ನಾನು ಕೂಡ ಹಿಂದೂ, ಹಿಂದೂ ರಾಷ್ಟ್ರ ನಿರ್ಮಾಣದ ಪರೀಕ್ಷೆಯಾಗಲಿ: ದೇವೇಗೌಡ

ಇಡೀ ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಬೇಕು ಎಂಬುದು ಮೋದಿ ಅವರ ಕಲ್ಪನೆಯಾಗಿದ್ದು, ಬಿಜೆಪಿಯವರು ಮಾತ್ರ ಹಿಂದೂಗಳು ಎಂದು ಬಿಂಬಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.

Published: 02nd April 2019 12:00 PM  |   Last Updated: 02nd April 2019 02:43 AM   |  A+A-


HD Devegowda

ಹೆಚ್ ಡಿ ದೇವೇಗೌಡ

Posted By : ABN ABN
Source : UNI
ಹಾಸನ: ಮೊಮ್ಮಗ, ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಸನದಲ್ಲಿಂದು  ಪ್ರಚಾರ ಮಾಡಿದರು. ಬೇಲೂರು, ಸಕಲೇಶಪುರ ತಾಲೂಕುಗಳಲ್ಲಿ ಮೊಮ್ಮಗನ ಪರ ದೇವೇಗೌಡರು ಬಿರುಸಿನ ಪ್ರಚಾರ ನಡೆಸಿದರು.ಇದಕ್ಕೂ ಮುನ್ನ  ಕುಲ ದೇವತೆ  ಪಾರ್ವತಿಯ ದರ್ಶನ ಪಡೆದರು.

ಬಳಿಕ ಚನ್ನರಾಯಪಟ್ಟಣ ತಾಲೂಕಿನ ಯಲಿಯೂರಿನಲ್ಲಿ ಮಾತನಾಡಿದ ಅವರು, ಇಡೀ ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಬೇಕು ಎಂಬುದು ಮೋದಿ ಅವರ  ಕಲ್ಪನೆಯಾಗಿದ್ದು,ಬಿಜೆಪಿಯವರು ಮಾತ್ರ ಹಿಂದೂಗಳು ಎಂದು  ಬಿಂಬಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. 2019 ರ ಲೋಕಸಭಾ ಚುನಾವಣೆಯಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ಪರೀಕ್ಷೆಯಾಗಲಿ ಎಂದು ಸವಾಲು  ಹಾಕಿದರು.

ತಾವೂ ಸಹ ಹಿಂದೂ. ಮುಸ್ಲಿಂ, ಕ್ರಿಶ್ಚಿಯನ್ ಅಲ್ಲ. ಹಿಂದೂ ಆಗಿರುವ ತಾವು ಎಂದಿಗೂ  ಏಕ ಧರ್ಮದ ಪರ ಮಾತನಾಡದೇ  ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ  ಕೆಲಸ ಮಾಡಿದ್ದೇನೆ. ದೇಶದಲ್ಲಿ ಎಲ್ಲಾ ಧರ್ಮೀಯರು ಅನೋನ್ಯವಾಗಿ ಬಾಳಲು ಸಾಧ್ಯವಾಗುವಂತಹ  ಏಕ ರೂಪದ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು.

ಬಿಜೆಪಿ ಎಂದಿಗೂ  ದೇಶಕ್ಕಾಗಿ ಹೋರಾಟ ಮಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ  ಗಾಂಧೀಜಿ. ನೌಕಾಲಿಯಲ್ಲಿ ನಡೆದ ಕೋಮುಗಲಭೆ ಸಂದರ್ಭದಲ್ಲಿ ಮುಸ್ಲಿಮರ ಹತ್ಯೆಯಾದಾಗಲೂ ಸಹ  ಗಾಂಧೀಜಿಯವರು ಮುಸ್ಲಿಮರ ಪರ ಹೋರಾಟ ಮಾಡಿದ್ದಾರೆ. ದೇಶದಲ್ಲಿ ಅಂಬೇಡ್ಕರ್ ಅವರು  ಬರೆದುಕೊಟ್ಟ ಸಂವಿಧಾನ ಇದೆ. ಈ ಸಂವಿಧಾನವನ್ನು ದೇಶದ 130 ಕೋಟಿ ಜನರೂ ಸಹ   ಒಪ್ಪುತ್ತಾರೆ. ಆದರೆ ಬಿಜೆಪಿ ನಾಯಕರು ಸಂವಿಧಾನವನ್ನೇ ಬದಲಿಸುವ ಕೆಲಸ  ಮಾಡುತ್ತಿದ್ದಾರೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರಜ್ವಲ್‍ಗೆ ಬಿಟ್ಟುಕೊಟ್ಟು, ತಾವು ತುಮಕೂರಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಬೇರೆಯದ್ದೇ ಕಾರಣವಿದೆ. ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ಮತ್ತೊಮ್ಮ ಮೊಮ್ಮಗ ನಿಖಿಲ್ ಕಣಕ್ಕಿಳಿದಿದ್ದಾರೆ ಎಂದು ತಿಳಿಸಿದರು.

ಮೈತ್ರಿ ಸರ್ಕಾರದ ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಹೆಚ್ಚೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೇ ತಮ್ಮ ಗುರಿ. ಹೀಗಾಗಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ದೇವರಲ್ಲಿ ತಾವು ಪೂಜೆ ಸಲ್ಲಿಸಿದ್ದು, ರಾಜ್ಯಾದ್ಯಂತ ಪ್ರಚಾರ ಕೈಗೊಳ್ಳುವುದಾಗಿ ದೇವೇಗೌಡರು ಸ್ಪಷ್ಟಪಡಿಸಿದರು.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp