ್ಪು ಯಾತ್ರೆ'ಯ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ತಮ್ಮ ಶಕ್ತಿ ಪದರ್ಶನಕ್ಕೆ ಮುಂದಾಗಿದ್ದರು. ಜಗನ್ ನಡೆ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ತೀವ್ರ ಮುಜುಗರನ್ನುಂಟು ಮಾಡಿತ್ತು. ಇದು ಜಗನ್ ಮತ್ತು ಕಾಂಗ್ರೆಸ್ ನಡುವಿನ ಅಂತರ ಹೆಚ್ಚಾಗುವಂತೆ ಮಾಡಿತ್ತು. ಸಾಕಷ್ಟು ಸಂಧಾನ ಮತ್ತು ಎಚ್ಚರಿಕೆಯ ಹೊರತಾಗಿಯೂ ಜಗನ್ ತಮ್ಮ ಯಾತ್ರೆ ನಿರ್ಧಾರ ಕೈ ಬಿಡದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ನಿರ್ಧಾರಕ್ಕೆ ಬಂತು. ಆದರೆ ಅದಕ್ಕಿಂತ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ ಜಗನ್, 2010 ನವೆಂಬರ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದರು.
ಬಳಿಕ ತಮ್ಮ ಓದಾರ್ಪು ಯಾತ್ರೆಯನ್ನು ಅದ್ಧೂರಿಯಾಗಿ ನಡೆಸಿದ ಜಗನ್, ಅದೇ ಹುಮ್ಮಸ್ಸಿನಲ್ಲೇ ಜಗನ್ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ 2011ರ ಮಾರ್ಚ್ ನಲ್ಲಿ ವೈಎಸ್ ಆರ್ ಸಿ ಪಿ (ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷ) ಸ್ಥಾಪನೆ ಮಾಡಿದರು. ಇದು ಮತ್ತೊಂದು ಅರ್ಥದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಕಾಂಗ್ರೆಸ್ ಪಕ್ಷ ಎಂದೂ ಅಭಿಮಾನಿಗಳು ಕರೆಯತೊಡಗಿದರು. ಜಗನ್ ರಾಜಿನಾಮೆಯಿಂದ ತೆರವಾಗ ಕಡಪ ಲೋಕಸಭೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಗನ್ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ದಾಖಲೆಯ ಸುಮಾರು 5 ಲಕ್ಷ ಮತಗಳ ಅಂತರದಿಂದ ಜಯಭೇರಿ ಭಾರಿಸಿದರು.
ಜಯದ ಸಂಭ್ರಮದ ಬೆನ್ನಲ್ಲೇ ಜಗನ್ ಅವಿಭಜಿತ ಆಂಧ್ರ ಪ್ರದೇಶದ ಪ್ರಭಾವಿ ನಾಯಕರಾಗುವ ಮುನ್ಸೂಚನೆ ನೀಡಿದ್ದರು. ಆದರೆ ಆ ಬಳಿಕ ಜಗನ್ ಅಕ್ಷರಶಃ ರಾಜಕೀಯ ಎದುರಾಳಿಗಳು ಹೆಣೆದ ಬಲೆಗೆ ಸಿಲುಕಿದರು. ಅಕ್ರಮ ಆಸ್ಥಿ ಗಳಿಕೆ ಸಂಬಂಧ ಟಿಡಿಪಿ ಸಲ್ಲಿಕೆ ಮಾಡಿದ್ದ ದೂರನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಜಗನ್ ಬಂಧನಕ್ಕೆ ಆದೇಶ ನೀಡಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ಈ ವಿಚಾರಣೆ ಜಗನ್ ವರ್ಷಗಟ್ಟಲೆ ಜೈಲಿನಲ್ಲೇ ಉಳಿಯುನಂತೆ ಮಾಡಿತ್ತು. 2012ರ ಮೇ ತಿಂಗಳಲ್ಲಿ ಸಿಬಿಐನಿಂದ ಬಂಧನಕ್ಕೀಡಾದ ಜಗನ್ ಬರೊಬ್ಬರಿ 16 ತಿಂಗಳ ಬಳಿಕ ಬಿಡುಗಡೆಯಾಗಿದ್ದರು.
ಜಗನ್ ಬಿಡುಗಡೆ ಹೊತ್ತಿಗೆ ಆಂಧ್ರ ಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟ ತಾರಕಕ್ಕೇರಿತ್ತು. ಈ ಹೊತ್ತಿನಲ್ಲಿ ತಮ್ಮ ತಂದೆ ರಾಜಶೇಖರ ರೆಡ್ಡಿ ಅವರ ಹೊಂದಿದ್ದ ನಿಲುವನ್ನೇ ಹಿಂಬಾಲಿಸಿದ ಜಗನ್ ಆಂಧ್ರ ಪ್ರದೇಶ ವಿಭಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಆದರೆ ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆ ಮಾಡಿತ್ತು. ಆ ಬಳಿಕ 2014ರಲ್ಲಿ ನಡೆದ ವಿಭಜಿತ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮುಂದೆ ಮಂಡಿಯೂರಿತ್ತು. 
ಅಂದಿನ ಚುನಾವಣೆಯಲ್ಲಿ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಟಿಡಿಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಅಂದು ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಟಿಡಿಪಿಗೆ ಪವನ್ ಕಲ್ಯಾಣ್ ಕೂಡ ಭರ್ಜರಿ ಪ್ರಚಾರ ನಡೆಸಿದ್ದರು. ಪರಿಣಾಮ ಭರ್ಜರಿ ಗೆಲುವಿನೊಂದಿಗೆ ಟಿಡಿಪಿ ಅಧಿಕಾರದ ಗದ್ದುಗೆಗೆ ಏರಿತ್ತು. 
