ನಿಖಿಲ್ ಸೋಲಿಸಿ ಮುಖ್ಯಮಂತ್ರಿಗೆ ಮುಖಭಂಗ ಮಾಡಲು ಕೆಲವರು ಷಡ್ಯಂತ್ರ: ದೇವೇಗೌಡ

ನಿಖಿಲ್ ಅವರನ್ನು ಸೋಲಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮುಖಭಂಗ ಮಾಡಲು ಕೆಲವರು ಮುಂದಾಗಿದ್ದಾರೆ. ಪಕ್ಷದ ಕಾರ್ಯಕರ್ತರು,....
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
ಮಂಡ್ಯ: ನಿಖಿಲ್ ಅವರನ್ನು ಸೋಲಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮುಖಭಂಗ ಮಾಡಲು ಕೆಲವರು ಮುಂದಾಗಿದ್ದಾರೆ. ಪಕ್ಷದ ಕಾರ್ಯಕರ್ತರು, ಯುವಕರು, ಬೆಂಬಲಿಗರು ಪಣತೊಟ್ಟು ಎಲ್ಲರೂ ಸೇರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ. ಈ ಕಂದನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್ ಡಿ ದೇವೇಗೌಡ ಕಣ್ಣೀರು ಹಾಕಿದ್ದಾರೆ.
ಜಿಲ್ಲೆಯ ಮೇಲುಕೋಟೆಯಲ್ಲಿ ಮೊಮ್ಮಗ ನಿಖಿಲ್​ ಪರ ಚುನಾವಣಾ ಪ್ರಚಾರ ನಡೆಸಿದ ಬಳಿಕ  ಕೆ.ಆರ್​. ಪೇಟೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ನಿಖಿಲ್​ ರನ್ನು ತಾವಾಗಲೀ, ಮುಖ್ಯಮಂತ್ರಿ ಕುಮಾರಸ್ವಾಮಿಯಾಗಲೀ ಗೆಲ್ಲಿಸಲು ಸಾಧ್ಯವಿಲ್ಲ. ಪುಣ್ಯಾತ್ಮರು ನೀವೇ ತೀರ್ಮಾನ ಮಾಡಿ ಎಂದು ಕಣ್ಣೀರು ಸುರಿಸುತ್ತ ಮತದಾರರಲ್ಲಿ ಮನವಿ ಮಾಡಿಕೊಂಡರು. 
ದೇವೇಗೌಡರ ಕುಟುಂಬದ ಬಗ್ಗೆ ಯಾರೂ ವೈಯಕ್ತಿಕ ಟೀಕೆ ಮಾಡಬೇಡಿ. ಮಾಧ್ಯಮಗಳಲ್ಲಿ ನಿಖಿಲ್​ ಬಗ್ಗೆ ಕೆಟ್ಟದಾಗಿ ವರದಿಗಳು ಪ್ರಸಾರವಾಗುತ್ತಿವೆ. ನಿಖಿಲ್​ ಕಥೆ ಮುಗಿಯಿತು. ಕುಮಾರಸ್ವಾಮಿಗೆ ಹಾಗೂ ದೇವೇಗೌಡರಿಗೆ ಮುಖಭಂಗ ಆಯಿತು ಎಂದೆಲ್ಲ ಬಿಂಬಿಸುತ್ತಿದ್ದಾರೆ. ಇಂತಹ ವರದಿಗಳಿಂದ ತಮ್ಮ ಮನಸಿಗೆ ಘಾಸಿಯಾಗಿದೆ. ಎಲ್ಲ  ಸಮುದಾಯದವರಿಗೂ ಅಧಿಕಾರ ಕೊಟ್ಟಿದ್ದೇವೆ. ವೀರೇಂದ್ರ ಪಾಟೀಲ್ ವಿರುದ್ಧ ರಾಜ್​ಕುಮಾರ್ ​ಅವರನ್ನು ಸ್ಪರ್ಧಿಸುವಂತೆ ಮನವೊಲಿಸುವ ಯತ್ನ ನಡೆಸಿದೆ. ಆದರೆ ರಾಜ್ ಕುಮಾರ್ ಅವರು ಒಪ್ಪಲಿಲ್ಲ. ರಾಜಕೀಯಕ್ಕೆ  ಬರುವುದಿಲ್ಲ ಎಂದು ಕೈಮುಗಿದಿದ್ದರು ಎಂದು ಹಳೆಯ ರಾಜಕೀಯ ಘಟನೆಗಳನ್ನು ನೆನೆಪಿಸಿಕೊಂಡರು.
ನಾನು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಮಂಡ್ಯದಲ್ಲಿ ರಾಜಕೀಯ ಹೋರಾಟ ನಡೆಯುತ್ತಿರುವುದನ್ನು ನೋಡಿ ಮನಸಿಗೆ ತುಂಬ ನೋವಾಗಿದೆ. ರಾಜಕೀಯ ಜೀವನದಲ್ಲಿ ತುಂಬ ನೋವು ಉಂಡಿದ್ದೇನೆ. ತಮ್ಮ ಮಗ ಕದ್ದು ಹೋಗಿ ಮುಖ್ಯಮಂತ್ರಿಯಾದರು ಎಂದು  ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಹೇಳುತ್ತಾರೆ. ಆದರೆ ತಮ್ಮ ಮಗ ಅಂತವನಲ್ಲ , ಅಂಥ ಮಗನಿಗೆ ಜನ್ಮನೀಡಿಲ್ಲ. ದೈವದ ಮೇಲೆ ನಂಬಿಕೆ ಇಟ್ಟು ಪಕ್ಷ ಬೆಳೆಸಿದ್ದೇನೆ. ಈ ಪಕ್ಷ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮಂಡ್ಯದಲ್ಲಿ ಪರಿಸ್ಥಿತಿ ಕೈಮೀರಿದೆ ಆದರೂ ಅದು ಜನರ ಕೈಲೇ ಇದೆ. ಮಂಡ್ಯದ ಜನರು ದೇವೇಗೌಡರ ಕೊಡುಗೆಯನ್ನು ಮರೆತು ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದ ಅವರು, ಯುವಕರು ತಪ್ಪು ತಿಳಿದುಕೊಳ್ಳಬೇಡಿ ಸಿನಿಮಾ ನಟರಿಗೆ ಆಕರ್ಷಿಸು ಶಕ್ತಿ ಇದೆ. ಹಾಗೆಂದು ಸುಮಲತಾ ಅಂಬರೀಶ್ ಪರ ನಟ ಯಶ್ , ದರ್ಶನ್ ನಡೆಸುತ್ತಿರುವ ಪ್ರಚಾರಕ್ಕೆ ಮರುಳಾಗಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಬೇಡಿ ಎಂದು ಗೋಗರೆದರು .   
ದೇಶದಲ್ಲಿ ಎಲ್ಲಿ ನೋಡಿದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಎಂದು ಹೇಳುತ್ತಾರೆ. ಭಾರತಾಂಬೆಯ ಮಡಿಲಲ್ಲಿ ನಿಮ್ಮನ್ನು ಹೆದರಿಸುವ ವ್ಯಕ್ತಿಗಳು ಹುಟ್ಟಿದ್ದಾರೆ. ಏನು ಆರ್ಭಟ ಅವರದ್ದು, ನಾನೂ 5 ದಶಗಳ ಕಾಲ ಚುನಾವಣೆ ನೋಡಿದ್ದೇನೆ. ಎಂತಹವರೋ ಬಂದು ಹೋಗಿದ್ದಾರೆ ಎಂದರು. ಮೋದಿ ರೈತರಿಗೆ ವಾರ್ಷಿಕ 6  ಸಾವಿರ ರೂ.ನೇರ ನಗದು ವರ್ಗಾವಣೆ ಮಾಡುತ್ತೇನೆ ಎಂದಿದ್ದಾರೆ. ಚುನಾವಣೆ ಮುಗಿದ ಮೇಲೆ ಹಣ ಎಲ್ಲಿಗೆ ತಲುಪುತ್ತದೆ. ಯಾರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂಬುದನ್ನು ನೋಡಣ ಎಂದರು.
ಇಡೀ ದೇಶದ ರಾಜಕೀಯ ಚಿತ್ರಣವನ್ನು ತಾವು ಆತ್ಮಚರಿತ್ರೆಯಲ್ಲಿ ವಿವರಿಸುವುದಾಗಿ ಪುನರುಚ್ಚರಿಸಿದ ಗೌಡರು, ಅತ್ಮ ಚರಿತ್ರೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಈಗ ಬಿಡುಗಡೆ ಮಾಡಿದರೆ ಚುನಾವಣೆಗಾಗಿ ಮಾಡಿಸಿದ್ದಾರೆ ಎಂಬ ಆರೋಪ ಬರುತ್ತಿತ್ತು. ಹೀಗಾಗಿ ಬಿಡುಗಡೆ ಮಾಡಿಲ್ಲ. ದೇವೇಗೌಡರದ್ದು ಕುಟುಂಬ ರಾಜಕಾರಣ ಎನ್ನುತ್ತಾರೆ. ಈ ಬಗ್ಗೆ ಯರು ಬೇಕಾದರೂ ಬಹಿರಂಗ ಚರ್ಚೆಗೆ ಬರಲಿ. ಅವರನ್ನು ಎದುರಿಸುವ ಶಕ್ತಿ ತಮಗಿದೆ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com