ಸ್ಟಾರ್ ನಟರ ಪ್ರಚಾರ ಲೆಕ್ಕಕ್ಕೆ ಬರುವುದಿಲ್ಲ, ಅಭಿವೃದ್ಧಿಯೊಂದೇ ಗೆಲುವಿನ ಮಂತ್ರ: ನಿಖಿಲ್ ಕುಮಾರಸ್ವಾಮಿ

ಸ್ಟಾರ್ ಗಳ ಪ್ರಚಾರ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುವುದಲ್ಲ, ಕ್ಷೇತ್ರದಲ್ಲಿ ಮಾಡುವ ಅಭಿವೃದ್ಧಿ ...
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
ಮೈಸೂರು: ಸ್ಟಾರ್ ಗಳ ಪ್ರಚಾರ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುವುದಲ್ಲ, ಕ್ಷೇತ್ರದಲ್ಲಿ ಮಾಡುವ ಅಭಿವೃದ್ಧಿ ಕೆಲಸಗಳ ಅಜೆಂಡಾ ಯಾವ ಅಭ್ಯರ್ಥಿಯನ್ನು ಆರಿಸಿ ಕಳುಹಿಸಬೇಕು ಎನ್ನುವುದನ್ನು ನಿರ್ಧರಿಸುವಂತಹದ್ದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಹೇಳುತ್ತಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಅದಕ್ಕೆ ಮುಖ್ಯ ಕಾರಣ ನಿಖಿಲ್ ಕುಮಾರಸ್ವಾಮಿಗೆ ಎದುರಾಳಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಕಣಕ್ಕಿಳಿದಿರುವುದು ಮತ್ತು ಅವರಿಗೆ ಸ್ಟಾರ್ ಪ್ರಚಾರಕರಾಗಿ ನಟರಾದ ದರ್ಶನ್ ಮತ್ತು ಯಶ್ ಅಖಾಡಕ್ಕಿಳಿದಿರುವುದು. ಸ್ವತಃ ಚಿತ್ರನಟನಾಗಿರುವ ನಿಖಿಲ್ ಕುಮಾರಸ್ವಾಮಿ ಪರ ಯಾವ ಚಲನಚಿತ್ರ ನಟರೂ ಕೂಡ ಪ್ರಚಾರಕ್ಕೆ ಬಂದಿಲ್ಲ.
ಈ ಬಗ್ಗೆ ಮೈಸೂರಿನಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಜೊತೆ ನಮ್ಮ ಕುಟುಂಬ ಸುದೀರ್ಘ ಸಂಬಂಧ ಹೊಂದಿದೆ. ತಾವು ಗೆದ್ದು ಬಂದರೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುವುದು ಖಂಡಿತ ಎಂಬ ಭರವಸೆ ಕೊಟ್ಟರು.
ಚಲನಚಿತ್ರ ನಟರನ್ನು ನೋಡಲು ಸಾಮಾನ್ಯವಾಗಿ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅವರೆಲ್ಲರೂ ಅಭ್ಯರ್ಥಿಯ ಪರ ಮತ ಹಾಕುತ್ತಾರೆ ಎಂದೇನಿಲ್ಲ. ಕರ್ನಾಟಕದಲ್ಲಿ ಸಿನಿಮಾ ನಟರು ಯಶಸ್ವಿ ರಾಜಕಾರಣಿಗಳಾದ ಉದಾಹರಣೆಗಳು ಇಲ್ಲ. ರಾಜ್ ಕುಮಾರ್ ಅವರಲ್ಲಿ ಆ ಗುಣಗಳಿದ್ದವು, ಆದರೆ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ, ಬರಲೂ ಇಲ್ಲ. ಸುಮಲತಾ ಪರ ಪ್ರಚಾರ ನಡೆಸುತ್ತಿರುವ ಸಿನಿಮಾ ನಟರು ಆಡಿದ ಮಾತುಗಳನ್ನು ದೊಡ್ಡದು ಮಾಡಿ ಕೋಲಾಹಲ ಎಬ್ಬಿಸಿದ್ದು ಮಾಧ್ಯಮಗಳು, ಅವುಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿಲ್ಲ ಎಂದು ಆರೋಪಿಸಿದರು.
ಅಭ್ಯರ್ಥಿ ಎಂಬುದನ್ನು ಪಕ್ಕಕ್ಕಿಟ್ಟು ಒಬ್ಬ ಹೊರಗಿನ ಸಾಮಾನ್ಯ ವ್ಯಕ್ತಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪ್ರಚಾರ, ಅಬ್ಬರವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ ಎಂದಾಗ, ನಮ್ಮ ಕುಟುಂಬ ದಶಕಗಳಿಂದ ಮಂಡ್ಯ ಜಿಲ್ಲೆಯ ಜೊತೆ ಅವಿನಾಭಾವ ಸಂಬಂಧ ಇರಿಸಿಕೊಂಡು ಬಂದಿದೆ. ನಾನು ಇಲ್ಲಿಗೆ ಹೊರಗಿನವನಲ್ಲ. ನನ್ನ ಕುಟುಂಬದ ಮೂಲ ಹಾಸನವಾದರೆ ಮಂಡ್ಯ ಜಿಲ್ಲೆಯ ಜನತೆಯ ಪ್ರೀತಿ ನಾವು ಗಳಿಸಿದ್ದೇವೆ. ನನ್ನ ತಂದೆ-ತಾಯಿ ಹಾಸನದಿಂದ ಹೊರಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಕೆಲಸದ ಮೇಲಿನ ಶ್ರದ್ಧೆಯೇ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ, ಮತದಾರರು ಯೋಚಿಸಿ ಮತ ಹಾಕುತ್ತಾರೆ ಎಂದರು.
ತಮ್ಮ ಪ್ರಚಾರವನ್ನು ತಡೆಯಲು ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ ಎಂದು ಕೂಡ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಸುಮಲತಾ ಬಗ್ಗೆ ಜೆಡಿಎಸ್ ನಾಯಕರು ವೈಯಕ್ತಿಕವಾಗಿ ಟೀಕಿಸುವುದನ್ನು ಅವರು ಒಪ್ಪಲಿಲ್ಲ. ಸುಮಲತಾ ಸೇರಿದಂತೆ ಯಾರೇ ವಿರುದ್ಧವಾದರೂ ಕೂಡ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಮತದಾನ, ಚುನಾವಣಾ ಪ್ರಕ್ರಿಯೆ ಗೌರವಯುತವಾಗಿ ನಡೆಯಬೇಕೆಂಬುದು ನನ್ನ ಅಭಿಪ್ರಾಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com