ಈಶ್ವರಪ್ಪ ಮೂರು ತಿಂಗಳು ಮಠದಲ್ಲಿರಲಿ: ಸಿಎಂ ಇಬ್ರಾಹಿಂ ಸಲಹೆ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಭರಾಟೆ ಮುಂದುವರೆದಿರುವಂತೆಯೇ ನಾಯಕರ ನಡುವಿನ ವಾಕ್ಸಮರ ಕೂಡ ತಾರಕಕ್ಕೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಾಗಲಕೋಟೆ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಭರಾಟೆ ಮುಂದುವರೆದಿರುವಂತೆಯೇ ನಾಯಕರ ನಡುವಿನ ವಾಕ್ಸಮರ ಕೂಡ ತಾರಕಕ್ಕೇರಿದೆ.
ಈ ನಡುವೆ ಸಿ.ಎಂ.ಇಬ್ರಾಹಿಂ ಓರ್ವ ತಲೆಹಿಡುಕ ಎಂಬ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ, 'ನಾವು ತಲೆ ಹಿಡಿಯುವವರಲ್ಲ, ಪಾದ ಹಿಡಿಯುವವರು. ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ. ಚುನಾವಣೆ ವೇಳೆಯಲ್ಲಿ ಇದೆಲ್ಲಾ ಸಹಜ. ಬಳಿಕ ಅವರೂ ಸರಿಯಾಗುತ್ತಾರೆ. ಅಲ್ಲಿಯ ತನಕ ಕೆ.ಎಸ್.ಈಶ್ವರಪ್ಪ ಅವರು ಮೂರು ತಿಂಗಳು ಯಾವುದಾದರೊಂದು ಮಠ ಸೇರಿಕೊಳ್ಳುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಇಬ್ರಾಹಿಂ ಅವರು,  'ತಾವು ಒಂದು ರೀತಿಯ ಮಠ ಇಲ್ಲದ ಸ್ವಾಮೀಜಿ ಇದ್ದ ಹಾಗೆ. ಈಶ್ವರಪ್ಪನವರ ಭಾಷೆ ಸಂಸ್ಕೃತಿ ಹೇಗಿದೆ ಎಂಬುದು ಅವರ ಹೇಳಿಕೆಯಿಂದ ತಿಳಿಯುತ್ತದೆ. ಅವರು ನಮ್ಮ ಸ್ನೇಹಿತರೇ. ಚುನಾವಣೆ ಮುಗಿಯುವವರೆಗೂ ಇಂತವೆಲ್ಲ ನಡೆಯುತ್ತವೆ. ಆಮೇಲೆ ಎಲ್ಲ ಸರಿಯಾಗುತ್ತವೆ. ಹೀಗಾಗಿ ಈಶ್ವರಪ್ಪ ಮೂರು ತಿಂಗಳು ಯಾವುದಾದರೊಂದು ಮಠದಲ್ಲಿ ಕಾಲ ಕಳೆಯುವುದು ಉತ್ತಮ, ಅವರೂ ಉತ್ತಮ ಭಾಷೆ ಬಳಸುವಂತಾಗಲಿದೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಹೆಸರು ಪ್ರಸ್ತಾಪ ಮಾಡಿದರೋ ಅಂದೇ ನಮ್ಮ ಮೈತ್ರಿ ಅಭ್ಯರ್ಥಿ  ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಪಕ್ಕಾ ಆಗಿದೆ ಎಂದು ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು
ಕಾಂಗ್ರೆಸ್-ಜೆಡಿಎಸ್ ನಾಯಕರ ಹಾಗೂ ಬೆಂಬಲಿಗರು, ಆಪ್ತರ ಮನೆಯ ಮೇಲೆ ಆದಾಯ ತೆರಿಗೆ ದಾಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ  ಮೋದಿ ಅವರಿಗೆ ನಾವು ಎಲ್ಲ ಕಡೆ ಗೆಲ್ಲುತ್ತೇವೆ ಎಂದು ವರದಿ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಆದಾಯ ತೆರಿಗೆ (ಐಟಿ) ದಾಳಿ ನಡೆಸಲು ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ  ಮನೆಯ ಮೇಲೂ ಐಟಿ ದಾಳಿ ಮಾಡಬೇಕಿತ್ತು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗ, ಮೈಸೂರಿನ ಸಮಾವೇಶ ನಡೆಸಿದರು.ಈ ಸಭೆಗೆ ಎಷ್ಟು ಕೋಟಿ ಖರ್ಚಾಯಿತು? ಆ ದುಡ್ಡು ಎಲ್ಲಿಂದ ಬಂತು? ಹಣ ಯಾರು ಕೊಟ್ಟರು ಎಂದು ಪ್ರಶ್ನಿಸಿದ ಅವರು, ಕೇವಲ ಕಾಂಗ್ರೆಸ್ಸಿಗರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಬೇಕಾ? ಅವರು ಕೆಟ್ಟ ಪರಂಪರೆ ಹುಟ್ಟು ಹಾಕುತ್ತಿದ್ದಾರೆ. ಸೋಲಿನ  ಭಯದಿಂದ ಹೀಗೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com