ಜಗನ್ ಅದೃಷ್ಟ ಬದಲಿಸಿದ ಪ್ರಶಾಂತ್ ಕಿಶೋರ್, 2017ರಿಂದಲೇ ಚುನಾವಣಾ ರಣತಂತ್ರ ಶುರು
2014ರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಕೆಲಕಾಲ ಶಾಂತರಾಗಿದ್ದ ಜಗನ್, 2014ರಲ್ಲಿ ಮೋದಿ ಮತ್ತು ಬಿಜೆಪಿ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ರನ್ನು 2017ರಲ್ಲಿ ವಿಭಜಿತ ಆಂಧ್ರ ಪ್ರದೇಶಕ್ಕೆ ಕರೆತಂದರು. ಪ್ರಶಾಂತ್ ಕಿಶೋರ್ ಬಂದದ್ದೇ ಆಂಧ್ರ ಪ್ರದೇಶದಲ್ಲಿ ಜಗನ್ ನಸೀಬು ಬದಲಾಗಿತ್ತು. 2017ರಿಂದಲೇ 2019ರ ವಿಧಾನಸಭೆ ಚುನಾವಣೆಗೆ ರಣತಂತ್ರ ಹೆಣೆಯಲು ಆರಂಭಿಸಿದ ಜಗನ್, ಅವರ ತಂದೆಯಂತೆಯೇ ಆಂಧ್ರ ಪ್ರದೇಶದಾದ್ಯಂತ ಪಾದಯಾತ್ರೆ ನಡೆಸಿದರು. ಬರೊಬ್ಬರಿ 3,641 ಕಿ.ಮೀ ಪಾದಯಾತ್ರೆ ನಡೆಸಿದ ಜಗನ್ ಆಂಧ್ರ ಪ್ರದೇಶದ ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ವಾಸಿಗಳ ಕಷ್ಟ ಸುಖ ಆಲಿಸಿದರು. 14 ತಿಂಗಳ ಸುಧೀರ್ಘ ಪಾದಯಾತ್ರೆಯಲ್ಲಿ ಜಗನ್ ಸುಮಾರು 2 ಕೋಟಿ ಜನರನ್ನು ಭೇಟಿ ಮಾಡಿದ್ದರು. ಇದು ವೈಎಸ್ ಆರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ಜಗನ್ ಗೆ ನೆರವಾಯಿಚತು. ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಷ್ಟು ಮಾತ್ರವಲ್ಲದೇ ಬೆಳೆಯುತ್ತಿರುವ ಜಗನ್ ಜನಪ್ರಿಯತೆ ಕಂಡ ಟಿಡಿಪಿ ನಾಯಕರೇ ವೈಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರಶಾಂತ್ ಕಿಶೋರ್ ರೂಪಿಸಿದ್ದ ಚುನಾವಣಾ ರಣತಂತ್ರದ ಅನ್ವಯ ಕೆಲಸ ಮಾಡಿದ್ದ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು, ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದರು. ಇದೇ ಹೊತ್ತಿನಲ್ಲಿ ಜಗನ್ ತಂದ ನವರತ್ನ ಯೋಜನೆ ಮತದಾರರ ಗಮನ ಸೆಳೆಯಿತು. ತಮ್ಮ ಪ್ರಣಾಳಿಕೆಯಲ್ಲಿ ಒಂಭತ್ತು ಪ್ರಮುಖ ವಿಚಾರಗಳ ಕುರಿತು ಪ್ರಸ್ತಾಪ ಮಾಡಿದ್ದ ಜಗನ್, ಆರೋಗ್ಯ, ಶಿಕ್ಷಣ, ರೈತರ ಸಮಸ್ಯೆಗಳು, ಮಹಿಳಾ ಪರ ಯೋಜನೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತಂತೆ ತಮ್ಮ ಯೋಜನೆಗಳನ್ನು ರೂಪಿಸಿದ್ದರು. ಇದೇ ವೇಳೆ ಚುನಾವಣೆಗಾಗಿಯೇ ರಚಿಸಲಾದ ರಾವಾಲಿ ಜಗನ್(ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಅಭಿಯಾನದ ಹಾಡು ನಿಜಕ್ಕೂ ವೈರಲ್ ಆಗಿತ್ತು, ಯೂಟ್ಯೂಬ್ ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿ ವೀಕ್ಷಕರ ಸೆಳೆದಿತ್ತು. 
ಇದೇ ಹಾಡಿನ ಮೂಲಕ ವೈಎಸ್ ಆರ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಸೋಷಿಯಲ್ ಮಿಡಿಯಾದಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ಇದರ ಜೊತೆಯಲ್ಲೇ ನಿನ್ನು ನಮ್ಮಮ್ ಬಾಬು (ನಿನ್ನನು ನಂಬಲ್ಲ ಬಾಬು), ಬೈಬೈ ಬಾಬು ಎಂಬ ಚಂದ್ರಬಾಬು ನಾಯ್ಡು ವಿರುದ್ಧ ಸ್ಲೋಗನ್ ಗಳು ಆಂಧ್ರ ಪ್ರದೇಶದಲ್ಲಿ ವೈರಲ್ ಆಗಿತ್ತು. ಈ ಎಲ್ಲ ಅಂಶಗಳೂ ಜಗನ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸುವಂತೆ ಮಾಡಿದೆ. ಆ ಮೂಲಕ ಜಗನ್ ತಮ್ಮ ದಶಕದ ಹೋರಾಟದ ಬಳಿಕ ಮೊದಲ ಬಾರಿಗೆ ಸಿಎಂ ಗಾದಿಗೇರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com