ರಾಜ್ಯದ 14 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ, 241 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ

ರಾಜ್ಯದ ದಕ್ಷಿಣ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೆಲವು ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು...

Published: 18th April 2019 12:00 PM  |   Last Updated: 18th April 2019 09:07 AM   |  A+A-


Voting ends peacefully for first phase of Lok Sabha polls in Karnataka

ಮಂಡ್ಯದಲ್ಲಿ ಹಕ್ಕು ಚಲಾಯಿಸಿದ ಅಜ್ಜಿಯರು

Posted By : LSB LSB
Source : UNI
ಬೆಂಗಳೂರು: ರಾಜ್ಯದ ದಕ್ಷಿಣ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕೆಲವು ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ.

ಉರಿಬಿಸಿಲಿನ ನಡುವೆಯೂ ಮತದಾರರು ಉತ್ಸಾಹಭರಿತರಾಗಿ ತಮ್ಮ ಹಕ್ಕು ಚಲಾಯಿಸಿದರು. ಕಾಂಗ್ರೆಸ್‍- ಜೆಡಿಎಸ್ ಮೈತ್ರಿಕೂಟದ 14 ಹಾಗೂ ಬಿಜೆಪಿಯ 13 ಅಭ್ಯರ್ಥಿಗಳು ಸೇರಿದಂತೆ  ಒಟ್ಟಾರೆ 241 ಉಮೇದುವಾರರ ರಾಜಕೀಯ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.

ಬೆಂಗಳೂರು, ಹಾಸನ, ಮಂಡ್ಯ ಸೇರಿದಂತೆ ಹಲವೆಡೆ ಮತಯಂತ್ರಗಳು ಸ್ಥಗಿತಗೊಂಡು ಮತದಾರರು ಮತ್ತು ಚುನಾವಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಜಾನೆಯಿಂದಲೇ ರಾಜ್ಯದ ಅನೇಕ ಕಡೆಗಳಲ್ಲಿ ಜನಸಾಮಾನ್ಯರು, ವಯೋವೃದ್ಧರು, ವಿಶೇಷ ಚೇತನರು, ಲಿಂಗತ್ವ ಅಲ್ಪಸಂಖ್ಯಾತರು , ರಾಜಕಾರಣಿಗಳು, ಚಿತ್ರನಟರು ಸೇರಿ ಅನೇಕರು ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. ಇದೇ ಮೊದಲ ಬಾರಿಗೆ ಮತಚಲಾಯಿಸುತ್ತಿರುವ ಯುವ ಮತದಾರರು ಅಮಿತೋತ್ಸಾಹದಿಂದ ಮತದಾನ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತ್ತು. 
ಸಂವಿಧಾನದ ಮಹೋತ್ಸವದಂತೆ ಕಂಡು ಬಂದ ಚುನಾವಣೆಯಲ್ಲಿ ಮತಚಲಾಯಿಸಿ ಶಾಯಿ ಗುರುತಿನ ತೋರು ಬೆರಳನ್ನು ತೋರಿಸಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು. 'ನಾನು ಮತದಾನ ಮಾಡಿದ್ದೇನೆ, ನೀವು ಮಾಡಿ' ಎಂದು ಇತರರನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೇರೇಪಿಸಿದ್ದು, ಈ ಬಾರಿಯ ವಿಶೇಷವಾಗಿತ್ತು. 

ದಿವ್ಯಾಂಗ ಮತದಾರರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದರಿಂದ, ಅವರು ನಿರಾತಂಕವಾಗಿ ಮತಚಲಾಯಿಸಲು ಅನುಕೂಲವಾಯಿತು. ಇದರ ಬೆನ್ನಲ್ಲೇ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಚಾಮರಾಜನಗರದ ಸುಲ್ತಾನ್ ಷರೀಫ್ ಸರ್ಕಲ್ ಮತಗಟ್ಟೆಯ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ದುಃಖಕರ ಘಟನೆಯೂ ವರದಿಯಾಗಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಜೊತೆ ಮತ ಚಲಾಯಿಸಿದರು.

