ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲು ಬಿಡುವುದಿಲ್ಲ: ದೇವೇಗೌಡ

ತಮಗೂ ರಾಜಕಾರಣ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ಕೊನೆ ಹಂತದಲ್ಲಿ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು, ನರೇಂದ್ರ ಮೋದಿ ಮತ್ತೊಮ್ಮೆ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
ತುಮಕೂರು: ತಮಗೂ ರಾಜಕಾರಣ ಹೇಗೆ ಮಾಡಬೇಕು ಎನ್ನುವುದು ಗೊತ್ತಿದೆ. ಕೊನೆ ಹಂತದಲ್ಲಿ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಬಿಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ, ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ಇಂದು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿರುವುದನ್ನು ಸಹಿಸದವರು ಈ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಗೆಲ್ಲಿಸುವುದಿಲ್ಲ ಎಂದು ಹೇಳುತ್ತಾರೆ. ಚಿಕ್ಕಮಗಳೂರಿನಲ್ಲಿ ಒಕ್ಕಲಿಗ ಅಭ್ಯರ್ಥಿಯನ್ನು ಗೆಲ್ಲಿಸಲಿಲ್ಲವೇ? ಎಂದು ಶೋಭಾ ಕರಂದ್ಲಾಜೆ ಅವರ ಹೆಸರನ್ನು ಪ್ರಸ್ತಾಪಿಸದ ದೇವೇಗೌಡರು,  ರಾಜಕಾರಣ ಜೊತೆಗೆ ತಮಗೆ ಕೈಕಾಲು ಆಡಿಸಿ ಮಾತನಾಡುವುದಕ್ಕೂ ಬರುತ್ತದೆ ಎಂದು  ಸೂಚ್ಯವಾಗಿ  ಹೇಳಿದರು.
ದೇವೇಗೌಡ ಎಂದರೇನು? ನನ್ನ ಶಕ್ತಿ ಏನು ಎನ್ನುವುದನ್ನು ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ತೋರಿಸುತ್ತೇನೆ. ತುಮಕೂರಿನ ಯಾವುದೇ ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳುತ್ತೇನೆ. ಹೀಗಾಗಿ ಮತದಾರರು ತಮ್ಮನ್ನು ಬೆಂಬಲಿಸುವಂತೆ ಶಿರಬಾಗಿ ನಮಿಸುತ್ತೇನೆ ಎಂದರು.
ತುಮಕೂರು ಕ್ಷೇತ್ರದಲ್ಲಿ ದೇವೇಗೌಡರ ಪರ ಪ್ರಚಾರ ನಡೆಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ದೇವಗೌಡರು ಈ ಬಾರಿ ಚುನಾವಣೆಗೆ ಸ್ಪರ್ಧಿಸಬಾರದೆಂಬ ಅಭಿಪ್ರಾಯಕ್ಕೆ ಬಂದಿದ್ದರಾದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಅವರ ಒತ್ತಾಯದ ಮೇರೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 60 ವರ್ಷಗಳ ಕಾಲ ಸುಧೀರ್ಘ ರಾಜಕಾರಣ ಮಾಡಿರುವ ಅವರು ಗ್ರಾಮ, ತಾಲೂಕು  ಅಭಿವೃದ್ಧಿ ಮಂಡಳಿಗಳಿಗೆ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ರಾಜ್ಯದ ನೆಲ, ಜಲದ ಬಗ್ಗೆ ಹೋರಾಟ ಮಾಡಿಕೊಂಡು ಬಂದಿರುವ ರಾಜಕಾರಣಿ ದೇವೇಗೌಡರು ಎಂದರು.
ದೇವೇಗೌಡರ ಸಚಿವ ಸಂಪುಟದಲ್ಲಿ ತಾವು ಸಚಿವರಾಗಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದು ಸಾವಿರ ಕೋಟಿ ರೂ. ಖರ್ಚು ಮಾಡಬೇಕು ಎಂದು ದೇವೇಗೌಡರು ಹೋರಾಟ ಮಾಡಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಬಾಕಿ ಉಳಿದಿದ್ದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಹಣ ಬರಲು ಸಾಧ್ಯವಾಯಿತು. ರಾಜ್ಯದ ನೀರಾವರಿ ಯೋಜನೆಗಳಿಗೆ ಅನುದಾನ ಬರುತ್ತಿಲ್ಲ. ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರೂ ನೋಟ್ ಪ್ರಿಂಟ್ ಮಷಿನ್ ಇಲ್ಲ ಎಂದು ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದಾರೆ.  ನೀರಾವರಿಗಾಗಿ ಹೋರಾಟ ಮಾಡಿದ ದೇವೇಗೌಡರಿಗೆ ಮತ ಹಾಕಬೇಕೋ, ಮೋದಿಗೆ ಮತ ಹಾಕಬೇಕೋ ಎಂಬುದನ್ನು ಮತದಾರರು ಯೋಚನೆ ಮಾಡಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು ನರೇಂದ್ರ ಮೋದಿ ಅವರ ಮುಖ ನೋಡಿ ಮತ ಹಾಕಿ ಎನ್ನುತ್ತಾರೆ. ಮೋದಿ ಅವರ ಮುಖ ನೋಡಿ ಮತಹಾಕುವುದಾದರೆ ಇವರು ಯಾಕೆ ಸ್ಪರ್ಧಿಸಬೇಕಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜನಸಾಮಾನ್ಯರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಸುಳ್ಳು ಭರವಸೆ ನೀಡಿದ್ದ  ಮೋದಿಯನ್ನು ಸುಳ್ಳುಗಾರ ಎಂದರೆ ಕೋಪ ಏಕೆ? ಉದ್ಯೋಗ ಕೊಡಿ ಎಂದು ಕೇಳುವ ನಿರುದ್ಯೋಗಿಗಳಿಗೆ ಬೋಂಡಾ ಪಕೋಡಾ ಮಾರಲಿಕ್ಕೆ ಹೋಗಿ ಎಂದು ಪ್ರಧಾನಿ ಹುದ್ದೆಯಲ್ಲಿರುವ ಮೋದಿ ಹೇಳುವುದು ಸರಿಯೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ದೇಶದ ಯುವಕರು ನರೇಂದ್ರ ಮೋದಿ ಅವರ ಹಿಂದೆ ಹೋಗಬೇಡಿ ಎಂದು ಮನವಿ ಮಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಹೀಗಿದ್ದರೂ ಸಹ ಕಾಂಗ್ರೆಸ್ ಎಂದಿಗೂ ಯುದ್ಧವನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಸೈನಿಕರ ಹೆಸರಿನಲ್ಲಿ ಮತಯಾಚಿಸಿಲ್ಲ. ಬಿಜೆಪಿಯವರದ್ದು ಡೋಂಗಿ ದೇಶಭಕ್ತಿ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಹುಟ್ಟದೇ ಇರುವ ಮೋದಿಯಿಂದ ದೇಶಭಕ್ತಿಯ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿ ಪಕ್ಷದಲ್ಲಿ ದೇಶಕ್ಕಾಗಿ  ಬಲಿದಾನ ಮಾಡಿದ ಒಬ್ಬ ವ್ಯಕ್ತಿಯೂ ಇಲ್ಲ. ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಹೀಗಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಗೆಲ್ಲಿಸಬಾರದು ಎಂದು ಮತದಾರರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.
ಕೋಮುವಾದಿ ಪಕ್ಷ ಬಿಜೆಪಿಯನ್ನು ತೊಲಗಿಸುವ ಉದ್ದೇಶಕ್ಕಾಗಿ ತಾವು ಹಾಗೂ ದೇವೇಗೌಡರು ಜಂಟಿ ಪ್ರಚಾರ ಕೈಗೊಂಡಿದ್ದು, ಮಂಡ್ಯ, ಮೈಸೂರಿನಲ್ಲಿಯೂ ಒಗ್ಗಟ್ಟಾಗಿ ಪ್ರಚಾರ ಮಾಡುವುದಾಗಿ ಹೇಳಿದರು.
ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಮೆದುಳು ಹಾಗೂ ಬಾಯಿಯ ಮಧ್ಯ ಇರುವ ಕೊಂಡಿ ಕಳಚಿದ್ದು ಬಹಳವರ್ಷಗಳೇ ಕಳೆದಿವೆ,  ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿ  ಪಕ್ಷದಲ್ಲಿ ಒಬ್ಬ ಹಿಂದುಳಿದ  ಅಭ್ಯರ್ಥಿಗೂ ಟಿಕೆಟ್ ಕೊಡಿಸಲು ಸಾಧ್ಯವಾಗದ ಈಶ್ವರಪ್ಪ ಬಿಜೆಪಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಲಿ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ, ಆರೆಸ್ಸಿಸಿಗರು, ಎಬಿವಿಪಿ ಹುಡುಗರು ಮೋದಿ ಮೋದಿ ಎನ್ನುತ್ತಾರೆ. ಮುಂದೆ ದೇಶದಲ್ಲಿ ಯಾರು ಪ್ರಧಾನಿಯಾಗುತ್ತಾರೆ ಎಂಬುದು ತಮಗೆ ಗೊತ್ತಿಲ್ಲ. ದೇವೇಗೌಡ ಅವರನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಕಣಕ್ಕಿಳಿಸಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com