ಗುಜರಾತ್ ನಲ್ಲೇ ಮೋದಿ ಸರ್ಕಾರ ತೊಲಗಬೇಕು ಎನ್ನುತ್ತಿದ್ದಾರೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತೊಲಗಬೇಕೆಂದು ದೇಶದ ಜನತೆಯಷ್ಟೇ ಅಲ್ಲ, ಸ್ವತಃ ಮೋದಿ ತವರು ರಾಜ್ಯ ಗುಜರಾತ್....
ರಾಯಚೂರಿನಲ್ಲಿ ಮೈತ್ರಿ ಪಕ್ಷದ ನಾಯಕರು
ರಾಯಚೂರಿನಲ್ಲಿ ಮೈತ್ರಿ ಪಕ್ಷದ ನಾಯಕರು
ರಾಯಚೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತೊಲಗಬೇಕೆಂದು ದೇಶದ ಜನತೆಯಷ್ಟೇ ಅಲ್ಲ, ಸ್ವತಃ ಮೋದಿ ತವರು ರಾಜ್ಯ ಗುಜರಾತ್ ನಲ್ಲೂ ಈ ಬಗ್ಗೆ ಕೂಗೆದ್ದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. 
ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಯಾವುದೇ ಭಾಗಕ್ಕೆ ಹೋಗಿ ಚೌಕಿದಾರ್ ಎಂದು ಹೇಳಿದರೆ " ಚೋರ್ ಹೈ " ಎಂಬ ಘೋಷಣೆ ಮೊಳಗುತ್ತದೆ. ಈ ಹಿಂದೆ ಅಚ್ಚೆ ದಿನ್ ಎಂದು ಹೇಳುತ್ತಿದ್ದರು, ಈಗ ಚೋರ್ ಎಂದು ಹೇಳುತ್ತಿದ್ದಾರೆ. ಗುಜರಾತ್ ನಲ್ಲಿ ಉದ್ಯಮಿ ಅದಾನಿ ಗ್ರೂಪ್ ಅಲ್ಲಿನ ರೈತರ ಜಮೀನು ಕಬಳಿಸುತ್ತಿರುವ ಬಗ್ಗೆ ಜನರಲ್ಲಿ ಭಾರೀ ಆಕ್ರೋಶವಿದೆ. ಇವತ್ತು ಗುಜರಾತ್ ನಿಂದ ಇಲ್ಲಿಗೆ ಆಗಮಿಸಿದ್ದೇನೆ. ಅಲ್ಲಿನ ಜನತೆ ಮೋದಿ ಸರ್ಕಾರ ಮೊದಲು ತೊಲಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು. 
ಮೋದಿ ಆಡಳಿತದ ಐದು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನೋಟು ಅಮಾನ್ಯೀಕರಣದಿಂದ ಸಣ್ಣ ಉದ್ದಿಮೆಗಳು ಮುಚ್ಚುವಂತಾಯಿತು. ಇದರಿಂದ ಅಸಂಖ್ಯಾತ ಉದ್ಯೋಗ ನಷ್ಟವಾಯಿತು. ಪ್ರತಿ ದಿನದ ಲೆಕ್ಕದಲ್ಲಿ ಅಲ್ಲ. ಪ್ರತಿ ಗಂಟೆ ಲೆಕ್ಕದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಭೀತಿ ಆವರಿಸಿದೆ. 42 ವರ್ಷಗಳಲ್ಲೇ ಅತ್ಯಂತ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ. ರಫೆಲ್ ವಿಮಾನದ ಖರೀದಿ ಒಪ್ಪಂದದಲ್ಲಿ ಅನಿಲ್ ಅಂಬಾನಿ ಅವರಿಗೆ ಮಹತ್ವ ನೀಡಿದ್ದು ಯಾಕೆ? ಎಚ್ ಎ ಎಲ್ ನಿಂದ ಗುತ್ತಿಗೆಯನ್ನು ಕಿತ್ತುಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿದರು. 
ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್ ಟಿ ಯಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ನಾವು ಅಧಿಕಾರಕ್ಕೆ ಬಂದಲ್ಲಿ ಗಬ್ಬರ್ ಸಿಂಗ್ ತೆರಿಗೆಯನ್ನು ಸರಳಗೊಳಿಸಿ, ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸುತ್ತೇವೆ. ನ್ಯಾಯ್ ಯೋಜನೆ ಮೂಲಕ ಬಡವರ ಖಾತೆಗೆ ಪ್ರತಿ ವರ್ಷ 72 ಸಾವಿರ ರೂ ಜಮೆ ಮಾಡುತ್ತೇವೆ. ಇದಕ್ಕಾಗಿ ಹಣ ಎಲ್ಲಿಂದ ತರುತ್ತೀರಿ ಎಂದು ಕೇಳುತ್ತಿದ್ದಾರೆ. ಅಂಬಾನಿ, ಅದಾನಿ, ಮೆಹುಲ್ ಚೋಕ್ಸಿಯಂತಹ ಕಳ್ಳರಿಂದ ಕಿತ್ತು ಬಡವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ. ಚೌಕಿದಾರ್ ಪ್ರಧಾನಿ ಮೋದಿ ಅನಿಲ್ ಅಂಬಾನಿ, ಮೆಹುಲ್ ಚೋಕ್ಸಿ, ಅದಾನಿ ಅವರಿಗೆ ಸಹಸ್ರಾರು ಕೋಟಿ ರೂ ನೀಡಿದರು. ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಮೋದಿ ಸರ್ಕಾರ ಐದು ವರ್ಷಗಳಲ್ಲಿ ಅನ್ಯಾಯ ಮಾಡಿದೆ. ಅದಕ್ಕಾಗಿ ನ್ಯಾಯ್ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದರು. 
ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮೆ ಮಾಡುವ ಭರವಸೆ ನೀಡಿದ್ದರು. ಆ ಭರವಸೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನಾವು ರೈತರು ಮತ್ತು ಬಡವರ ಪರವಾಗಿ ಆಡಳಿತ ನಡೆಸುತ್ತೇವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ರಾಜ್ಯದ ಮೈತ್ರಿ ಸರ್ಕಾರ ಕೂಡ 40 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡುತ್ತಿದೆ. ಆದರೆ ಮೋದಿ ಅನಿಲ್ ಅಂಬಾನಿ ಅವರಿಗೆ 30 ಸಾವಿರ ಕೋಟಿ ರೂ, ಮೆಹುಲ್ ಚೌಕ್ಸಿ ಮತ್ತಿತರ ಉದ್ಯಮಿಗಳಿಗೆ ಸಹಸ್ರಾರು ಕೋಟಿ ರೂ ನೀಡಲು ಸಾಧ್ಯವಿರುವಾಗ ನಾವು ರೈತರು ಮತ್ತು ಬಡವರ ಖಾತೆಗೆ ಹಣ ಜಮೆ ಮಾಡಲು ಸಾಧ್ಯವಿಲ್ಲವೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. 
ನೀರವ್ ಮೋದಿ, ಚೋಕ್ಸಿ, ಮಲ್ಯ ಸಾಲ ಪಾವತಿಸದೇ ವಿದೇಶಗಳಿಗೆ ಪರಾರಿಯಾಗಿದ್ದಾರೆ. ಆದರೆ ಇಲ್ಲಿನ ರೈತರು 50 ಸಾವಿರ ರೂ ಸಾಲ ಪಾವತಿಸದಿದ್ದರೆ ಜೈಲಿಗೆ ಹಾಕಲಾಗುತ್ತಿದೆ. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ದೇಶದ ಯಾವುದೇ ರೈತ ಸಾಲ ಪಾವತಿಸದಿದ್ದರೆ ಜೈಲಿಗೆ ಹಾಕದಂತೆ ಕಾನೂನು ಜಾರಿಗೆ ತರಲಾಗುವುದು ಎಂದರು. 
ಪ್ರಧಾನಿ ಮೋದಿ ರಾಷ್ಟ್ರವಾದದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಯುವ ಜನತೆ ಉದ್ಯೋಗದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಾವು ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇವೆ. ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 22 ಲಕ್ಷ ಉದ್ಯೋಗಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ವಾಗ್ದಾನ ನೀಡಿದರು.
ನಾವು ಸುಳ್ಳು ಹೇಳಲು ಬಂದಿಲ್ಲ. ದೇಶದಲ್ಲಿ ಒಂದು ಕಡೆ ಪ್ರೀತಿ, ಮಮತೆ, ಸತ್ಯ, ನ್ಯಾಯವಿದ್ದರೆ ಮತ್ತೊಂದೆಡೆ ದ್ವೇಷ, ಆಕ್ರೋಶ, ಪರಸ್ಪರ ವಿಭಜಿಸುವ ಶಕ್ತಿಗಳಿವೆ. ಈ ಬಗ್ಗೆ ಎಚ್ಚರಿಕೆಯಿಂದಿರುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com