ಕಾಂಗ್ರೆಸ್-ಜೆಡಿಎಸ್ ಮತಬ್ಯಾಂಕ್ ಬಾಗಲಕೋಟೆಯಲ್ಲಿದೆಯೋ, ಬಾಲಾಕೋಟ್‌ನಲ್ಲಿದೆಯೋ: ಮೋದಿ

ಸ್ವಂತ ಹಿತಾಸಕ್ತಿ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಗೆ ರಾಷ್ಟ್ರೀಯ ಹಿತಾಸಕ್ತಿಯಿಲ್ಲ. ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ವಾಯು ದಾಳಿಯನ್ನು ಪ್ರಶ್ನಿಸುತ್ತಿವೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ಬಾಗಲಕೋಟೆ: ಸ್ವಂತ ಹಿತಾಸಕ್ತಿ ಹೊಂದಿರುವ ಕಾಂಗ್ರೆಸ್-ಜೆಡಿಎಸ್ ಗೆ ರಾಷ್ಟ್ರೀಯ ಹಿತಾಸಕ್ತಿಯಿಲ್ಲ. ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆದ ವಾಯು ದಾಳಿಯನ್ನು ಪ್ರಶ್ನಿಸುತ್ತಿವೆ. ಇವರ ಮತಬ್ಯಾಂಕ್ ಬಾಗಲಕೋಟೆಯಲ್ಲಿದೆಯೋ ಇಲ್ಲವೆ ಬಾಲಾಕೋಟ್ ನಲ್ಲಿದೆಯೋ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. 
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಬಾಲಾಕೋಟ್ ಮೇಲೆ ದಾಳಿ ನಡೆದಾಗ ಪಾಕಿಸ್ತಾನ ಮಲಗಿತ್ತು. ಆದರೆ ಬೆಳಗ್ಗೆ ಪಾಕ್ ಟ್ವೀಟ್ ಮೂಲಕ ಈ ದಾಳಿಯನ್ನು ಒಪ್ಪಿಕೊಂಡಿತ್ತು. ಆದರೆ, ಮಹಾಮೈತ್ರಿ ಮಾಡಿಕೊಂಡಿರುವ ಇವರು ದಾಳಿ ನಡೆದಿಲ್ಲ, ದಾಳಿ ನಡೆದಿದ್ದರೆ ಪುರಾವೆ ಒದಗಿಸಿ ಎನ್ನುತ್ತಿದ್ದಾರೆ. ಇದು ಅವರ ರಾಷ್ಟ್ರೀಯ ಹಿತಾಸಕ್ತಿಯನ್ನು ಬಂಬಿಸುತ್ತದೆ ಎಂದರು. 
ಹಿಂದಿನ ಸರ್ಕಾರ ಪಾಕಿಸ್ತಾನ ವಿಚಾರದಲ್ಲಿ ಮೃದು ಧೋರಣೆ ತಳೆದಿತ್ತು. ಆದರೆ ನಮ್ಮ ಸರ್ಕಾರ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆ ನೀಡಿದೆ. ಆದರೆ ಕಾಂಗ್ರೆಸ್ ಈ ದೇಶಕ್ಕಾಗಿ ಏನು ಕೊಟ್ಟಿದೆ? ನಾವು ಪಾಕ್ ವಿರುದ್ಧದ ದಾಳಿ ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದಾಗಿ ಕಾಂಗ್ರೆಸ್ ನವರು ಟೀಕೆ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನದವರು  ಮೋದಿ ನಮಗೆ ಹೊಡೆಯುತ್ತಾರೆ, ನಮ್ಮನ್ನು ರಕ್ಷಿಸಿ ರಕ್ಷಿಸಿ ಎಂದು ಮೊರೆಯಿಡುತ್ತಿದ್ದಾರೆ. ನಮ್ಮದು ಸಮರ್ಥ ಸರ್ಕಾರ  ಎಂದು ಮೋದಿ ಹೇಳಿಕೊಂಡರು. 
ದೇಶದ ಸುರಕ್ಷತೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ನೀಡಿದ ಕರೆಗೆ ದೇಶದ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಆದರೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ  ಕಣಿವೆ ರಾಜ್ಯಕ್ಕೆ ಪ್ರತ್ಯೇಕ ಪ್ರಧಾನಿ ಹುದ್ದೆ ಬೇಕು ಎಂತ ಕೇಳುತ್ತಿದ್ದಾರೆ. ದೇಶದಲ್ಲಿ ಎರಡು ಪ್ರಧಾನಿ ಹುದ್ದೆ ಸೃಷ್ಟಿಸಲು ಸಾಧ್ಯವೇ ಎಂದು ಸಭಿಕರನ್ನು ಮೋದಿ ಪ್ರಶ್ನಿಸಿದರು. 
ಕರ್ನಾಟದಲ್ಲಿ ಅಭಿವೃದ್ದಿ ಮಾಡುವ ಕಾರ್ಯಸೂಚಿಯೊಂದಿಗೆ ಇಲ್ಲಿಗೆ ಆಗಮಿಸಿದ್ದೇನೆ. ಆದರೆ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ತನ್ನ ಜವಾಬ್ದಾರಿ ಮರೆತಿದೆ. ಮುಖ್ಯಮಂತ್ರಿ ಅಳುತ್ತಿದ್ದರೆ, ಸಚಿವರು ಎಷ್ಟು ಸಾಧ್ಯವೋ ಅಷ್ಟು ದೋಚಿಕೊಂಡು ಹೋಗೋಣ ಎನ್ನುವ ನಿಲುವಿನಲ್ಲಿದ್ದಾರೆ. ಇಂತಹ ದುರ್ಬಲ ಸರ್ಕಾರವೇ ದೆಹಲಿ ಕಾಂಗ್ರೆಸ್ ನಾಯಕರಿಗೆ ಬೇಕಾಗಿದೆ. ಇಲ್ಲಿನ ಮೈತ್ರಿ ನಾಯಕರು ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಸ್ವಲ್ಪ ದಿನಗಳಲಿ ಈ ಭಾವನೆಗಳು ಸಹ ಸಾಯಲಿವೆ. ಈ ಮೈತ್ರಿ ಸರ್ಕಾರಕ್ಕೆ ದೀರ್ಘ ಅವಧಿ ಇಲ್ಲ ಎಂದು ಭವಿಷ್ಯ ನುಡಿದರು. 
ರಾಜ್ಯದಲ್ಲಿ ಸಾಲ ಮನ್ನಾ ಪರಿಸ್ಥಿತಿ ಏನಾಗಿದೆ ಎಂಬುದು ನಿಮಗೆ ಗೊತ್ತಿದೆ. ಹೀಗಾಗಿ ಬಲಿಷ್ಠ ಮುಖ್ಯಮಂತ್ರಿಯಂತೆ ಬಲಿಷ್ಠ ಪ್ರಧಾನಿ ಅಗತ್ಯವಿದೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದಂತೆ, ಕಳೆದ ಐದು ವರ್ಷಗಳ ಹಿಂದೆ ದೆಹಲಿಯಲ್ಲೂ ಇಂತಹದ್ದೇ ಸರ್ಕಾರ ಅಧಿಕಾರದಲ್ಲಿತ್ತು. ವಿಚಿತ್ರ ಎಂದರೆ ಇಲ್ಲಿಯೂ ಹಾಗೆಯೇ ಇದೆ. ರಾಜ್ಯದಲ್ಲಿ ನಾಟಕೀಯ ಸರ್ಕಾರವಿದೆ. ರಿಮೋಟ್ ಕಂಟ್ರೋಲ್ ನಿಂದ ಸರ್ಕಾರ ನಡೆಯುತ್ತಿದೆ. ದೆಹಲಿ ಕಾಂಗ್ರೆಸ್ ಗೂ ಕೂಡ ಇಂತಹದ್ದೇ ಸರ್ಕಾರ ಬೇಕಾಗಿದೆ ಎಂದರು. 
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ದೇಶ ಆಳಿತು. ಆದರೆ ಆ ಸರ್ಕಾರ ಅತ್ಯಂತ ದುರ್ಬಲವಾಗಿತ್ತು. ೨ಜಿ, ಕಾಮನ್ ವೆಲ್ತ್ ಸೇರಿದಂತೆ ಹಲವಾರು ಹಗರಣಗಳಲ್ಲಿ ಭಾಗಿಯಾಗಿತ್ತು. ಇದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಒಂದಲ್ಲಾ ಹಲವು ಹಗರಣಗಳು ನಡೆದಿದ್ದವು. ಆದರೆ ಈಗ ಕಾಂಗ್ರೆಸ್ ತನ್ನ  ಡೋಕ್ಲಾಸ್ ಪತ್ರ ಅಂದರೆ ಪ್ರಣಾಳಿಕೆಯಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಇದನ್ನು ನಂಬಬೇಡಿ ಎಂದು ಹೇಳಿದರು. 
ಆದರೆ ಐದು ವರ್ಷಗಳ ಹಿಂದೆ ಕೇಂದ್ರದಲ್ಲಿ ಸಮರ್ಥ ಸರ್ಕಾರ ಅಧಿಕಾರಕ್ಕೆ ಬಂತು. ಜನರಿಗೆ ಇದೀಗ ಯಾವ ಸರ್ಕಾರ ಸೂಕ್ತ ಎಂದು ತೀರ್ಮಾನಿಸಲು ಬಿಜೆಪಿ ನೇತೃತ್ವದ ಎನ್ ಡಿಎ ಪರ್ಯಾಯವಾಗಿದೆ. ಮೇ ೨೩ ರಂದು ಬರುವ ಫಲಿತಾಂಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.  
ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಅದರಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕ್ಷೇತ್ರದ ಅತಿದೊಡ್ಡ ಯೋಜನೆಯಾಗಿದೆ. ಮಧ್ಯಮ ವರ್ಗದವರಿಗೆ ಐದು ಲಕ್ಷ ರೂ ವರೆಗೆ ಆದಾಯ ತೆರಿಗೆ ವಿನಾಯಿತಿ ನೀಡುವ ಮೂಲಕ ಹಲವು ಉತ್ತಮ ಕೆಲಸಗಳಿಗೆ ಬುನಾದಿ ಹಾಕಿದ್ದೇವೆ. ಹಿಂದುಳಿದ ವರ್ಗದವರಿಗೆ ಅನ್ಯಾಯವಾಗದಂತೆ ಶೇ ೧೦ ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ. ಸಾಕಷ್ಟು ಉತ್ತಮ ರೀತಿಯಲ್ಲಿ ಆರ್ಥಿಕ ಸುಧಾರಣೆಗಳಾಗಿವೆ. ಉತ್ತಮ ಆಡಳಿತದಿಂದ ಜನಮನ ಗೆದ್ದಿದ್ದೇವೆ ಎಂದರು. 
ಇದು ಬಸವಣ್ಣನ ನಾಡು. ಇಡೀ ದೇಶಕ್ಕೆ ಬಸವಣ್ಣನ ಆಶಿರ್ವಾದ ದೊರೆತ ಬೀಡು ಇದಾಗಿದ್ದು, ಅನುಭವ ಮಂಟಪವನ್ನು ನೀಡಿದ ಪುಣ್ಯ ಭೂಮಿ ಇದು ಎಂದು ಶ್ಲಾಘಿಸಿದರು. ಬಸವಣ್ಣ ಪ್ರಜಾಪ್ರಭುತ್ವವಾದಿ. ಅವರ ಚಿಂತನೆಗಳನ್ನು ದೇಶದಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು. 
ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ಮತ್ತಿತರ ಮುಖಂಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com