ಹಾಸನ ಜಿಲ್ಲೆಯ ಪಡುವಲಹಿಪ್ಪೆ ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪತ್ನಿ ಸಮೇತರಾಗಿ ಮತದಾನ ಮಾಡಿದರು. ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ, ಚಿತ್ರನಟಿ ಸುಮಲತಾ, ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ನಟಿ, ಸಚಿವೆ ಡಾ. ಜಯಮಾಲಾ ಬೆಳಗ್ಗೆಯೇ ಮತಚಲಾಯಿಸಿದರು.

ಮಂಗಳೂರಿನಲ್ಲಿ ಆಗತಾನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂರು ನಾಲ್ಕು ಜೋಡಿಗಳು ಮದುವೆಯ ಪೋಷಾಕಿನಲ್ಲೇ ಮತಕೇಂದ್ರಗಳಿಗೆ ಬಂದು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು. 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬೊಮ್ಮನಹಳ್ಳಿಯ ನವಜೋಡಿ ಲೋಹಿತ್ ಹಾಗೂ ಅನಿತಾ ನೇರವಾಗಿ ಮತಗಟ್ಟೆಗೆ ಬಂದು ಮತಚಲಾಯಿಸಿದರು. ತುಮಕೂರಿನ ಭಾಗ್ಯನಗರದಲ್ಲಿ ನವಜೋಡಿ ಅಪೂರ್ವ ಹಾಗೂ ಪ್ರವೀಣ್ ಕುಮಾರ್ ತಮ್ಮ ಹಕ್ಕು ಚಲಾಯಿಸಿದರು. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ತಾಲೂಕು ಪಂಚಾಯತಿ ಸದಸ್ಯರೊಬ್ಬರು ಮತದಾನ ಮಾಡಿದ ಬಳಿಕವೇ ಹೆಣ್ಣು ಮಗುವಿನ ಜನ್ಮ ನೀಡಿದ್ದಾರೆ.

ಕೆಲವಡೆ ಘರ್ಷಣೆ 
ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದು ಅಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಪೊಲೀಸರು ಸಕಾಲಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿ ಮೀರದಂತೆ ನೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತುಮಕೂರು, ಕೋಲಾರ, ಬೆಂಗಳೂರಿನ ಮಲ್ಲತಹಳ್ಳಿಯ ವಾರ್ಡ್‌ ರಾಜರಾಜೇಶ್ವರಿನಗರದಲ್ಲಿ ಹಣ ಸಾಗಾಣಿಕೆ ಮಾಡಿ ಮತದಾರರಿಗೆ ಹಂಚುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಮಲ್ಲತಹಳ್ಳಿ ವಾರ್ಡ್‌ ರಾಜರಾಜೇಶ್ವರಿನಗರದಲ್ಲಿ ಜನರಿಗೆ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಹಂತದಲ್ಲಿ ಕೆಲ ಕಾಲ ಅಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಾಸನ, ಮಂಡ್ಯ, ತುಮಕೂರು, ಶಿವಮೊಗ್ಗ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಪ್ರಮುಖ ಗಮನ ಸೆಳೆದಿವೆ. ಮಂಡ್ಯ ಜಿಲ್ಲೆಯ ಪಣ್ಣೆದೊಡ್ಡಿಯಲ್ಲಿ ಮತಯಂತ್ರ ಸ್ಥಗಿತಗೊಂಡು ಮತದಾರರು ಮತ್ತು ಚುನಾವಣಾ ಸಿಬ್ಬಂದಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿಯಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿದೆ ಎಂದು ನೂರಾರು ಜನರು ಮತಗಟ್ಟೆಗಳ ಮುಂದೆ ಅಸಮಾಧಾನ, ಆಕ್ರೋಶ ತೋಡಿಕೊಂಡ ಘಟನೆ ಕೂಡ ಜರುಗಿದೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp