ಆಂಧ್ರಪ್ರದೇಶ: ಚಂದ್ರಬಾಬು ನಾಯ್ಡುಗೆ ದೇವರ ಶಿಕ್ಷೆ - ಜಗನ್ ರೆಡ್ಡಿ

ತೆಲುಗು ದೇಶಂ ಮುಖ್ಯಸ್ಥ ಎನ್ . ಚಂದ್ರಬಾಬು ನಾಯ್ಡು ಅವರ ತಪ್ಪುಗಳಿಗೆ ದೇವರೆ ಶಿಕ್ಷೆ ಕೊಟ್ಟಿದ್ದಾನೆ ಎಂದು ಆಂಧ್ರಪ್ರದೇಶ ಮುಂದಿನ ಮುಖ್ಯಮಂತ್ರಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ

ಅಮರಾವತಿ: ತೆಲುಗು ದೇಶಂ ಮುಖ್ಯಸ್ಥ ಎನ್ . ಚಂದ್ರಬಾಬು ನಾಯ್ಡು ಅವರ ತಪ್ಪುಗಳಿಗೆ ದೇವರೆ ಶಿಕ್ಷೆ ಕೊಟ್ಟಿದ್ದಾನೆ ಎಂದು ಆಂಧ್ರಪ್ರದೇಶ ಮುಂದಿನ ಮುಖ್ಯಮಂತ್ರಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ನೂತನ ಚುನಾಯಿತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಜಗನ್ ರೆಡ್ಡಿ, ಅನ್ಯಾಯಯುತ, ಅನೈತಿಕವಾಗಿ ರಾಜಕೀಯ ಮಾಡುತ್ತಿದ್ದವರಿಗೆ ದೇವರೆ ಶಿಕ್ಷೆ ನೀಡಿರುವುದು  ಆಂಧ್ರಪ್ರದೇಶ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದರು.

2014ರ ಚುನಾವಣೆ ಸಂದರ್ಭದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ 23 ಶಾಸಕರನ್ನು ಚಂದ್ರಬಾಬು ನಾಯ್ಡು ಖರೀದಿಸಿದ್ದರು. ಆದರೆ, ಈಗ ಟಿಡಿಪಿ ಕೇವಲ 23 ಸ್ಥಾನಗಳನ್ನು ಪಡೆದುಕೊಂಡಿದೆ. ಅದು ಮೇ 23 ರಂದೇ ಫಲಿತಾಂಶ ಬಂದಿದೆ. 23ರಲ್ಲಿ ದೇವರು ಸುಂದರ ಲೇಖನ ಬರೆದಿದ್ದಾನೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮೂವರು ಸಂಸದರನ್ನು ಕೂಡಾ ಅಕ್ರಮವಾಗಿ ಚಂದ್ರಬಾಬು ನಾಯ್ಡು ತನ್ನ ಪಕ್ಷಕ್ಕೆ ಸೆಳೆದುಕೊಂಡಿದ್ದರು. ಈಗ ಅವರ ಪಕ್ಷ ಕೇವಲ 3 ಸ್ಥಾನಗಳನ್ನು ಹೊಂದುವಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಆಂಧ್ರ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವೈಎಸ್ ಆರ್ ಸಿ ಕಾಂಗ್ರೆಸ್ ಪಕ್ಷ 151 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ತೆಲುಗು ದೇಶಂ ಪಾರ್ಟಿ ಕೇವಲ 23 ಸ್ಥಾನಗಳನ್ನು ಪಡೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ 22 ಸ್ಥಾನ ಪಡೆದಿದ್ದರೆ, ಟಿಡಿಪಿ ಕೇವಲ ಮೂರಕ್ಕೆ ತೃಪ್ತಿಪಟ್ಟುಕೊಂಡಿದೆ.

ಮತ ಹಂಚಿಕೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಶೇ, 50 ರಷ್ಟು ಮತಗಳನ್ನು ಪಡೆದಿದ್ದು, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದ್ದು, ಉತ್ತಮ ಆಡಳಿತ ನೀಡುವುದಾಗಿ ಜಗನ್ ಮೋಹನ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com