
ಎಚ್ ಡಿ ದೇವೇಗೌಡ
Source : UNI
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ದುರಹಂಕಾರದ ವ್ಯಕ್ತಿ. ನಾನು ರಾಜಕೀಯಕ್ಕೆ ಬಂದು 60 ವರ್ಷಗಳಾಗಿವೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಇನ್ನೂ 5 ವರ್ಷ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಆ ಮೂಲಕ ಗಂಗಾವತಿಯಲ್ಲಿ ಮಾಜಿ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ ಹಾಲಿ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಮಾತನಾಡಿದ ಅವರು, ಅಧಿಕಾರ ಪಡೆದ ಅಹಂನಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದು ಮೋದಿ ಹೇಳುತ್ತಿದ್ದಾರೆ. ನಾನು ಕೂಡ ಕಾಂಗ್ರೆಸ್ನಲ್ಲೆ ಇದ್ದವನು ನಿಜಲಿಂಗಪ್ಪ ಅವರು ತಮಗೆ ಟಿಕೆಟ್ ಕೊಡದಿದ್ದಕ್ಕೆ ಅಲ್ಲಿಂದ ಹೊರಬಂದೆ. ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಅನ್ನು ಸಂಪೂರ್ಣ ನಾಶ ಮಾಡುತ್ತೇನೆ ಎಂಬ ದುರಹಂಕಾರದ ಮಾತುಗಳನ್ನು ಕೇಳಿದ್ದೇನೆ. ಸಂಸತ್ನಲ್ಲಿ ನನಗೆ ಅವಕಾಶ ಕೊಟ್ಟಿರಲಿಲ್ಲ. ಆಗ ಸ್ಪೀಕರ್ ಬಳಿ ಹೋಗಿ ಒಂದು ಅವಕಾಶ ಕೊಡಿ ಮತ್ತೆ ನಾನು ಸಂಸತ್ಗೆ ಬರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದಿದ್ದೆ. ಅವತ್ತು ಹಾಗೇ ಹೇಳಿದ್ದವನು ಇವತ್ತು ಸಿದ್ದರಾಮಯ್ಯ ಜತೆಗೂಡಿ ಬರುವುದಕ್ಕೆ ಮೋದಿಯ ದುರಹಂಕಾರವೇ ಕಾರಣ ಎಂದರು.
ದುರಹಂಕಾರದ ಪ್ರಧಾನಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎಂದು ಹೊರಟಿದ್ದಾರೆ. ಹೀಗಾದರೆ ನಮ್ಮಂತ ಸಣ್ಣ ಸಣ್ಣ ಪಾರ್ಟಿ ಉಳಿಯಲು ಸಾಧ್ಯವೇ? ಹಾಗಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಎಲ್ಲರನ್ನೂ ಜತೆಗೂಡಿಸಿದ್ದಾರೆ. ಸಂಸತ್ನಲ್ಲಿ ಒಂದು ದಿನ ರೈತರ ಬಗ್ಗೆ ಮಾತನಾಡದ ಮೋದಿ, ಚುನಾವಣೆ ಸಂಧರ್ಭದಲ್ಲಿ 6 ಸಾವಿರ ರೂ. ಘೋಷಿಸಿದ್ದಾರೆ. ಆ ಹಣದಲ್ಲಿ ಏನು ಸಿಗುತ್ತದೆ ಎಂದು ಪ್ರಶ್ನಿಸಿದರು.
ಇಳಿ ವಯಸ್ಸಿನಲ್ಲಿ ಚುನಾವಣೆಗೆ ಹೋಗಬಾರದು ಎಂದುಕೊಂಡಿದ್ದೆ. ಆದರೆ ಮೋದಿ ಅವರ ದುರಹಂಕಾರದ ಮಾತು ಕೇಳಿ ತಮಗೆ ಪಾರ್ಲಿಮೆಂಟ್‌ನಲ್ಲಿ ಹೋರಾಡುವ ಶಕ್ತಿ ಇದೆ ನಡೆ ಹೋಗೋಣ ಎಂದು ಸಿದ್ದರಾಮಯ್ಯಗೆ ಹೇಳಿದೆ. ಕಳೆದ ಮೂರ್ನಾಲ್ಕು ದಿನದಿಂದ ನಾನು ಸಿದ್ದರಾಮಯ್ಯ ಎಲ್ಲಾ ಕಡೆ ಓಡಾಡುತ್ತಿದ್ದೇವೆ. ದೇಶಕ್ಕಾಗಿ ಸಣ್ಣ ಪುಟ್ಟ ವ್ಯತ್ಯಾಸವನ್ನು ಮರೆಯಬೇಕು. ಬಿಜೆಪಿಯವರು ಅಬ್ಬರದ ಪ್ರಚಾರ ಮಾಡಲಿ ನಮಗೇನು ತೊಂದರೆಯಿಲ್ಲ. ಮೋದಿ ಹೋದಲೆಲ್ಲಾ ಬರಿ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲೆಯ ಶಾಸಕರು ನಿಖಿಲ್ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಎಲ್ಲರಿಗೂ ಗೌರವ ಕೊಡುವ ವಿನಯ ಅವನಲ್ಲಿದೆ. ಆತ ಇನ್ನೂ ಯುವಕ, ನಿಖಿಲ್‌ರನ್ನ ಗೆಲ್ಲಿಸಿ ಎಂದು ಅವರು ಕರೆ ನೀಡಿದರು ದಿವಂಗತ ಅಂಬರೀಶ್ ರಾಮನಗರದಲ್ಲಿ ಸೋತಾಗ ಅವರನ್ನು ಸಂಸತ್ತಿಗೆ ಕಳುಹಿಸಿದ್ದು ನಾವು, ಅಂಬರೀಶ್ ಏನು ಕೆಲಸ ಮಾಡಿದರು ಎಂಬುದರ ಬಗ್ಗೆ ಚರ್ಚೆ ಬೇಡ ಎಂದು ದೇವೇಗೌಡ ಹೇಳಿದರು.
Stay up to date on all the latest ಕರ್ನಾಟಕ news with The Kannadaprabha App. Download now