ಬರುವ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ 25 ಲಕ್ಷ ಕೋಟಿ ರೂ ಮೀಸಲು- ಪ್ರಧಾನಿ ಮೋದಿ

ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಿದ್ದು, ಕೃಷಿಕರ ಸರ್ವಾಂಗೀಣ ಅಭಿವೃದ್ಧಿಗೆ 25 ಲಕ್ಷ ಕೋಟಿ ರೂ ಮೀಸಲಿಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Published: 18th April 2019 12:00 PM  |   Last Updated: 18th April 2019 08:32 AM   |  A+A-


PM Narendra Modi

ಪ್ರಧಾನಿ ನರೇಂದ್ರ ಮೋದಿ

Posted By : ABN ABN
Source : UNI
ಚಿಕ್ಕೋಡಿ: ಮುಂದಿನ ಐದು ವರ್ಷಗಳಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಿದ್ದು, ಕೃಷಿಕರ ಸರ್ವಾಂಗೀಣ ಅಭಿವೃದ್ಧಿಗೆ 25 ಲಕ್ಷ ಕೋಟಿ ರೂ ಮೀಸಲಿಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬರುವ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಗತ್ಯ ಸಂಪನ್ಮೂಲ ನಿಗದಿಪಡಿಸಲಾಗುವುದು ಎಂದರು.

ಕಳೆದ ಐದು ವರ್ಷಗಳಲ್ಲಿ ದೇಶದ ಇಂಧನ ವಲಯ ಸುಧಾರಣೆಗೆ ಆದ್ಯತೆ ನೀಡಿದ್ದು, ಮುಂದಿನ ಅವಧಿಯಲ್ಲಿ ಜಲ ಸಂಪತ್ತು ಸದ್ಭಳಕೆಗೆ ಒತ್ತು ಕೊಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಜಲಶಕ್ತಿ ಸಚಿವಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಕೇಂದ್ರದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂಧನ ವ್ಯವಸ್ಥೆ ಸುಧಾರಣೆಗಾಗಿ ಕೆಲಸ ಮಾಡಲಾಯಿತು. ಪ್ರತಿಯೊಂದು ಹಳ್ಳಿಗೂ ಈಗ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಮುಂದೆ ನೀರಾವರಿಗಾಗಿ ಕೆಲಸ ಮಾಡುತ್ತೇವೆ. ದೇಶದ ಜನತೆಗೆ ಜಲ ಶಕ್ತಿಯ ಮಹತ್ವ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಬಗ್ಗೆ  ಗಮನಹರಿಸಲಾಗುವುದು,  60 ವರ್ಷ ತುಂಬಿದ ರೈತರಿಗೆ ಪಿಂಚಣಿ ಜಾರಿಗೆ ತರುತ್ತೇವೆ. ರೈತರ ಖಾತೆಗೆ ಹಣ ಹಾಕುವ ಪ್ರಧಾನ ಮಂತ್ರಿ ಕಿಸಾನ್  ಸಮ್ಮಾನ್ ಯೋಜನೆಗೆ ಪ್ರಸ್ತುತ ಸಣ್ಣ ರೈತರನ್ನು ಮಾತ್ರ ಪರಿಗಣಿಸುತ್ತಿದ್ದು, ಮುಂದೆ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ರೈತರಿಗೂ ಆರ್ಥಿಕ ನೆರವು ನೀಡಲಾಗುವುದು ಎಂದು ಮೋದಿ ಘೋಷಿಸಿದರು.

ಕಾಂಗ್ರೆಸ್ ವಂಶವಾದ, ಭ್ರಷ್ಟಾಚಾರವನ್ನು ಪ್ರೇರೇಪಿಸುವ ಶಿಷ್ಟಾಚಾರ ಪರಂಪರೆ ಹೊಂದಿದೆ. ಜತೆಗೆ ಭಯೋತ್ಪಾದನೆ ಪರ ಮತ್ತು ರಾಷ್ಟ್ರವಾದದ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಮೋದಿಯನ್ನು ಟೀಕಿಸುವುದೇ ಇವರ ನಿಜವಾದ ಗುರಿಯಾಗಿದ್ದು, ದೆಹಲಿಯಲ್ಲಿ ಅಪ್ಪಿ ತಪ್ಪಿಯೂ ದುರ್ಬಲ ಸರ್ಕಾರ ಬರಬಾರದು. ದೇಶವನ್ನು ತುಂಡು ತುಂಡು ಮಾಡಿದವರ ಸರ್ಕಾರ ಬರಬಾರದು. ದೇಶದಲ್ಲಿ ಸದೃಢ ಸರ್ಕಾರ ಆಡಳಿತ ನೀಡಿದ್ದು, ನಿಮಗೆ ಸಂತಸ ಇರಬಹುದು ಅಲ್ಲವೆ ಎಂದು ಪ್ರಶ್ನಿಸಿದರು.

ಮತಕ್ಕಾಗಿ ಸೇನಾ ದಾಳಿಯ ಬಗ್ಗೆ ಸಾಕ್ಷಿ ಕೇಳುತ್ತಾರೆ. ಆದರೆ ನಾವು ನೀಡಿದ ಸಾಕ್ಷಿಯನ್ನು ಕಾಂಗ್ರೆಸ್ ನಂಬುವುದಿಲ್ಲ. ಪಾಕಿಸ್ತಾನದ ಸಾಕ್ಷಿಯನ್ನು ನಂಬುತ್ತಾರೆ. ಕಾಂಗ್ರೆಸ್ ದೇಶದ್ರೋಹಿ ಕಾನೂನು ರದ್ದುಪಡಿಸಲು ಹೊರಟಿದೆ. ಇಂತಹವರಿಗೆ ಮತದಾರರು ಪಾಠ ಕಲಿಸಬೇಕು ಎಂದು ಮೋದಿ ಕರೆ ನೀಡಿದರು.

ಹೊಟ್ಟೆ ತುಂಬಿಸಿಕೊಳ್ಳಲು ಸೇನೆಗೆ ಸೇರುತ್ತಾರೆ ಎಂದು ಇಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಭಾಷೆಯನ್ನು ನೀವು ಒಪ್ಪುತ್ತೀರಾ. ಅವರು ಎಂತಹ ನೀಚ ಭಾಷೆ ಬಳಸಿದ್ದಾರೆ. ಸ್ವಾಭಿಮಾನಿ ನಾಗರಿಕರು ಈ ಭಾಷೆಯನ್ನು ಒಪ್ಪುವುದಿಲ್ಲ.  ಇದು ಸೇನೆ, ಸೈನಿಕರಿಗೆ ಮಾಡಿದ ಅಪಮಾನವಲ್ಲವೇ. ಇಂತಹವರನ್ನು ಸಾರ್ವಜನಿಕ ಜೀವನದಿಂದ ಮತದಾರರು ದೂರ ಇಡಬೇಕು ಎಂದರು.

ಕೇಂದ್ರದಲ್ಲಿ ಆಡಳಿತ ನಡೆಸಿದ ನಾವು ನಕ್ಸಲೀಯರು, ಭಯೋತ್ಪಾದಕರನ್ನು ಬಗ್ಗು ಬಡಿದಿದ್ದೇವೆ.ಮೊದಲ ಬಾರಿ ಮತಹಾಕುವವರ ಆಕಾಂಕ್ಷೆಗಳನ್ನು ಈಡೇರಿಸಲಾಗುವುದು. ರೈತರು, ಮಧ್ಯಮ ವರ್ಗದವರ ಹಿತ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp