ಕೇವಲ 7 ಸೀಟುಗಳಲ್ಲಿ ಸ್ಪರ್ಧಿಸಿ ದೇವೇಗೌಡರು ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ: ಯಡಿಯೂರಪ್ಪ ವ್ಯಂಗ್ಯ

ಕಾಂಗ್ರೆಸ್ ನಾಯಕ ಮತ್ತು ಗೃಹ ಸಚಿವ ಎಂ ಬಿ ಪಾಟೀಲ್ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ...
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
ಶಿವಮೊಗ್ಗ: ಕಾಂಗ್ರೆಸ್ ನಾಯಕ ಮತ್ತು ಗೃಹ ಸಚಿವ ಎಂ ಬಿ ಪಾಟೀಲ್ ಅವರು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಲಿಂಗಾಯತ ಧರ್ಮದ ಇಬ್ಭಾಗದ ಕುರಿತು ಪ್ರಸ್ತಾಪಿಸಿದ್ದರು. ಇದು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಪಕ್ಷ ನಡೆಸಿದ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿ, ಸೋನಿಯಾ ಗಾಂಧಿಯವರು ಈ ಪಿತೂರಿಯಲ್ಲಿ ಭಾಗಿಯಾಗಿದ್ದು ಅಚ್ಚರಿಯನ್ನುಂಟುಮಾಡುತ್ತಿದೆ. ಪತ್ರದಲ್ಲಿ ಪಾಟೀಲ್ ಅವರು, ನೀವು ಸಲಹೆ ನೀಡಿದಂತೆ ಎಂಬ ಒಕ್ಕಣೆಯಿಂದ ಆರಂಭಿಸಿದ್ದು ನೋಡಿದರೆ ಈ ವಿಚಾರದಲ್ಲಿ ಸೋನಿಯಾ ಗಾಂಧಿಯವರೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.
ಒಂದು ರಾಷ್ಟ್ರಪಕ್ಷದ ಮುಖ್ಯಸ್ಥೆಯಾಗಿ ಮತ್ತು ನೆಹರೂ ಮನೆತನದ ಪರಂಪರೆ ಇರುವವರು ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದು. ಕಾಂಗ್ರೆಸ್ ನವರಿಗೆ ಇಂತಹ ಪಿತೂರಿ ಹೊಸದಲ್ಲವಾದರೂ ಕೂಡ ನಾವು ನೆಹರೂ ಮತ್ತು ಅವರ ಕುಟುಂಬದ ಬಗ್ಗೆ ಗೌರವ ಹೊಂದಿದ್ದು, ಅವರ ಮನೆತನದ ಗೌರವವನ್ನು ಸೋನಿಯಾ ಗಾಂಧಿಯವರು ಕಾಪಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಡೈರಿ ವಿಚಾರ ಪ್ರಸ್ತಾಪಿಸಿದಾಗ ಅದರಲ್ಲಿ ಸಣ್ಣ ಮಟ್ಟದಲ್ಲಿ ಕೂಡ ಸತ್ಯಾಂಶವಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಅಧಿಕಾರಿಗಳು ಮತ್ತು ತಜ್ಞರು ನನ್ನ ಸಹಿ ಮತ್ತು ಕೈಬರಹವನ್ನು ತಪಾಸಣೆ ನಡೆಸಿದ್ದು ಅದು ನನ್ನ ಸಹಿಯಲ್ಲ ಎಂದು ಗೊತ್ತಾಗಿದೆ. ನಿಜ ಹೇಳಬೇಕೆಂದರೆ ಅದು ಡೈರಿಯೇ ಅಲ್ಲ, 2-3 ಬಿಡಿ ಹಾಳೆಗಳು ಎಂದರು.
ಮಂಡ್ಯ ಜಿಲ್ಲೆಯ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಅಲ್ಲಿ ಸುಮಲತಾ ಅಂಬರೀಷ್ ಉತ್ತಮ ಸ್ಪರ್ಧೆ ನೀಡಿದ್ದು ಅವರೇ ಗೆಲುವು ಸಾಧಿಸುತ್ತಾರೆ. ಸಿಎಂ ಕುಮಾರಸ್ವಾಮಿ ಒಂದು ವಾರ ಕಾಲ ಮಂಡ್ಯದಲ್ಲಿ ಪ್ರಚಾರ ನಡೆಸಿದರು. ನಂತರ ಮಾನಸಿಕ ಸಮತೋಲನ ಕಳೆದುಕೊಂಡು ಹೋದಲ್ಲೆಲ್ಲಾ ಅವಿವೇಕದ ಮಾತುಗಳನ್ನಾಡುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com