ಹಾಸನ, ಮಂಡ್ಯದಲ್ಲಿ ಮತ್ತೆ ಐಟಿ ದಾಳಿ, ಜೆಡಿಎಸ್ ನಾಯಕರಿಗೆ ಬ್ಯಾಕ್ ಟು ಬ್ಯಾಕ್ ಶಾಕ್!

ಹಾಸನ ಮತ್ತು ಮಂಡ್ಯದಲ್ಲಿ ಇಂದು ಮತ್ತೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದು, ಸಚಿವ ರೇವಣ್ಣ ಅವರ ಸೋದರ ಸಂಬಂಧಿ ಮನೆ ಮೇಲೆ ಮಂಗಳವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಾಸನ: ಹಾಸನ ಮತ್ತು ಮಂಡ್ಯದಲ್ಲಿ ಇಂದು ಮತ್ತೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದು, ಸಚಿವ ರೇವಣ್ಣ ಅವರ ಸೋದರ ಸಂಬಂಧಿ ಮನೆ ಮೇಲೆ ಮಂಗಳವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. 
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಇದಕ್ಕೂ ಮೊದಲೇ ಐಟಿ ಇಲಾಖೆ ದೇವೇಗೌಡರ ಕುಟುಂಬಕ್ಕೆ ಶಾಕ್​ ನೀಡಿದೆ. ಪಾಪಣ್ಣಿ ರೇವಣ್ಣ ಸೋದರ ಸಂಬಂಧಿ. ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಪಾಪಣ್ಣಿ ವಾಸವಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮೂರು ಇನ್ನೋವಾ ಕಾರಿನಲ್ಲಿ ಬಂದ 15  ಜನರ ತಂಡ ನೇರವಾಗಿ ಪಾಪಣ್ಣಿ ಮನೆ ಪ್ರವೇಶಿಸಿದ್ದಾರೆ.  ಸದ್ಯ ಐಟಿ ಅಧಿಕಾರಿಗಳು ಪಾಪಣ್ಣಿ ಮನೆಯನ್ನು ಶೋಧ ಮಾಡುತ್ತಿದ್ದಾರೆ. ಈ ವೇಳೆ ಕೆಲ ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 
ಅಂತೆಯೇ ಸಚಿವ ರೇವಣ್ಣ ಅವರ ಮತ್ತೊಬ್ಬ ಆಪ್ತರಾದ ವಿದ್ಯಾನಗರದಲ್ಲಿರುವ ಕಾರ್ಲೆ ಇಂದ್ರೇಶ್ ಎಂಬುವರ ಮನೆಯಲ್ಲಿಯೂ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇಂದ್ರೇಶ್ ಗುತ್ತಿಗೆದಾರ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಸಚಿವ ಪುಟ್ಟರಾಜು ಆಪ್ತ ತಿಮ್ಮೇಶ್ ಎಂಬುವವರ ಪಾಂಡವಪುರ ನಿವಾಸ, ಸಾಮಿಲ್ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯದಲ್ಲಿ ಮತ್ತೆ ಐಟಿ ದಾಳಿ ಮುಂದುವರೆದಿದೆ. ಜೆಡಿಎಸ್ ಮುಖಂಡ, ಸಿಎಂ  ಕುಮಾರಸ್ವಾಮಿ ಹಾಗೂ  ಸಚಿವ ಡಿಸಿ ತಮ್ಮಣ್ಣ ಆಪ್ತ ಸಾದೊಳಲು ಸ್ವಾಮಿ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ವಾಮಿ ಜಿ.ಪಂ ಅಧ್ಯಕ್ಷೆ ನಾಗರತ್ನ ಎಂಬವರ ಪತಿಯಾಗಿದ್ದು, ಮೈಸೂರು ವಲಯದ ಜೆಡಿಎಸ್ ವೀಕ್ಷಕರಾಗಿದ್ದರು. ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಸಚಿವ ಪುಟ್ಟರಾಜು ಬೆಂಬಲಿಗನಿಗೂ ಐಟಿ ಶಾಕ್ ನೀಡಿದೆ. ಪಾಂಡವಪುರದ ಜಿ.ಪಂ ಸದಸ್ಯ, ಸಚಿವ ಪುಟ್ಟರಾಜು ಆಪ್ತ ತಿಮ್ಮೇಗೌಡರ ಮನೆ, ಕಚೇರಿ, ಪೆಟ್ರೋಲ್ ಬಂಕ್ ಹಾಗೂ ಸಾಮಿಲ್ ಮೇಲೆ ಏಕ ಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆಗೆ ಹಣ ಸಂಗ್ರಹ, ಮುಂದಾಳತ್ವ ಹಾಗೂ ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದ 8 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.
ದೇವೇಗೌಡರ ಕುಟುಂಬದ ಕುಡಿಗಳಾದ ನಿಖಿಲ್​ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹಾಗೂ ಪ್ರಜ್ವಲ್​ ರೇವಣ್ಣ ಹಾಸನದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ಪ್ರಚಾರಕ್ಕೆ ಭಾರೀ ಹಣ ಬಳಕೆ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಗಾಗಿ, ಗೌಡರ ಕುಟುಂಬದ ಆಪ್ತರ ಮನೆಗಳ ಮೇಲೆ ಸುಮಾರು ಒಂದು ತಿಂಗಳಿಂದ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ರೇವಣ್ಣ ಆಪ್ತ ಗುತ್ತಿಗೆದಾರರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್​ ಮಾಡಿತ್ತು. ಈ ವೇಳೆ ಸಾಕಷ್ಟು ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂದೂ ಊಹಿಸಲಾಗಿತ್ತು. ಆದರೆ, ಬಿಜೆಪಿ ಚುನಾವಣೆ ಗೆಲ್ಲುವ ಉದ್ದೇಶದಿಂದ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಜತೆಗೆ ಐಟಿ ದಾಳಿಯನ್ನು ಖಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ, ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸೇರಿದಂತೆ ಹಲವು ಕಾಂಗ್ರೆಸ್​ ಮತ್ತು ಜೆಡಿಎಸ್​ ಮುಖಂಡರು ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು. ಇತ್ತೀಚೆಗಷ್ಟೇ ಚುನಾವಣಾ ಆಯೋಗ ಕೂಡ ಆದಾಯ ತೆರಿಗೆ ಇಲಾಖೆಗೆ ನೊಟೀಸ್​ ಜಾರಿಗೊಳಿಸಿದ್ದು, ಯಾವುದೇ ದಾಳಿ ಮಾಡಿದರೂ ಅದರ ಮಾಹಿತಿಯನ್ನು ನೀಡುವಂತೆ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com