ರಾಹುಲ್ ಗಾಂಧಿ ಪ್ರಧಾನಿಯಾದರೆ ಸಹಕಾರ ನೀಡುತ್ತೇನೆ: ಹೆಚ್ ಡಿ ದೇವೇಗೌಡ

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರಂತೆ ತಾವು ರಾಜಕೀಯದಿಂದ ಯಾವತ್ತಿಗೂ ನಿವೃತ್ತಿ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರಂತೆ ತಾವು ರಾಜಕೀಯದಿಂದ ಯಾವತ್ತಿಗೂ ನಿವೃತ್ತಿ ಹೊಂದುವುದಿಲ್ಲ, ರಾಹುಲ್ ಗಾಂಧಿ ದೇಶದ ಪ್ರಧಾನಿಯಾದರೆ ಅವರ ಪರವಾಗಿ ನಿಲ್ಲುತ್ತೇನೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ ಅವರು, ಲೋಕಸಭಾ ಚುನಾವಣೆಗೆ ಈ ಬಾರಿ ತಾವು ಸ್ಪರ್ಧಿಸಿದ ಬಗ್ಗೆ ಕೂಡ ಮಾತನಾಡಿದರು. ಮೂರು ವರ್ಷದ ಹಿಂದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈ ಬಾರಿ ನಾನು ಒತ್ತಾಯಪೂರ್ವಕವಾಗಿ ಸ್ಪರ್ಧಿಸುವ ಸಂದರ್ಭ ಒದಗಿ ಬಂತು. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನನಗೆ ಈ ಸಂದರ್ಭದಲ್ಲಿ ಯಾವುದೇ ಆಸೆ-ಆಕಾಂಕ್ಷೆಗಳಿಲ್ಲ. ಆದರೆ ನಾನು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.
ದೇವೇಗೌಡರು ಕರ್ನಾಟಕದ ತುಮಕೂರು ಕ್ಷೇತ್ರದಿಂದ ಬಿಜೆಪಿಯ ಜಿಎಸ್ ಬಸವರಾಜು ವಿರುದ್ಧ ಸ್ಪರ್ಧಿಸಿದ್ದಾರೆ. ಅಡ್ವಾಣಿಯವರಂತೆ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸುತ್ತೀರಾ ಎಂದು ಕೇಳಿದಾಗ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನಾನು ನನ್ನ ಪಕ್ಷವನ್ನು ಮತ್ತು ಕಚೇರಿ ಕಟ್ಟಡವನ್ನು ಕೊನೆಯ ತನಕವೂ ಕಾಪಾಡಲು ಬಯಸುತ್ತೇನೆ ಎಂದರು.
ಈ ಬಾರಿ ದೇವೇಗೌಡರು ಮಹಾಘಟಬಂಧನ ಸಹಮತದ ಅಭ್ಯರ್ಥಿಯಾಗಿ ಪ್ರಧಾನಿಯಾಗುವ ಸಂದರ್ಭ ಒದಗಿಬರುವ ಸಾಧ್ಯತೆಯಿದೆ ಎಂದು ಪುತ್ರ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ಬಗ್ಗೆ ಯೋಚಿಸಲು ಹೋಗಿಲ್ಲ. ಮೋದಿಯವರು ಸಂಸತ್ತಿಗೆ ಬರುವುದರ ಬಗ್ಗೆ ನನಗೆ ಆತಂಕವಿದೆ. ನಾನಿದನ್ನು ಸ್ವತಃ ಪ್ರಧಾನಿಯವರ ಮುಂದೆಯೇ ಹೇಳುವ ತಾಕತ್ತು ಮತ್ತು ಧೈರ್ಯ ಹೊಂದಿದ್ದೇನೆ. ರಾಹುಲ್ ಗಾಂಧಿಯವರು ಪ್ರಧಾನಿಯಾದರೆ ಅವರ ಪರವಾಗಿ ಪಕ್ಕದಲ್ಲಿ ನಿಲ್ಲುತ್ತೇನೆ. ಪ್ರಧಾನಿಯಾಗಲೇಬೇಕೆಂಬ ಅನಿವಾರ್ಯತೆಯೇನು ಇಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬದ್ಧತೆ ಬಗ್ಗೆ ಕೂಡ ಮಾತನಾಡಿದರು. ನಾವು ಸಣ್ಣ ಪಕ್ಷವಾದರೂ ಕೂಡ ನಮಗೆ ಬೆಂಬಲ ನೀಡುವ ನಿರ್ಧಾರವನ್ನು ಸೋನಿಯಾ ಗಾಂಧಿ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ಜೊತೆ ಮುಂದುವರಿಯುವುದು ನನ್ನ ಹೊಣೆಯಾಗಿದೆ. ಆದರೆ ನಾನು ಒಪ್ಪಿದರೂ ಕೂಡ ಕೆಲವು ರಾಜ್ಯಗಳಲ್ಲಿ ಮೈತ್ರಿಯಾಗಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮಧ್ಯೆ ಮೈತ್ರಿಯಿದ್ದು ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿ ಹೊಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com